ಮಡಿಕೇರಿ, ಜೂ. 28: ನಗರದ ರೋಟರಿ ಸಭಾಂಗಣದಲ್ಲಿ ಪ್ರಜಾಸತ್ಯ ದಿನಪತ್ರಿಕೆ, ಕ್ಷೇಮಾಭಿವೃದ್ಧಿ ನಿಧಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಪತ್ರಕರ್ತರಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜಗತ್ತು ಪ್ರತಿಕ್ಷಣವೂ ಬದಲಾವಣೆಗೆ ಒಳಗಾಗುತ್ತಿರುತ್ತದೆ. ಮನುಷ್ಯರು ಬದಲಾಗುತ್ತಾ ಹೋಗುತ್ತಾರೆ. ಹಾಗಾಗಿ ಮನುಷ್ಯರ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ತಿಳಿಸುವ ಮಹತ್ತರ ಜವಾಬ್ದಾರಿ ಪತ್ರಕರ್ತರ ಮೇಲಿದೆ. ಕೆಲಸದ ಒತ್ತಡದ ನಡುವೆ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿರುವವರಿಗೆ ಮತ್ತು ಹಿರಿಯ ನಾಗರಿಕರಿಗೆ ಈ ಶಿಬಿರಗಳು ನೆರವು ನೀಡುತ್ತದೆ ಎಂದು ಹೇಳಿದರು.

ಹಿರಿಯರ ಮಾರ್ಗದರ್ಶನ ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ. ಹೊಸ ಚಿಗುರು ಹಳೆ ಬೇರು ಎಂಬಂತೆ ಹಿರಿಯರ ಮಾರ್ಗದರ್ಶನ ಜೀವನಕ್ಕೆ ಅತ್ಯವಶ್ಯ. ಹಿರಿಯರ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋಗಬೇಕು. ರಾಮತೀರ್ಥರು ಹೇಳಿದಂತೆ ಜೀವನದ ಕೊನೆಕ್ಷಣದವರೆಗೂ ಜೀವನವನ್ನು ಅನುಭವಿಸುವವರು ಯಶಸ್ವಿಯಾಗಲು ಸಾಧ್ಯ. ಒತ್ತಡ ಮುಕ್ತ ಸಮಾಜ ನಿರ್ಮಾಣ ಮತ್ತು ಆರೋಗ್ಯವನ್ನು ಸಮತೋಲನ ದಲ್ಲಿಡಲು ಆರೋಗ್ಯದ ಕುರಿತು ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಮಾತನಾಡಿ, ಪತ್ರಕರ್ತರಿಗೆ ತಮ್ಮ ಕೆಲಸದಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಲೇಖನಗಳನ್ನು ಬರೆದಷ್ಟು ಸುಲಭದ ಕೆಲಸ ಪತ್ರಕರ್ತರದ್ದಲ್ಲ. ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ, ಸೂಕ್ಷ್ಮ ವಿಚಾರಗಳ ಬಗ್ಗೆ ಪತ್ರಕರ್ತರು ವರದಿ ಮಾಡುತ್ತಾರೆ. ಪತ್ರಕರ್ತರಿಗೆ ಮತ್ತು ನಾಗರಿಕರಿಗೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವದು ಸಂತಸದ ವಿಚಾರ ಎಂದರು.

ವಿಕಲಚೇತನರು ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಇಲಾಖೆಯ ಎನ್.ಎಂ. ಜಗದೀಶ್ ಮಾತನಾಡಿ, ಹಿರಿಯ ನಾಗರಿಕರು ಮತ್ತು ಪತ್ರಕರ್ತರು ಹೆಚ್ಚು ಒತ್ತಡದಲ್ಲಿರುತ್ತಾರೆ. ಈ ಶಿಬಿರ ಸರಕಾರದ ನಿರ್ಲಕ್ಷ್ಯದಿಂದಾಗಿ ಆಗಿರುವದಲ್ಲ. ಪ್ರಗತಿಪರ ಚಿಂತಕರಿಂದ ಆಗುತ್ತಿರುವಂತದ್ದು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವೈದ್ಯ ಡಾ. ಬಿ.ಸಿ. ನವೀನ್ ಕುಮಾರ್, ನಮ್ಮ ದೇಶದಲ್ಲಿ ಎಂಟೂವರೆ ಕೋಟಿ ಹಿರಿಯ ನಾಗರಿಕರಿದ್ದು ಶೇ. 40% ರಷ್ಟು ನಾಗರಿಕರು ಒಂದಲ್ಲಾ ಒಂದು ರೀತಿ ಸಮಸ್ಯೆಯಲ್ಲಿದ್ದಾರೆ. ಇದರಲ್ಲಿ ಕೆಲವಷ್ಟು ಮಾತ್ರ ಬೆಳಕಿಗೆ ಬರುತ್ತದೆ. ಇಂದು ದೇಶದಲ್ಲಿ ವೃದ್ದಾಶ್ರಮಗಳು ಹೆಚ್ಚಾಗುತ್ತಿದ್ದು ಇವು ದೇಶದ ಸಂಸ್ಕøತಿಗೆ ಶೋಭೆ ತರುವಂತದ್ದಲ್ಲ ಎಂದರು.

ನಗರ ಪ್ರದೇಶದಲ್ಲಿ ಹಿರಿಯ ನಾಗರಿಕರನ್ನು ವೃದ್ದಾಶ್ರಮಕ್ಕೆ ಸೇರಿಸುವದು ಫ್ಯಾಷನ್ ಆಗಿದೆ. ಜೀವನದಲ್ಲಿ 65 ವರ್ಷದ ನಂತರ ದೈಹಿಕ ಸಮಸ್ಯೆ, ಮಾನಸಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ವಯಸ್ಸಾದ ನಂತರ ಹಿರಿಯ ನಾಗರಿಕರು ಪರಾವಲಂಬಿಗಳಾಗಿ ಜೀವನ ಸಾಗಿಸುವದು ವಿಷಾದ ಎಂದರು.

ಕೆ.ಎಂ.ಸಿ. ಆಸ್ಪತ್ರೆಯ ವೈದ್ಯ ಡಾ. ಮಿಥುನ್ ಮತ್ತು ಎಸ್.ಎಂ. ಚಂಗಪ್ಪ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸುವರ್ಣ ಆರೋಗ್ಯ ಟ್ರಸ್ಟ್ ಪ್ರಮುಖ ತೇಜಸ್, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ ಇರುವ ಆರೋಗ್ಯ ಯೋಜನೆಗಳ ಕುರಿತ ಮಾಹಿತಿಯನ್ನು ನೀಡಿದರು.

ನಂತರ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಜನರಲ್ ಮೆಡಿಸಿನ್, ಸ್ತ್ರೀರೋಗ ಚಿಕಿತ್ಸೆ, ನೇತ್ರರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು, ಗಂಟಲು ರೋಗ ಮತ್ತಿತರ ಚಿಕಿತ್ಸೆಗಳ ಬಗ್ಗೆ ತಪಾಸಣೆಯೊಂದಿಗೆ ಆರೋಗ್ಯದೆಡೆಗೆ ಮಾರ್ಗದರ್ಶನ ನೀಡಿದರು.