ಸುಂಟಿಕೊಪ್ಪ, ಜೂ. 26 : ಇಲ್ಲಿನ ಮಧುರಮ್ಮ ಬಡಾವಣೆ ನಿವಾಸಿ ಟಿ.ರಾಜ (37) ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು. ಹತ್ಯೆಯಾದ ವ್ಯಕ್ತಿಯ ರುಂಡ, ಕಾಲನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪೊಲೀಸ್‍ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಹತ್ಯೆಯಾದ ರಾಜ ಅವರ ತಾಯಿ, ಪತ್ನಿ, ಸಹೋದರರು ಹಾಗೂ ಸುಂಟಿಕೊಪ್ಪ ಕೂಲಿ ಕಾರ್ಮಿಕರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಸುಂಟಿಕೊಪ್ಪ ಪೊಲೀಸ್‍ಠಾಣೆ ಎದುರು ಪ್ರತಿಭಟಿಸಿದರು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಈ ರೀತಿ ವ್ಯಕ್ತಿಯೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿರಲಿಲ್ಲ. ಆರೋಪಿಗಳನ್ನು ಪೊಲೀಸರು ಬಂಧಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಚಂದ್ರ, ಬಿ.ಎಂ.ಸುರೇಶ, ಎ.ಶ್ರೀಧರ್ ಕುಮಾರ್, ಮಾಜಿ ಗ್ರಾ.ಪಂ.ಅಧ್ಯಕ್ಷೆ ಬಿ.ಐ.ಭವಾನಿ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಜಿಲ್ಲಾ ಕಾರ್ಮಿಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಣ್ಣಾಶರೀಫ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.