ಮಡಿಕೇರಿ, ಜೂ. 28 :ಜಮ್ಮಾ ಹಿಡುವಳಿದಾರರು ಹಾಗೂ ಕೊಡವ ಬೈ-ರೇಸ್‍ನ ಫಲಾನುಭವಿಗಳು ಬಂದೂಕು ವಿನಾಯಿತಿಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ವಿನಾಯಿತಿ ಹಕ್ಕನ್ನು ನೀಡಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸೇವ್ ಕೊಡಗು ಫೋರಂ ಸಂಘಟನೆ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಮೂಲಕ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಬಂದೂಕು ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಗಳಿಗೆ ಸಕಾಲದಲ್ಲಿ ವಿನಾಯಿತಿ ಹಕ್ಕು ದೊರೆಯದೇ ಇರುವ ಬಗ್ಗೆ ಸಂಘಟನೆಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು. ಅರ್ಜಿದಾರರನ್ನು ವಿನಾಕಾರಣ ಸತಾಯಿಸುವ ಮೂಲಕ ತಲೆತಲಾಂತರಗಳಿಂದ ಚಾಲ್ತಿಯ ಲ್ಲಿರುವ ಹಕ್ಕಿನಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಬಂದೂಕು ವಿನಾಯಿತಿಗೆ ಸಂಬಂಧಿಸಿದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.

ಕೊಡಗಿನ ಬಾಣೆ ಜಮೀನಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಂದ ಅಂಕಿತವಾಗಿರುವ ಕಾಯ್ದೆಯನ್ನು ತಕ್ಷಣ ಜಾರಿಗೊಳಿಸಬೇಕು, ಕಂದಾಯಕ್ಕೆ ಒಳಪಡದೇ ಇರುವ ಬಾಣೆ ಜಾಗದ ಅನುಭವದಾರರನ್ನು ಕಂದಾಯಕ್ಕೆ ಒಳಪಡಿಸಿ ಜಿಲ್ಲಾಡಳಿತ ಬಹಿರಂಗ ಘೋಷಣೆ ಮಾಡಬೇಕು, ಪಹಣಿ ಪತ್ರದಲ್ಲಿ ಕಾಫಿ ಬೆಳೆಯನ್ನು ಬಹು ವಾರ್ಷಿಕ ಖಾಯಂ ಬೆಳೆ ಎಂದು ನಮೂದಿಸಬೇಕು, ಕೊಡಗು ರಾಜ್ಯ ಕರ್ನಾಟಕದೊಂದಿಗೆ

(ಮೊದಲ ಪುಟದಿಂದ) ವಿಲೀನವಾದ ಸಂದರ್ಭ ನಡೆದ ಒಪ್ಪಂದದ ಷರತ್ತುಗಳನ್ನು ಬಹಿರಂಗ ಪಡಿಸಬೇಕು, ತೋಟದ ಮನೆ, ತೋಟದೊಳಗಿರುವ ಕಾರ್ಮಿಕರ ವಾಸದ ಮನೆ ಮತ್ತು ಗೋದಾಮು ಗಳಿಗೆ ಭೂಪರಿವರ್ತ ನೆಯ ನಿಯಮದಿಂದ ವಿನಾಯಿತಿ ನೀಡಬೇಕು, ತೋಟದ ಕಾರ್ಮಿಕರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವದೇ ನಿರ್ಬಂಧವಿಲ್ಲದೆ ಕನಿಷ್ಠ ದರದಲ್ಲಿ ನೀಡಬೇಕು, ಪಿತ್ರಾರ್ಜಿತ ವಾಸದ ಮನೆಯ ಖಾತೆ ಬದಲಾವಣೆಗೆ ಇರುವ ನಿಯಮ ಗಳನ್ನು ಸಡಿಲಗೊಳಿಸಬೇಕು, ಕೊಡಗಿನ ರೈತಾಪಿ ವರ್ಗ ತೋಟದೊಳಗೆ ಮನೆ ಅಥವಾ ಲೈನ್‍ಮನೆ ನಿರ್ಮಿಸಲು ಮುಂದಾದರೆ ಭೂಪರಿವರ್ತನೆಯ ಹೊಸ ನಿಯಮದಿಂದ ವಿನಾಯಿತಿ ನೀಡಬೇಕು, ಜಿಲ್ಲೆಯ ತರಿ ಭೂಮಿ ಅಥವಾ ಭತ್ತ ಬೆಳೆಯುವ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಯೋಜನೆಗಳು ಹಾಗೂ ರೆಸಾರ್ಟ್‍ಗಳಿಗಾಗಿ ಭೂಪರಿವರ್ತನೆ ಮಾಡುವದನ್ನು ತಕ್ಷಣ ಸ್ಥಗಿತಗೊಳಿಸಬೇಕು, ಬೆಳೆಗಾರರ ಪರವಾದ ಎಲ್ಲಾ ಅರ್ಜಿಗಳನ್ನು ಸರಳೀಕರಣಗೊಳಿಸಿ ಶೀಘ್ರ ವಿಲೇವಾರಿ ಮಾಡಬೇಕು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಮನವಿ ಪತ್ರವನ್ನು ಸೇವ್ ಕೊಡಗು ಫೋರಂನ ಪ್ರಮುಖರಾದ ಬಿದ್ದಾಟಂಡ ಟಿ. ದಿನೇಶ್, ಕೀಪಾಡಂಡ ಮಧು ಬೋಪಣ್ಣ, ಬಿದ್ದಾಟಂಡ ಜಿನ್ನು ನಾಣಯ್ಯ, ನೂರಂಬಾಡ ಎಸ್. ಉದಯಶಂಕರ್ ಮತ್ತಿತರರು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯ ದರ್ಶಿಗಳಿಗೆ ನೀಡಿದರು. ಈ ಸಂದರ್ಭ ಮಾತನಾಡಿದ ಆಪ್ತಕಾರ್ಯದರ್ಶಿ ಹರೀಶ್ ಬೋಪಣ್ಣ ಬೇಡಿಕೆಗಳ ಬಗ್ಗೆ ಉಸ್ತುವಾರಿ ಸಚಿವರ ಗಮನ ಸೆಳೆಯುವದಾಗಿ ಭರವಸೆ ನೀಡಿದರು.