ಮಡಿಕೇರಿ, ಜೂ. 26: ಜಿಲ್ಲೆಯಾದ್ಯಂತ ಮುಂಗಾರು ಬಿರುಸುಗೊಂಡಿದ್ದು, ನದಿ - ತೊರೆಗಳಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಜಿಲ್ಲೆಯ ಹಲವೆಡೆ ಕಳೆದೆರಡು ದಿನಗಳಿಂದ ಬಿರುಸಿನ ಮಳೆ ಸುರಿಯುತ್ತಿದ್ದು, ಕೃಷಿಕರು ಸಂತಸಗೊಂಡಿದ್ದಾರೆ.ಏಪ್ರಿಲ್ - ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬೆಳೆಗಾರರು, ಕೃಷಿಕರು ಕೊಂಚ ಸಂತಸ ಗೊಂಡಿದ್ದರೂ, ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಆರಂಭವಾಗಬಹುದೆನ್ನುವ ಆಶಾಭಾವನೆ ಹೊಂದಿದ್ದ ರೈತರಿಗೆ ಆರಂಭದಲ್ಲಿ ನಿರಾಶೆಯಾಗಿತ್ತು. ಬಿತ್ತನೆ ಬೀಜ ಹಾಕುವದು ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯಾಗಿತ್ತು. ಇದೀಗ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಕೃಷಿಗೆ ಪೂರಕವಾಗಿದೆ ಎನ್ನಲಾಗಿದೆ.

(ಮೊದಲ ಪುಟದಿಂದ) ತಾ. 21 ರಿಂದ ಆರಿದ್ರ ಮಳೆ ಆರಂಭವಾಗಿದ್ದು, ಈ ಹಿಂದಿನ ರಭಸವನ್ನು ಆರಿದ್ರ ಮಳೆ ಕಳೆದುಕೊಂಡಿದೆ ಎಂಬದು ಹಲವರ ಅಭಿಪ್ರಾಯವಾಗಿದೆ. ತಡವಾಗಿ ಯಾದರೂ 3-4 ದಿನಗಳ ನಂತರ ಆರಿದ್ರ ತನ್ನ ಬಿರುಸನ್ನು ಪಡೆದುಕೊಳ್ಳುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಆರಿದ್ರ ಮಳೆ ಕೊಂಚ ಬಿಡುವು ನೀಡಿ ರಭಸದಿಂದ ಸುರಿಯುತ್ತಿದೆ. ಮಡಿಕೇರಿ ನಗರಕ್ಕೆ ಕಳೆದ 24 ಗಂಟೆಗಳಲ್ಲಿ 1.90 ಇಂಚು ಮಳೆ ಸುರಿದಿದ್ದರೆ, ಜನವರಿಯಿಂದ ಇಂದಿನವರೆಗೆ 33.35 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಗೆ 21.90 ಇಂಚು ಮಳೆ ಸುರಿದಿತ್ತು. ಈ ವರ್ಷ ಮಳೆಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಮಳೆ ವರದಿ ಸಂಗ್ರಹಕಾರ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿಯಾಗಿರುವ ತಲಕಾವೇರಿಯಲ್ಲಿ ಜನವರಿಯಿಂದ ಇಂದಿನವರೆಗೆ 62.09 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 57.95 ಇಂಚು ಮಳೆ ಸುರಿದಿತ್ತು. ಈ ವರ್ಷ ಜನವರಿಯಿಂದ ಮೇ ಅಂತ್ಯದ ವರೆಗೆ ಕೇವಲ 12.76 ಇಂಚು ಮಳೆ ಸುರಿದಿದ್ದರೆ ಜೂನ್ 1 ರಿಂದ ಇಂದಿನವರೆಗೆ 49.33 ಇಂಚು ಮಳೆ ಸುರಿದಿದೆ. ಕಳೆದ ವರ್ಷ ಜನವರಿಯಿಂದ ಮೇ ಅಂತ್ಯದವರೆಗೆ 11.95 ಇಂಚು ಮಳೆ ಸುರಿದಿದ್ದರೆ ಜೂನ್ 1 ರಿಂದ ಇಂದಿನ ಅವಧಿವರೆಗೆ 46 ಇಂಚು ಮಳೆ ಸುರಿದಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ತಲಕಾವೇರಿಯಲ್ಲಿ 5.77 ಇಂಚು ಮಳೆ ಸುರಿದಿದೆ ಎಂದು ತಲಕಾವೇರಿಯ ಆನಂದ ತೀರ್ಥ ಸ್ವಾಮೀಜಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ತ್ರಿವೇಣಿ ಸಂಗಮ ಭಾಗಮಂಡಲ ಕ್ಷೇತ್ರಕ್ಕೆ ಈ ವರ್ಷಾರಂಭದಿಂದ ಇಂದಿನವರೆಗೆ 48.03 ಇಂಚು ಮಳೆ ಬಿದ್ದಿದ್ದರೆ ಕಳೆದ ವರ್ಷ ಈ ಅವಧಿಯಲ್ಲಿ 34.33 ಇಂಚು ಮಳೆ ಸುರಿದಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲಕ್ಕೆ 4.60 ಇಂಚು ಮಳೆ ಸುರಿದಿದ್ದರೆ, ಕಳೆದ ವರ್ಷ ಕೇವಲ 0.19 ಇಂಚು ಮಳೆ ಮಾತ್ರ ಸುರಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ವರ್ಷ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಹೆಚ್ಚು ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ನಾಪೆÇೀಕ್ಲು

