ವೀರಾಜಪೇಟೆ, ಜೂ. 27: ಪ್ರಾಮಾಣಿಕ ಅಧಿಕಾರಿಗಳ ನಿಷ್ಪಕ್ಷಪಾತ ಸೇವೆಯನ್ನು ಪ್ರತಿಯೊಬ್ಬರಿಗೂ ಗುರುತಿಸುವ ಮನೋಭಾವನೆ ಇರಬೇಕು ಎಂದು ಭಾರತೀಯ ಸೇವೆಗೆ ನೇಮಕಗೊಂಡ ವೀರಾಜಪೇಟೆ ಪಶು ವೈದ್ಯಾಧಿಕಾರಿ ಡಾ. ಬಸವರಾಜು ಹೇಳಿದರು.

ದೇವಣಗೇರಿ ಗ್ರಾಮದಲ್ಲಿ ಮಾಡಿರುವ ಸ್ಮರಣೀಯ ಸೇವೆಯನ್ನು ಪರಿಗಣಿಸಿ ದೇವಣಗೇರಿ ಪ್ಲಾಂಟರ್ಸ್ ಕ್ಲಬ್‍ನ ವತಿಯಿಂದ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಬಸವರಾಜು, ಬಿಸಿಲನಾಡು ಬಳ್ಳಾರಿಯಿಂದ ಬಂದು ಕೊಡಗು ಜಿಲ್ಲೆಯಲ್ಲಿ ಪಶು ವೈದ್ಯಾಧಿಕಾರಿಯಾಗಿ ಮೊದಲು ಸೇವೆ ಸಲ್ಲಿಸಿದ ನಂತರ ಇಲ್ಲಿಂದಲೇ ಭಾರತೀಯ ಅರಣ್ಯ ಸೇವೆಗೆ ನೇಮಕಗೊಂಡಿರುವದು ತೃಪ್ತಿ ತಂದಿದೆ. ಇಲ್ಲಿನ ವಾತಾವರಣ, ಜನರ ಒಡನಾಟ, ಆಚಾರ, ವಿಚಾರ, ಸಂಸ್ಕøತಿ, ಅರಣ್ಯ, ಪರಿಸರ, ಎಲ್ಲ ಮನಸ್ಸಿನಲ್ಲಿ ಉಳಿಯುವ ಹಾಗೆ ಮಾಡಿದೆ. ಕಾವೇರಿ ಮಾತೆ, ಈಶ್ವರ ಇಗ್ಗುತ್ತಪ್ಪ ಪಶುಪಾಲಕರ ಶ್ರೇಯೋಭಿಲಾಷಿಗಳ ಆಶೀರ್ವಾದದಿಂದ ಉನ್ನತ ಹುದ್ದೆ ಲಭಿಸಿದೆ. ಜನ್ಮಭೂಮಿ ಬಳ್ಳಾರಿಯಾದರೆ ಕರ್ಮಭೂಮಿ ಕೊಡಗು ಆಗಿದೆ. ಹುದ್ದೆಯಲ್ಲಿ ಕರ್ನಾಟಕ ಕೇಡರ್ ಸಿಕ್ಕಿದರೆ ಕೊಡಗು ಜಿಲ್ಲೆಯನ್ನೇ ಆರಿಸಿಕೊಳ್ಳುತ್ತೇನೆ ಎಂದರು.

ಕೆದಮುಳ್ಳೂರು ವಿಭಾಗದ ಪಶು ವೈದ್ಯಾಧಿಕಾರಿ ಡಾ. ರಾಕೇಶ್ ಮಾತನಾಡಿ, ಉತ್ತಮ ನಡತೆ ಹಾಗೂ ವ್ಯಕ್ತಿತ್ವ ಹೊಂದಿರುವವರ ಸ್ನೇಹವನ್ನು ಬೆಳೆಸಿಕೊಂಡರೆ ನಾವು ಕೂಡ ಅವರಂತೆಯೇ ಸಮಾಜದಲ್ಲಿ ಗುರುತಿಸಿ ಕೊಳ್ಳಬಹುದು. ನಿಷ್ಠಾವಂತ ಅಧಿಕಾರಿಗಳು ಇಲ್ಲಿಂದ ವರ್ಗವಾಗಿ ಹೋದರೆ ಜಿಲ್ಲೆಗೆ ನಷ್ಟ. ಆದರೆ ದೇಶಕ್ಕೆ ಲಾಭವಾಗುತ್ತದೆ ಎಂದು ಹೇಳಿದರು.

ಪ್ಲಾಂಟರ್ಸ್ ಕ್ಲಬ್‍ನ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ, ಹಿಂದಿನಿಂದಲೂ ನಮ್ಮ ಸಂಸ್ಥೆ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಯಾರು ಉತ್ತಮ ಸೇವೆ ಮಾಡುತ್ತಾರೋ ಅಂತವರನ್ನು ಸಮಾಜ ಗುರುತಿಸುತ್ತದೆ. ಸಮಾಜ ಸೇವೆಗಳಿಗೆ ಕ್ಲಬ್‍ನ ಎಲ್ಲಾ ಸದಸ್ಯರ ಸಹಕಾರವಿದೆ ಎಂದು ಹೇಳಿದರು.

ಗ್ರಾಮದ ಹಿರಿಯರಾದ ಸಣ್ಣುವಂಡ ಗಣೇಶ್ ಮೇದಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ದೇಶಕ ಪುಗ್ಗೆರ ರಂಜಿ ದೇವಯ್ಯ ಸ್ವಾಗತಿಸಿ, ಮೂಕೊಂಡ ಬೋಪಣ್ಣ ವಂದಿಸಿದರು.