ಕುಶಾಲನಗರ, ಜೂ. 28: ಕುಶಾಲನಗರ ಪಟ್ಟಣದಲ್ಲಿ ಶಿಥಿಲ ಕಟ್ಟಡವೊಂದು ಅಪಾಯಕಾರಿ ಹಂತದಲ್ಲಿ ನಿಂತಿದ್ದು ಭಾರೀ ಅನಾಹುತಕ್ಕೆ ಅವಕಾಶ ಉಂಟಾಗುವ ಸಾಧ್ಯತೆ ಸೃಷ್ಟಿಯಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಮುಂಭಾಗ ಇರುವ ಹಣ್ಣಿನ ಅಂಗಡಿ ಮಾರಾಟ ಮಾಡುತ್ತಿರುವ ಈ ಕಟ್ಟಡ ಕಳೆದ ಹಲವು ವರ್ಷಗಳಿಂದ ಯಾವದೇ ನಿರ್ವಹಣೆ ಯಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಹೆದ್ದಾರಿ ರಸ್ತೆಯಲ್ಲಿರುವ ಈ ಕಟ್ಟಡದ ಮುಂಭಾಗ ದಿನನಿತ್ಯ ಸಾವಿರಾರು ನಾಗರಿಕರು ಓಡಾಡುತ್ತಿದ್ದು, ಕಟ್ಟಡದ ನೆಲ ಅಂತಸ್ತಿನಲ್ಲಿ ಹಣ್ಣಿನ ಅಂಗಡಿಗಳು ವ್ಯಾಪಾರ ವಹಿವಾಟು ನಡೆಸುತ್ತಿವೆ. ಈ ಕಟ್ಟಡ ತಮಗೆ ಸೇರಿದ್ದೆಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಟ್ಟಡದ ಮುಂಭಾಗ ಫಲಕವೊಂದನ್ನು ಅಳವಡಿಸಿದ್ದು ಈ ಬಗ್ಗೆ ಯಾವದೇ ರೀತಿಯ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎನ್ನುವ ಆರೋಪಗಳು ಸ್ಥಳೀಯರಿಂದ ಕೇಳಿಬಂದಿದೆ. ಕಟ್ಟಡದಲ್ಲಿ ಕಳೆದ 2 ವರ್ಷಗಳ ಅವಧಿಯಲ್ಲಿ ಓರ್ವ ವ್ಯಕ್ತಿಯ ಅನಾಥ ಶವ ಪತ್ತೆಯಾಗಿತ್ತು. ಇತ್ತೀಚೆಗೆ ವ್ಯಕ್ತಿಯೊಬ್ಬ ಕಟ್ಟಡದ ಕೆಳಭಾಗದಲ್ಲಿ ಮೃತಪಟ್ಟಿದ್ದ ಘಟನೆಯೂ ನಡೆದಿತ್ತು. ಈ ಶಿಥಿಲ ಕಟ್ಟಡವನ್ನು ತೆರವು ಗೊಳಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಕಟ್ಟಡ ವ್ಯಾಜ್ಯದಲ್ಲಿದ್ದು 2010 ರಿಂದ ತಮ್ಮ ವಶದಲ್ಲಿರುವದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಮಾಹಿತಿ ನೀಡಿದ್ದಾರೆ. ಭಾರೀ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಈ ಶಿಥಿಲಗೊಂಡಿರುವ ಹಳೆಯ ಕಟ್ಟಡವನ್ನು ಕೂಡಲೇ ತೆರವುಗೊಳಿಸಲು ಸಂಬಂಧಿಸಿದ ಆಡಳಿತ ಕ್ರಮ ಕೈಗೊಳ್ಳಬೇಕು. ಅಥವಾ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸುವದು ಒಳಿತು ಎಂದು ನಾಗರಿಕರು ಪತ್ರಿಕೆಯೊಂದಿಗೆ ಮನವಿ ಮಾಡಿದ್ದಾರೆ.

ವರದಿ-ಸಿಂಚು