ನಾಲ್ಕುನಾಡು ವ್ಯಾಪ್ತಿಯಲ್ಲಿ ಮಳೆಯ ಏರುಪೇರಿನಿಂದಾಗಿ ಭತ್ತದ ಕೃಷಿ ಚಟುವಟಿಕೆ ವಿಳಂಬಗೊಂಡಿದೆ. ಕಳೆದ ವರ್ಷ ನಾಪೆÇೀಕ್ಲು ವ್ಯಾಪ್ತಿಯಲ್ಲಿ ಈ ದಿನದವರೆಗೆ 19 ಇಂಚು ಮಳೆಯಾಗಿತ್ತು. ಈ ವರ್ಷ 23 ಇಂಚು ಮಳೆಯಾಗಿದ್ದರೂ ನೀರಿನ ಅಭಾವ ಕಾಣಿಸಿಕೊಂಡಿದೆ.

ಭಾನುವಾರ ಮಧ್ಯಾಹ್ನದಿಂದ ಈ ವ್ಯಾಪ್ತಿಯಲ್ಲಿ ಮಳೆ ತನ್ನ ಬಿರುಸನ್ನು ಹೆಚ್ಚಿಸಿದೆ. ಇಲ್ಲಿ ಬೆಳಿಗ್ಗೆಯವರೆಗೂ ಉತ್ತಮ ಮಳೆ ಸುರಿದಿದೆ. ನಂತರ ಮಳೆಯಲ್ಲಿ ಬಿಡುವು ಕಾಣಿಸಿಕೊಂಡಿತ್ತು. ಹಳ್ಳ, ಕೊಳ್ಳ, ತೋಡು, ಹೊಳೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ರೈತರ ಮೊಗದಲ್ಲಿ ನಗು ಕಾಣಿಸಿಕೊಂಡಿದೆ. ಕಳೆದ ಬಾರಿಗಿಂತಲೂ ಈ ವರ್ಷ ಹೆಚ್ಚಿನ ಮಳೆ ಸುರಿದಿದ್ದರೂ ಹಲವೆಡೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸೋಮವಾರಪೇಟೆ

ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು, ಕೃಷಿ ಕಾರ್ಯ ಚುರುಕುಗೊಳ್ಳುತ್ತಿದೆ. ಗದ್ದೆಗಳ ಉಳುಮೆಗೆ ರೈತಾಪಿ ವರ್ಗ ಸಿದ್ಧತೆ ಮಾಡಿಕೊಂಡಿದ್ದು, ಸಸಿಮಡಿ ತಯಾರಿ ಕಾರ್ಯವೂ ಭರದಿಂದ ಸಾಗುತ್ತಿದೆ.

ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಬಿರುಸಿನ ಗಾಳಿಯೊಂದಿಗೆ ಉತ್ತಮ ಮಳೆಯಾಗುತ್ತಿದೆ. ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುವ ಪುಷ್ಪಗಿರಿ ಬೆಟ್ಟ ತಪ್ಪಲಿನ ಪ್ರದೇಶಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಶಾಂತಳ್ಳಿ, ಬೆಟ್ಟದಳ್ಳಿ, ಹಂಚಿನಳ್ಳಿ, ಮಲ್ಲಳ್ಳಿ, ತಡ್ಡಿಕೊಪ್ಪ, ಕುಮಾರಳ್ಳಿ, ತೋಳೂರು ಶೆಟ್ಟಳ್ಳಿ, ಕೂತಿ, ತಲ್ತರೆಶೆಟ್ಟಳ್ಳಿ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.

