ಗೋಣಿಕೊಪ್ಪಲು, ಜೂ.26: ತಿತಿಮತಿ ಕರಡಿಕೊಪ್ಪಲುವಿನಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ತಾ.23 ರಂದು ಗೋಣಿಕೊಪ್ಪಲಿಗೆ ಬರುತ್ತಿದ್ದ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ಕಾರನ್ನು ಚೆನ್ನಂಗೊಲ್ಲಿ ಪೈಸಾರಿ ನಿವಾಸಿಗಳು ಅಡ್ಡಗಟ್ಟಲಿಲ್ಲ. ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಕರೆದೊಯ್ದಿದ್ದರು ಎಂದು ಪೆÇನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಕಡೆಮಾಡ ಕುಸುಮಾ ಜೋಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿ ಪ್ರಕಟವಾಗಿದೆ ಎಂದು ಹೇಳಿರುವÀ ಅವರು, ಅರುಣ್‍ಮಾಚಯ್ಯ ಅವರು ಮಾಯಮುಡಿ ಮಂಡಲ ಪ್ರಧಾನರಾಗಿದ್ದ ಸಂದರ್ಭ ಚೆನ್ನಂಗೊಲ್ಲಿ ಪೈಸಾರಿ ನಿವಾಸಿಗಳಿಗೆ ರಸ್ತೆ, ಕುಡಿಯುವ ನೀರು ಇತ್ಯಾದಿ ಸೌಲಭ್ಯ ಒದಗಿತ್ತು. ನಂತರದ ದಿನಗಳಲ್ಲಿ ಮಾಯಮುಡಿಯ ಸಂಘಟನೆಯೊಂದು ಚೆನ್ನಂಗೊಲ್ಲಿ ಪೈಸಾರಿ ಜಾಗವನ್ನು ದೇವರಕಾಡು ಎಂದು ಹೇಳಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಹಿನ್ನೆಲೆ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿತ್ತು.

ಈ ಬಗ್ಗೆ ಸಚಿವರನ್ನು ಅರಣ್‍ಮಾಚಯ್ಯ ಅವರು ‘ಸುಮಾರು 500 ಮಂದಿ ಪೈಸಾರಿ ನಿವಾಸಿಗಳು ನಿಮ್ಮನ್ನು ಕಾಯುತ್ತಿದ್ದಾರೆ’ ಎಂದು ಹೇಳಿದ ಮೇರೆ ಸಚಿವ ಸೀತಾರಾಮ್ ಅವರು ಕಾಲ್ನಡಿಗೆಯಲ್ಲಿ ಪೈಸಾರಿ ರಸ್ತೆ ದುಸ್ಥಿತಿಯನ್ನು ವೀಕ್ಷಣೆ ಮಾಡಿ, ರಸ್ತೆ ಅಭಿವೃದ್ಧಿಯ ಭರವಸೆ ನೀಡಿರುವದಾಗಿ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ಕೂಡಲೇ ತೆರವು ಮಾಡುವ ನಿಟ್ಟಿನಲ್ಲಿ ಸಹಕರಿಸುವದಾಗಿಯೂ ಹಾಗೂ ಅಲ್ಲಿನ ಸರ್ಕಾರಿ ಶಾಲೆಗೆ ತೆರಳಲು ಮುಖ್ಯರಸ್ತೆಯಿಂದ ಸುಮಾರು 1 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವದಾಗಿಯೂ ಸಚಿವ ಸೀತಾರಾಮ್ ಇದೇ ಸಂದರ್ಭ ಭರವಸೆ ನೀಡಿದರು. ಜನಾರ್ಧನ ಪೂಜಾರಿ ಅವರು ಸಂಸದರಾಗಿದ್ದಾಗ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ಅಭಿವೃದ್ಧಿ ಕಾರ್ಯ ನಡೆದಿತ್ತು ಎಂದು ಅಲ್ಲಿನ ನಿವಾಸಿಗಳು ಸಚಿವರಿಗೆ ಮಾಹಿತಿ ನೀಡಿದರು.

ಚೆನ್ನಂಗೊಲ್ಲಿ ನಿವಾಸಿಗಳು ಹಲವು ವರ್ಷಗಳಿಂದ ಕುಡಿಯುವ ನೀರು, ರಸ್ತೆ ಹಾಗೂ ಹಲವು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಮಾಯಮುಡಿಯ ಸಂಘಟನೆವೊಂದರ ವಿರುದ್ಧ ಇದೇ ಸಂದರ್ಭ ಸಚಿವರಲ್ಲಿ ಕಿಡಿಕಾರಿದ ಘಟನೆಯೂ ನಡೆಯಿತು. ಸಚಿವರ ಭರವಸೆಯಿಂದಾಗಿ ಅಲ್ಲಿನ ನಿವಾಸಿಗಳು ಸಚಿವರಿಗೆ ಹಾಗೂ ಅರುಣ್‍ಮಾಚಯ್ಯ ಅವರಿಗೆ ಜಯಕಾರ ಹಾಕಿದ್ದಾರೆ ಬಿಟ್ಟರೆ ಯಾವದೇ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.