ಕುಶಾಲನಗರ, ಜೂ. 28: ವಿದ್ಯಾರ್ಥಿಗಳು ಪ್ರಾಯೋಗಿಕ ಮತ್ತು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಿದಲ್ಲಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಗ್ರೂಪ್ ಕ್ಯಾಪ್ಟನ್ ಆರ್.ಆರ್.ಲಾಲ್ ಹೇಳಿದರು.

ಕೂಡಿಗೆ ಸೈನಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವದೇ ಕಾರ್ಯದಲ್ಲಿ ಆತ್ಮವಿಶ್ವಾಸದೊಂದಿಗೆ ಮುಂದುವರೆಯಬೇಕಿದೆ. ಜೀವನದ ಗುರಿ ಸಾಧಿಸಲು ದೂರದೃಷ್ಟಿ, ಉತ್ತಮ ಸಂವಹನ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ವಿವಿಧ ವಿಭಾಗಗಳಿಗೆ ಆಯ್ಕೆಗೊಂಡ ನಾಯಕರುಗಳ ಬ್ಯಾಡ್ಜ್‍ಗಳನ್ನು ಅನಾವರಣಗೊಳಿಸುವದರ ಮೂಲಕ ಜವಾಬ್ದಾರಿಗಳನ್ನು ವಹಿಸಲಾಯಿತು. ಶಾಲಾ ವಿದ್ಯಾರ್ಥಿಗಳ ನಾಯಕನಾಗಿ ಕೆಡೆಟ್ ಪುನೀತ್, ಶಾಲಾ ಶಿಸ್ತಿನ ನಾಯಕನಾಗಿ ಕೆಡೆಟ್ ಶಿವರಾಜ್, ಸಾಂಸ್ಕøತಿಕ ಕಾರ್ಯಕ್ರಮಗಳ ನಾಯಕನಾಗಿ ಕೆಡೆಟ್ ಮನೋಜ್, ಭೋಜನಾಲಯದ ನಾಯಕನಾಗಿ ಕೆಡಟ್ ಯಶವಂತ್ ಗೌಡ, ಕ್ರೀಡಾ ನಾಯಕನಾಗಿ ಕೆಡೆಟ್ ಪೃಥ್ವಿರಾಜ್ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರೊಂದಿಗೆ ಶಾಲೆಯಲ್ಲಿರುವ ವಿವಿಧ ನಿಲಯಗಳ ನಾಯಕರುಗಳ ಪದಗ್ರಹಣ ಜರುಗಿತು. ವಿದ್ಯಾರ್ಥಿಗಳ ನಾಯಕನಾದ ಪುನೀತ್ ಎಲ್ಲಾ ವಿಭಾಗಗಳ ನಾಯಕರುಗಳಿಗೆ ಧೈರ್ಯ, ದೃಢತೆ ಮತ್ತು ಪ್ರಾಮಾಣಿಕತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲೆಯ ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಮನಿಷಾ ಶರ್ಮ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಮ್ಯಾಥ್ಯು, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಜರಿದ್ದರು.

ಎಂ.ವೈ ವಿಜಯ್ ಕಾರ್ಯಕ್ರಮ ನಿರೂಪಿಸಿದರು, ಪವನ್ ತಿಮ್ಮಯ್ಯ ವಂದಿಸಿದರು.