ಮಡಿಕೇರಿ, ಜೂ. 28: ನಿತ್ಯ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಾವಿರಾರು ಪ್ರವಾಸಿಗರ ಸಹಿತ ಸ್ಥಳೀಯರು ಸಂಚರಿಸುವ ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಚರಿಸುವ ಕಾಲುದಾರಿ ಮೂರನೇ ಬಾರಿಗೆ ಕುಸಿದು ಹೋಗಿದೆ.ಒಂದೆರಡು ವಾರದಲ್ಲಿ ಮೂರು ಬಾರಿ ಈ ಕೆಲಸವನ್ನು ಪೂರೈಸಿ ಹಿಂತಿರುಗಿದ ಕಾರ್ಮಿಕರು ಮನೆ ಸೇರುವ ಮುನ್ನ ಮತ್ತೆ ಹಾನಿಯಾಗಿರುವ ದೃಶ್ಯ ಎದುರಾಗಿದೆ.

ಎರಡು ತಿಂಗಳ ಹಿಂದೆ ನಗರಸಭೆಯಿಂದ ಸಾವಿರಾರು ಮಂದಿ ನಿತ್ಯ ಸಂಚರಿಸುವ ಈ ಪಾದಚಾರಿ ಮಾರ್ಗದಲ್ಲಿ ರೂ. 4.75 ಲಕ್ಷದ ಕೆಲಸ ಪೂರೈಸಿದ ಬೆನ್ನಲ್ಲೇ ಅಲ್ಲಿ ಕುಸಿತ ಕಂಡುಬಂತು. ಅದನ್ನು ಸರಿಪಡಿಸುವದರೊಂದಿಗೆ ಮತ್ತೆ ರೂ. 1.25 ಲಕ್ಷದಲ್ಲಿ ಒಂದಿಷ್ಟು ಕೆಲಸ ಮಾಡಿಸಲಾಯಿತು.

ಈ ಕೆಲಸ ಮುಗಿಯುವ ವೇಳೆಗೆ ಮಳೆ ಬಂದು ಸಿಮೆಂಟು ತೊಳೆದುಕೊಂಡು ಹೋಗಿ ಒಂದೆಡೆ ಮರಳು ರಾಶಿ ಸಂಗ್ರಹವಾಯಿತು. ಆ ಬೆನ್ನಲ್ಲೇ ಪಾದಚಾರಿ ಮಾರ್ಗದಲ್ಲಿ ಜೋಡಿಸಿದ್ದ ‘ಇಂಟರ್‍ಲಾಕ್’ ಸಾಮಗ್ರಿ ನೆಲಕಚ್ಚಿ ಗುಂಡಿ ಕಾಣಿಸಿಕೊಂಡಿತು.

ಈ ಗುಂಡಿಯನ್ನು ಒಂದಿಷ್ಟು ಮರಳು, ಸಿಮೆಂಟ್ ಬೆರೆಸಿ ಮತ್ತೆ ‘ಇಂಟರ್‍ಲಾಕ್’ ಅಳವಡಿಸುತ್ತಿದ್ದ ಕೆಲಸ ಕಾಣುವಷ್ಟರಲ್ಲಿ ಇದೀಗ ಇಡೀ ಕಾಲುದಾರಿಯ ಅರ್ಧಭಾಗ ಪ್ರಸಕ್ತ ಮಳೆಯಲ್ಲೇ ಕುಸಿದು ಹೋಗಿದೆ. ಇನ್ನು ಮಳೆಗಾಲಕ್ಕೆ ಮುಂದಿನ ದಿನಗಳಲ್ಲಿ ರೂ. 6 ಲಕ್ಷದ ಕಾಮಗಾರಿ ಪೂರ್ಣ ಕೊಚ್ಚಿ ಹೋದರೆ ಆಶ್ಚರ್ಯವಿಲ್ಲ. ನಮ್ಮ ನಗರಸಭೆಯ ಕೆಲಸಕ್ಕೆ ಇದೊಂದು ಕೈಗನ್ನಡಿ ಆದೀತು?

- ಶ್ರೀಸುತ