ನಾಪೋಕ್ಲು, ಜೂ. 28: ಇಲ್ಲಿಗೆ ಸಮೀಪದ ಕಕ್ಕಬ್ಬೆ-ಕುಂಜಿಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಯವಕಪಾಡಿ ಹಾಗೂ ಮರಂದೋಡ ಗ್ರಾಮಗಳ ಬೆಳೆಗಾರರ ತೋಟಗಳಿಗೆ ಹಾಡುಹಗಲೇ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು, ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ಭಯಭೀತರಾಗಿದ್ದಾರೆ. ಕಳೆದ ಮೂರು-ನಾಲ್ಕು ದಿನಗಳಿಂದ ಯವಕಪಾಡಿ ಗ್ರಾಮದ ಮಾದೆಯಂಡ, ಅಲ್ಲಾರಂಡ, ಪಾಡೆಯಂಡ ಕುಟುಂಬಸ್ಥರ ಮತ್ತು ವೈಕೋಳು ಸುತ್ತಮುತ್ತ 4-5 ಕಾಡಾನೆಗಳು ಗುಂಪುಗಳಾಗಿ ಮರಿಯಾನೆ ಸೇರಿದಂತೆ ಸುಮಾರು 15ಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟಿದ್ದು, ಉಪಟಳ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ಇಲ್ಲಿನ ಮಾದೆಯಂಡ ಅಪ್ಪಯ್ಯ ಎಂಬವರು ತಮ್ಮ ಜಮೀನಿನಲ್ಲಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಿದ 4 ತಿಂಗಳ 1500 ನೇಂದ್ರಬಾಳೆ ಗಿಡಗಳನ್ನು ಧ್ವಂಸ ಮಾಡಿದ್ದು ಭಾರೀ ನಷ್ಟ ಸಂಭವಿಸಿದೆ.ಮಾತ್ರವಲ್ಲದೇ ಕಳೆದ ರಾತ್ರಿ ಕುಡಿಯರ ಮುತ್ತಪ್ಪ ಅವರ ಮನೆಯ ಸುತ್ತಮುತ್ತ ಓಡಾಡಿರುವ ಕಾಡಾನೆಗಳು ಮನೆಯ ಶೌಚಾಲಯ ಗುಂಡಿಗೆ ಬಿದ್ದು ಹಿಂತಿರುಗಿವೆ. ಹಗಲು ಕಾಣಸಿಗುವ ಕಾಡಾನೆಗಳನ್ನು ಪಟಾಕಿ ಸಿಡಿಸಿ ಗ್ರಾಮಸ್ಥರು ಓಡಿಸಲು ಪ್ರಯತ್ನ ಪಟ್ಟರೂ ಕ್ಯಾರೇ ಎನ್ನದ ಕಾಡಾನೆಗಳು ಗ್ರಾಮದಲ್ಲಿ ಸಂಚರಿಸುತ್ತಾ ಉಪಟಳ ನೀಡುತ್ತಿವೆ.

ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಮತ್ತು ನಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ದುಗ್ಗಳ ಸದಾನಂದ