ಸಿದ್ದಾಪುರ, ಜೂ. 27: ಅರಣ್ಯ ಉಳಿಯಬೇಕು... ವನ್ಯಜೀವಿಗಳು ಸ್ವಚ್ಛಂದವಾಗಿರಬೇಕು ಎಂಬದು ಕೇವಲ ಪರಿಸರವಾದಿಗಳ ವಿಚಾರವಲ್ಲ. ನಿಸರ್ಗದ ನಡುವೆ ಬದುಕುತ್ತಿರುವ ಕೊಡಗಿನ ಬಹುತೇಕ ಜನತೆಯ ಆಶಾಭಾವನೆಯೂ ಇದು. ಗಾತ್ರದಲ್ಲಿ ಇರುವೆಯಲ್ಲ... ಭಾರೀ ಗಾತ್ರದ ಹೆಣ್ಣಾನೆಗಳ ಹಾಗೂ ಮರಿಯಾನೆಗಳ ದುರಂತ ಅಂತ್ಯದ ಸನ್ನಿವೇಶ ಯಾರಿಗೂ ಛೇ... ಎಂತಹ ಪರಿಸ್ಥಿತಿ ಇದು ಎಂಬ ನೋವಿನ ಭಾವನೆ ಮೂಡಿಸಿಯೇ ಮೂಡಿಸುತ್ತವೆ.

ಒಂದಲ್ಲ... ಎರಡಲ್ಲ... ನಾಲ್ಕು ಆನೆಗಳು ಒಂದೆಡೆಯಲ್ಲಿ ಸತ್ತ್ತು ಬಿದ್ದಿದ್ದರೆ... ಈ ಚಿತ್ರಣವನ್ನು ಒಮ್ಮೆ ಊಹಿಸಿ ನೋಡಿ... ಕಲ್ಪನೆಯಲ್ಲೂ ಇದೊಂದು ದಾರುಣ ಸನ್ನಿವೇಶ.

ವಿದ್ಯುತ್ ಸ್ಪರ್ಶದಿಂದ ನಾಲ್ಕು ಹೆಣ್ಣು ಕಾಡಾನೆಗಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸಮೀಪದ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.

ಕಣ್ಣಂಗಾಲ ಗ್ರಾಮದ ಯಡೂರು ಎಂಬಲ್ಲಿನ ಬೊಪ್ಪಂಡ ವಿಜು ಗಣಪತಿ ಎಂಬರಿಗೆ ಸೇರಿದ ಕಾಫಿ ತೋಟಕ್ಕೆ 2 ಮರಿ ಆನೆ ಸೇರಿದಂತೆ ಒಟ್ಟು 4 ಕಾಡಾನೆಗಳು ರಾತ್ರಿ ವೇಳೆ ಆಹಾರ ಅರಸಿ ಬಂದಿದ್ದು, ತೋಟದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಕಾಡಾನೆಗಳು ಸ್ಪರ್ಶಿಸಿದ ಪರಿಣಾಮ 40, 36, 6 ಹಾಗೂ 3 ವರ್ಷ ಪ್ರಾಯದ 4 ಹೆಣ್ಣಾನೆಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿವೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಕಾರ್ಮಿಕರಿಗೆ ಕಾಡಾನೆಗಳು ಸಾವನ್ನಪ್ಪಿರುವದು ಕಂಡುಬಂದಿದ್ದು, ಅರಣ್ಯ ಉಪವಲಯ ಅರಣ್ಯಾಧಿಕಾರಿ ದೇವಯ್ಯರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಚೆಸ್ಕಾಂ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಇದೇ ಗ್ರಾಮದ ಅನತಿ ದೂರದ ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ 2 ಕಾಡಾನೆಗಳು ಸಾವನ್ನಪ್ಪಿದ ದುರಂತ ಮಾಸುವ ಮುನ್ನ ಇದೀಗ ನಾಲ್ಕು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿವೆ. ಮೂಕ ಪ್ರಾಣಿಗಳು ಆಹಾರ ಅರಸಿ ತೋಟಕ್ಕೆ ಆಗಮಿಸಿದ್ದು, ವಿದ್ಯುತ್ ಇಲಾಖೆ ನಿರ್ಲಕ್ಷ್ಯದಿಂದ ಸಾವನ್ನಪ್ಪಿವೆ. ಕಾಫಿ ತೋಟಗಳಲ್ಲಿ ಕೆಳಮಟ್ಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಅರಣ್ಯ ಇಲಾಖೆ ಸೂಚಿಸಿತ್ತು. ಆದರೆ ವಿದ್ಯುತ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಡಿ.ಎಫ್.ಓ. ಮರಿಯ ಕೃಷ್ಟಿ, ಎ.ಸಿ.ಎಫ್ ರೋಶಿನಿ, ಆರ್.ಎಫ್.ಓ ಗೋಪಾಲ, ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಸೇರಿದಂತೆ ಅರಣ್ಯ ಸಿಬ್ಬಂದಿಗಳು ಹಾಜರಿದ್ದರು. ಅರಣ್ಯ ವೈದ್ಯಾಧಿಕಾರಿ ಡಾ. ಉಮಾಶಂಕರ್ 4 ಕಾಡಾನೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಕಾಫಿತೋಟದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ರೋಧಿಸಿದ ಕಾಡಾನೆಗಳು

ತೋಟದಲ್ಲಿ 4 ಕಾಡಾನೆಗಳು ಸಾವನ್ನಪ್ಪಿದ ಸ್ಥಳದ ಸಮೀಪದಲ್ಲೇ ಜೊತೆಗಿದ್ದ

(ಮೊದಲ ಪುಟದಿಂದ) ಕಾಡಾನೆಗಳು ರೋದಿಸುತ್ತಾ, ಘೀಳಿಡುತ್ತಿದ್ದವು. ಬಳಿಕ ಅರಣ್ಯ ಇಲಾಖಾ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆಗಳನ್ನು ಅಟ್ಟಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಎಫ್.ಓ. ದೇವಯ್ಯ, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಕಾಡಾನೆಗಳು ಸಾವನ್ನಪ್ಪಿವೆ. ಈ ಹಿಂದೆಯೇ ಚೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.