ಮಡಿಕೇರಿ, ಜೂ. 28: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರಬಾರ ಜಿಲ್ಲಾಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರನ್ನು ಮುಂದುವರಿಸಬೇಕು ಎಂದು ಕೆಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮನವಿ ಪತ್ರಕ್ಕೆ ಸಹಿ ಹಾಕಿರುವ ವಿಚಾರ ನಿನ್ನೆ ಮಡಿಕೇರಿಯಲ್ಲಿ ನಡೆದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿತ್ತು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಯಾರ ಗಮನಕ್ಕೆ ತಾರದೆ ಸಹಿ ಮಾಡಿದ ಕುರಿತು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಗಿ ತಿಳಿದುಬಂದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮಾನಾಥ್ ತಮಗೆ ಈ ವಿಚಾರಕ್ಕೆ ಸಹಿ ಪಡೆದುಕೊಂಡಿದ್ದು ತಮಗೆ ಗೊತ್ತಿರಲಿಲ್ಲ. ಬೇರೆ ವಿಚಾರಕ್ಕೆಂದು ಪ್ರಬಾರ ಅಧ್ಯಕ್ಷರು ಸಹಿ ಪಡೆದುಕೊಂಡಿದ್ದರು ಎಂದು ಸಮಜಾಯಿಸಿಕೆ ನೀಡಿದರೆನ್ನಲಾಗಿದೆ.

ನಾಪೋಕ್ಲು ಬ್ಲಾಕ್‍ಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸದ ಕುರಿತೂ ಬ್ಲಾಕ್ ಅಧ್ಯಕ್ಷರು ಕಾರ್ಯಕರ್ತರಿಂದ ಪ್ರಶ್ನೆಗಳನ್ನು ಎದುರಿಸುವಂತಾಗಿತ್ತು. ಈ ಕುರಿತ ಚರ್ಚೆಯ ಸಂದರ್ಭ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತ್ತು.

ಪಕ್ಷಕ್ಕಾಗಿ ಕೆಲಸ ಮಾಡಲು ಕರೆ

ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಪಕ್ಷದಲ್ಲಿ ಭಿನ್ನಾಭಿಪ್ರಾಯ ಬರುವದು ಸಹಜ. ಅದನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ಕೆಲಸ ನಿರ್ವಹಿಸಬೇಕು. ಹೀಗಿದ್ದಲ್ಲಿ ಮಾತ್ರ ಪಕ್ಷ ಕಟ್ಟಲು ಸಾಧ್ಯ ಎಂದರು. ವಲಯ ಅಧ್ಯಕ್ಷರ ಆಯ್ಕೆ ಹಾಗೂ ಬೂತ್ ಮಟ್ಟದ ಸಮಿತಿ ರಚನೆಯನ್ನು ತ್ವರಿತಗೊಳಿಸುವಂತೆ ಅವರು ಹೇಳಿದರು.

ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ವಲಯ ಅಧ್ಯಕ್ಷರ ಆಯ್ಕೆ ಹಾಗೂ ಬೂತ್ ಸಮಿತಿ ರಚನೆ ವ್ಯವಸ್ಥಿತವಾಗಿ ಆಗಬೇಕು. ಭಿನ್ನಾಭಿಪ್ರಾಯಗಳನ್ನು ಪಕ್ಷದ ಆಂತರಿಕ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕೆಂದರು.

ಬ್ಲಾಕ್ ಅಧ್ಯಕ್ಷ ರಮಾನಾಥ್, ನೆರವಂಡ ಉಮೇಶ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಎ.ಎ. ಮಹಮದ್ ಮತ್ತಿತರರು ಮಾತನಾಡಿದರು.

ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಬಿದ್ದಾಟಂಡ ಎಸ್. ತಮ್ಮಯ್ಯ, ತೆನ್ನೀರಾ ಮೈನಾ, ಟಾಟು ಮೊಣ್ಣಪ್ಪ ಮತ್ತಿತರರು ಭಾಗವಹಿಸಿದ್ದರು.