ಕುಶಾಲನಗರ, ಜೂ. 28: ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ಯೋಜನೆಗಳು ಘೋಷಣೆಯಾಗಿ ಪ್ರಾರಂಭಿಕ ಹಂತ ಮುಗಿದಿದ್ದರೂ ಸಾರ್ವಜನಿಕ ಸೇವೆಗೆ ಲಭ್ಯವಾಗದ ಹಿನ್ನೆಲೆ ಕುಶಾಲನಗರ ಬಿಜೆಪಿ ಪಕ್ಷದ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಮನವಿ ಸಲ್ಲಿಸಿದರು.

ಕುಶಾಲನಗರಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಲಾಭವನ ಕಟ್ಟಡ, ಕೆಎಸ್‍ಆರ್‍ಟಿಸಿ ಡಿಪೋ ಯೋಜನೆ, ಕುಶಾಲನಗರ ವಿಶೇಷ ತಹಶೀಲ್ದಾರ್ ನೇಮಕ, ಉಪನೋಂದಣಾಧಿಕಾರಿ ಕಚೇರಿ, ನ್ಯಾಯಾಲಯದ ನೂತನ ಕಟ್ಟಡ ಈ ಯೋಜನೆಗಳನ್ನು ತಕ್ಷಣ ಪೂರ್ಣಗೊಳಿಸುವಂತೆ ಆಗ್ರಹಿಸಿದರು. ಸಂಬಂಧಿಸಿದ ಇಲಾಖೆಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುವದು ಎಂದು ಸಚಿವರು ಈ ಸಂದರ್ಭ ಭರವಸೆ ನೀಡಿದರು.

ಪಕ್ಷದ ನಗರಾಧ್ಯಕ್ಷ ಕೆ.ಜಿ. ಮನು, ಉಪಾಧ್ಯಕ್ಷ ಎಂ.ಬಿ. ಮೊಣ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್. ಮಂಜುಳಾ, ಪಕ್ಷದ ಪ್ರಮುಖರಾದ ಎಂ.ವಿ. ನಾರಾಯಣ, ಎಂ.ಡಿ. ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಭಾಸ್ಕರ್ ನಾಯಕ್, ಹೆಚ್.ಎನ್. ರಾಮಚಂದ್ರ ಮತ್ತು ಕಾರ್ಯಕರ್ತರು ಇದ್ದರು.

* ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಕೆಲವು ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕುಶಾಲನಗರ ಹಿತರಕ್ಷಣಾ ಸಮಿತಿ ಪ್ರಮುಖರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಮನವಿ ಸಲ್ಲಿಸಿದರು. ಕುಶಾಲನಗರದಲ್ಲಿ ಸಚಿವರನ್ನು ಭೇಟಿ ಮಾಡಿದ ಸಮಿತಿ ಪ್ರಮುಖರು ಜೀವನದಿ ಕಾವೇರಿ ತಟಗಳು ಅಕ್ರಮವಾಗಿ ಒತ್ತುವರಿಯಾಗಿದ್ದು, ನದಿ ಮಾಲಿನ್ಯಗೊಳ್ಳುತ್ತಿರುವದು ತಪ್ಪಿಸಲು ಕ್ರಮಕೈಗೊಳ್ಳುವದು, ಬೆಂಗಳೂರು-ಮಾಣಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಕುಶಾಲನಗರ-ಸುಂಟಿಕೊಪ್ಪ ವ್ಯಾಪ್ತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವದು, ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವದು, ಹಾರಂಗಿ ಉದ್ಯಾನವನಕ್ಕೆ ಪ್ರವಾಸಿಗರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವದು, ಕುಶಾಲನಗರ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಹಾಗೂ ಕುಶಾಲನಗರದಲ್ಲಿ ಸರಕಾರದಿಂದ ಅನುಮೋದನೆ ಗೊಂಡಿರುವ ಕೆಎಸ್‍ಆರ್‍ಟಿಸಿ ಡಿಪೋ ಸ್ಥಾಪನೆ, ವಿಶೇಷ ತಹಶೀಲ್ದಾರ್ ನೇಮಕ, ಉಪನೋಂದಣಾಧಿಕಾರಿ ಕಚೇರಿಯನ್ನು ಶೀಘ್ರ ಪ್ರಾರಂಭಿಸುವಂತೆ ಮನವಿ ಪತ್ರದಲ್ಲಿ ಕೋರಲಾಯಿತು.

ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವದರೊಂದಿಗೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಿತಿಗೆ ಅವಕಾಶ ಕಲ್ಪಿಸಲಾಗುವದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸಮಿತಿ ಪ್ರಮುಖರಾದ ಟಿ.ಆರ್. ಶರವಣಕುಮಾರ್, ಎಂ.ಎನ್. ಚಂದ್ರಮೋಹನ್ ಇದ್ದರು.