ಜೂನ್ ಕೊನೆಯ ವಾರದಲ್ಲಿ ರಭಸವಾಗಿರುವ ಮಳೆಗೆ ಗದ್ದೆಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದರೆ, ಬತ್ತಿಹೋಗಿದ್ದ ಬಹುತೇಕ ಸಣ್ಣಪುಟ್ಟ ನದಿ ತೊರೆಗಳು ಮೈದುಂಬಿಕೊಂಡು ಹರಿಯುತ್ತಿವೆ. ಜೂನ್ ಮೊದಲ ವಾರದವರೆಗೂ ಬತ್ತಿಹೋಗಿದ್ದ ಕಕ್ಕೆಹೊಳೆಯಲ್ಲಿ ಇದೀಗ ನೀರಿನ ಹರಿವು ಕಂಡುಬರುತ್ತಿದೆ.

ಗಾಳಿ ಸಹಿತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆಬದಿಯಿದ್ದ ಚರಂಡಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ಕಸಕಡ್ಡಿ, ಸಣ್ಣಪುಟ್ಟ ಕಲ್ಲುಗಳು ರಸ್ತೆಗಳ ಮೇಲೆ ಶೇಖರಣೆಗೊಳ್ಳುತ್ತಿವೆ. ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ನಿಲುಗಡೆಯಾಗುತ್ತಿದ್ದು, ವಾಹನ ಸವಾರರಿಗೂ ಸಮಸ್ಯೆ ಎದುರಾಗುತ್ತಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೃಷಿಕ ವರ್ಗ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಗದ್ದೆಗಳನ್ನು ಉಳುಮೆ ಮಾಡಲು ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಸಂತೆ ದಿನವಾದ ಸೋಮವಾರದಂದು ಭಾರೀ ಮಳೆಯಾದ ಹಿನ್ನೆಲೆ ವ್ಯಾಪಾರ ವಹಿವಾಟಿಗೆಂದು ಸಂತೆಗೆ ಆಗಮಿಸಿದ ಸಾರ್ವಜನಿಕರು ತೊಂದರೆ ಎದುರಿಸುವಂತಾಯಿತು.

ಶನಿವಾರಸಂತೆ

ಶನಿವಾರಸಂತೆ ಹೋಬಳಿ ಯಾದ್ಯಂತ ಉತ್ತಮ ಮಳೆಯಾಗಿದ್ದು, ಕಳೆದೆರಡು ದಿನಗಳಿಂದ ಮಳೆ ಬಿರುಸು ಪಡೆದುಕೊಂಡಿದೆ. ಕೆಲವು ಸಮಯ ಬಿಡುವು ನೀಡುತ್ತಾ, ಮಳೆ ಆಗಾಗ್ಗೆ ರಭಸದ ಗಾಳಿಯೊಂದಿಗೆ 1.77 ಇಂಚು ಮಳೆ ಸುರಿದಿದ್ದು, ಈ ಬಗ್ಗೆ ಕೃಷಿಕ ಶರತ್ ಶೇಖರ್ ‘ಶಕ್ತಿ’ಯೊಂದಿಗೆ ಮಾತನಾಡಿ, ಕಾಫಿ ತೋಟಗಳಲ್ಲಿ ಕೀಟನಾಶಕ ಸಿಂಪಡಿಸುವ, ಗೊಬ್ಬರ ಹಾಕುವ ಕೆಲಸ ಸಾಮಾನ್ಯವಾಗಿ ಮುಗಿದಿದ್ದು, ಕಳೆ ತೆಗೆಯುವ ಕೆಲಸ ಮಾಡಲಾಗುತ್ತಿದೆ. ಕೆಲವೆಡೆ ಗದ್ದೆಗಳಲ್ಲಿ 6 ತಿಂಗಳ ಬೆಳೆಯಾದ ತುಂಗಾ, ಬಿ.ಆರ್. ಭತ್ತದ ಬೀಜ ಬಿತ್ತನೆ ಕೆಲಸ ಆರಂಭವಾಗಿದೆ ಎಂದು ಹೇಳಿದರು.

ಕುಶಾಲನಗರ

ಕುಶಾಲನಗರ ಸುತ್ತಮುತ್ತ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ನದಿ ನೀರಿನ ಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದ ರಾತ್ರಿ ನಿರಂತರವಾಗಿ ಮಳೆ ಸುರಿದಿದ್ದು, ಸೋಮವಾರ ಹಗಲು ವೇಳೆ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಮಳೆ ಬೀಳುತ್ತಿದ್ದ ದೃಶ್ಯ ಗೋಚರಿಸಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ 0.60 ಇಂಚು ಮಳೆ ಬಿದ್ದಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ 0.64 ಇಂಚು ಮಳೆ ದಾಖಲಾಗಿದೆ.

