ಕೂಡಿಗೆ, ಜೂ. 27: ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರುಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ಹಾಗೂ ಇಲ್ಲಿನ ವಾತಾವರಣ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ಹವಾಮಾನಕ್ಕನುಗುಣವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಸರಕಾರ ರಿಯಾಯಿತಿ ದರದಲ್ಲಿ ಈಗಾಗಲೇ ತಾಲೂಕಿನ ವಿವಿಧ ಸಹಕಾರ ಸಂಘಗಳಲ್ಲಿ ಭತ್ತದ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳು, ಕೀಟ ನಾಶಕಗಳನ್ನು ದಾಸ್ತಾನು ಇಡಲಾಗಿದೆ.ಇದರ ಸದುಪಯೋಗವನ್ನು ಈ ವ್ಯಾಪ್ತಿಯ ರೈತರುಗಳು ಸದ್ಬಳಸಿಕೊಳ್ಳಬೇಕೆಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಕರೆ ನೀಡಿದರು. ಕೂಡಿಗೆಯ ರಾಮಲಿಂಗೇಶ್ವರ ಸಹಕಾರ ಸಂಘದ ದಾಸ್ತಾನು ಗೋದಾಮಿಗೆ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು. ಅಲ್ಲದೆ ಈ ಸಾಲಿನಲ್ಲಿ ಭತ್ತದ ಬಿತ್ತನೆ ಬೀಜಗಳಾದ ಐಆರ್64, ತುಂಗಾ, ಗಂಗಾ ಕಾವೇರಿ ಸೇರಿದಂತೆ ಹೈಬ್ರಿಡ್ ತಳಿಗಳನ್ನು ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ.

ರೈತರು ತಮ್ಮ ಜಮೀನಿನ ದಾಖಲಾತಿಯನ್ನು ನೀಡುವದರ ಮೂಲಕ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕು. ರೈತರುಗಳ ಜಮಿನುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯ ರೈತರುಗಳಿಗೆ ಅನುಕೂಲವಾಗುವಂತೆ ಕೂಡಿಗೆಯಲ್ಲಿ ಮಣ್ಣು ಪರೀಕ್ಷಾ ಕೇಂದ್ರವಿದ್ದು, ಇದೀಗ ಈ ಕೇಂದ್ರವು ಮೇಲ್ದರ್ಜೆಯ ಆಧುನಿಕ ಯಂತ್ರೋಪ ಕರಣಗಳನ್ನು ಅಳವಡಿಸಿರುವದರಿಂದ ರೈತರುಗಳಿಗೆ ಸಕಾಲದಲ್ಲಿ ಮಣ್ಣು ಪರೀಕ್ಷೆ ಫಲಿತಾಂಶವನ್ನು ನೀಡಲಾಗು ವದು. ಅದರನ್ವಯ ರೈತರುಗಳು ತಮ್ಮ ಜಮೀನಿನ ಮಣ್ಣನ್ನು ಈ ಕೇಂದ್ರಕ್ಕೆ ನೀಡಿ ಪರೀಕ್ಷಿಸಿ ನಂತರ ಮಣ್ಣಿಗನುಗುಣವಾಗಿ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಬೆಳೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆಯಬೇಕು. ಇಲಾಖೆಯ ವತಿಯಿಂದ ರೈತರಿಗೆ ಎಲ್ಲಾ ಸೌಲಭ್ಯವನ್ನು ಒದಗಿಸುತ್ತಿದ್ದು, ರೈತರು ಇದನ್ನು ಉಪಯೋಗಿಸಿ ಕೊಳ್ಳಬೇಕೆಂದರು ತಿಳಿಸಿದರು.

ಈ ಸಂದರ್ಭ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಪೂಣಚ್ಚ ಸೇರಿದಂತೆ ರೈತರು ಇದ್ದರು.