ಶ್ರೀಮಂಗಲ

ಪ್ರಸಕ್ತ ವರ್ಷ ಜೂನ್ 2ನೇ ವಾರದಲ್ಲಿ ಮಳೆ ತುಸು ಕಡಿಮೆ ಸುರಿದಿದ್ದು ನಂತರ ಮುಂಗಾರು ಕ್ಷೀಣಿಸಿದ್ದ ಬೆನ್ನಲ್ಲೆ, ಹತ್ತು ದಿನ ಮೋಡ ಮುಸುಕಿದ ವಾತಾವರಣ ಹಾಗೂ ಬಿಸಿಲು ಕಾಣಿಸಿಕೊಂಡು ಮುಂಗಾರು ದುರ್ಬಲವಾಗಿತ್ತು. ಆದರೆ ಇದೀಗ ಮುಂಗಾರು ಚುರುಕು ಪಡೆದುಕೊಂಡಿದ್ದು, ದಕ್ಷಿಣ ಕೊಡಗಿನಲ್ಲಿ ಉತ್ತಮ ಮಳೆಯಾಗಿದೆ.

ಕಳೆದ 24 ಗಂಟೆಯಲ್ಲಿ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ತೆರಾಲು ಗ್ರಾಮದಲ್ಲಿ 3.60 ಇಂಚು , ಬಿರುನಾಣಿಯಲ್ಲಿ 3.70 ಇಂಚು, ಪೊರಾಡು ಬಾಡಗರಕೇರಿಗಳಲ್ಲಿ 2.85 ಇಂಚು, ಶ್ರೀಮಂಗಲ ವಿಭಾಗಕ್ಕೆ 1.80 ಇಂಚು ಮಳೆಯಾಗಿದೆ.

ಶ್ರೀಮಂಗಲಕ್ಕೆ ಕಳೆದ ವರ್ಷ ಒಟ್ಟು 60.6 ಇಂಚು ಮಳೆಯಾಗಿದ್ದರೆ, 2016ರಲ್ಲಿ ಇದೇ ಅವಧಿಗೆ 10.37 ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ 18.71 ಇಂಚು ಮಳೆ ಆಗಿದ್ದು, ಕಳೆದ ವರ್ಷಕ್ಕಿಂತ ಹೆಚ್ಚು ಮಳೆ ಸುರಿಯುವ ಮೂಲಕ ಆಶಾಭಾವನೆ ಮೂಡಿಸಿದೆ.

ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಬಿರುನಾಣಿ ವಿಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಈ ವ್ಯಾಪ್ತಿಯಲ್ಲಿ ಹುಟ್ಟಿ ಹರಿಯುವ ಕಕ್ಕಟ್ಟು ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಬಿರುನಾಣಿ ವಿಭಾಗದ ಬಾಡಗರಕೇರಿ ಪೊರಾಡು ವ್ಯಾಪ್ತಿಗೆ ಕಳೆದ 24 ಗಂಟೆಯಲ್ಲಿ 2.85 ಇಂಚು ಮಳೆಯಾಗಿದ್ದು, 2016ರಲ್ಲಿ ಈ ಅವಧಿಗೆ 12.10 ಇಂಚು ಮಳೆಯಾಗಿದ್ದರೆ, ಪ್ರಸಕ್ತ ವರ್ಷ ಇದುವರೆಗೆ 26.42 ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಮಳೆಯಾಗಿರುವದು ಕಂಡುಬಂದಿದೆ.

ಕಳೆದ 48 ಗಂಟೆಗಳಲ್ಲಿ ಮುಂಗಾರು ಮಳೆ ದಕ್ಷಿಣ ಕೊಡಗಿನಲ್ಲಿ ಚುರುಕಾಗಿದ್ದು, ಹಲವೆಡೆ ರಸ್ತೆಗಳಲ್ಲಿ ಮರ, ಮರದ ರೆಂಬೆ ಬಿದ್ದು ಅಲ್ಲಲ್ಲಿ ರಸ್ತೆಗಳಿಗೆ ಅಡಚಣೆಯಾಗಿದ್ದು, ಸ್ಥಳೀಯರು ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆಯೂ ಮರ ಹಾಗೂ ಮರದ ರೆಂಬೆಗಳು ಬಿದ್ದು ಅಡಚಣೆಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಕಂಡುಬಂದಿದೆ.

(ವರದಿ: ಚಂದ್ರ, ಸುನಿಲ್, ವಿಜಯ್, ಚಂದ್ರಮೋಹನ್, ಪ್ರಭಾಕರ್, ಹರೀಶ್, ನರೇಶ್)