ಮಡಿಕೇರಿ, ಜೂ. 28: ಕೊಡಗು ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬಿರುನಾಣಿ ಸುತ್ತಮುತ್ತ ದಕ್ಷಿಣ ಕೊಡಗಿನಲ್ಲಿ ಹಿಂದಿನ 48 ಗಂಟೆಗಳಲ್ಲಿ ಅಧಿಕ ಮಳೆ ದಾಖಲಾಗಿದೆ.ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 1.11 ಇಂಚು ಮಳೆಯಾದರೆ, ವರ್ಷಾರಂಭದಿಂದ ಇದುವರೆಗೆ 26.14 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 18.52 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 1.25 ಇಂಚು ಮಳೆಯಾದರೆ, ಇದುವರೆಗೆ 33.80 ಇಂಚು ದಾಖಲಾಗಿದೆ. ಕಳೆದ ವರ್ಷ ಈ ವೇಳೆಗೆ 29.57 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ 1.69 ಇಂಚು ಸರಾಸರಿ ಮಳೆಯೊಂದಿಗೆ ಈತನಕ 23.89 ಇಂಚು ಮಳೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಗೆ 13.69 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ 0.40 ಇಂಚು ಮಳೆಯೊಂದಿಗೆ ಇದುವರೆಗೆ 19.87 ಇಂಚು ಸರಾಸರಿ ಹಾಗೂ ಹಿಂದಿನ ಸಾಲಿನಲ್ಲಿ ಇದುವರೆಗೆ 12.29 ಇಂಚು ದಾಖಲಾಗಿತ್ತು.

(ಮೊದಲ ಪುಟದಿಂದ)

ಗೋಣಿಕೊಪ್ಪಲು

ದಕ್ಷಿಣ ಕೊಡಗಿನಾದ್ಯಂತ ಕಳೆದ ಎರಡು ದಿನಗಳಲ್ಲಿ 6 ಇಂಚಿಗೂ ಅಧಿಕ ಮಳೆ ದಾಖಲಾಗಿದ್ದು ರೈತರಲ್ಲಿ ಹರ್ಷ ಮೂಡಿದೆ. ಕಳೆದ ವರ್ಷ ಮಳೆಯ ಅಭಾವದಿಂದಾಗಿ ಭತ್ತದ ಉತ್ಪಾದನೆಗೆ ತೀವ್ರ ಹಿನ್ನೆಡೆಯಾಗಿ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಜನವರಿಯಿಂದಲೇ ಆಶಾದಾಯಕ ಮಳೆಯಾಗಿದ್ದು, ದಕ್ಷಿಣ ಕೊಡಗಿನಾದ್ಯಂತ ಅಲ್ಲಲ್ಲಿ 16 ಇಂಚುಗಳಿಂದ 47 ಇಂಚುಗಳವರೆಗೂ ಮಳೆ ದಾಖಲಾಗಿದೆ.

ತಾಲೂಕಿನ ಅತ್ಯಧಿಕ ಮಳೆ ಬೀಳುವ ಬಿರುನಾಣಿಯಲ್ಲಿ ಈವರೆಗೆ 47.66 ಇಂಚು ಮಳೆ ದಾಖಲಾಗಿದೆ. ಕಳೆದ 48 ಗಂಟೆಗಳಲ್ಲಿ 11.60 ಇಂಚು ಮಳೆ ಸುರಿದಿದ್ದು, ಇದೀಗಲೂ ಭಾರೀ ಮಳೆಯಾಗುತ್ತಿರುವ ವರದಿಯಾಗಿದೆ. ಕಳೆದ 48 ಗಂಟೆ ಅವಧಿಯಲ್ಲಿ ಬಿ.ಶೆಟ್ಟಿಗೇರಿ ಅರಣ್ಯ ಅಂಚಿನಲ್ಲಿ ಒಟ್ಟು 8.35 ಇಂಚು ಮಳೆಯಾಗಿದ್ದರೆ, ಗೋಣಿಕೊಪ್ಪಲಿನಲ್ಲಿ 6 ಇಂಚು ಮಳೆ ದಾಖಲಾಗಿದೆ. ಬಾಳೆಲೆ, ಕೊಟ್ಟಗೇರಿ, ಕಾನೂರು ವ್ಯಾಪ್ತಿಯಲ್ಲಿಯೂ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.

ದಕ್ಷಿಣ ಕೊಡಗಿನ ಎಲ್ಲೆಡೆ ಇಂದು ಅಪರಾಹ್ನದ ನಂತರವೂ ಭಾರೀ ಮಳೆಯಾಗುತ್ತಿರುವ ವರದಿಯಾಗಿದೆ. ಕುಟ್ಟ ವ್ಯಾಪ್ತಿಯಲ್ಲಿ ಈವರೆಗೆ 14 ಇಂಚು ಮಳೆಯಾಗಿದೆ. ಕಳೆದ ಎರಡು ದಿನದಲ್ಲಿ 3.55 ಇಂಚು ಮಳೆ ದಾಖಲಾಗಿದೆ.

ಗೋಣಿಕೊಪ್ಪಲಿನಲ್ಲಿ ಈವರೆಗೆ ಒಟ್ಟಾರೆ 26.58 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ ಒಟ್ಟು 15.37 ಇಂಚು ಮಳೆ ದಾಖಲಾಗಿತ್ತು. ಬಾಳೆಲೆಯಲ್ಲಿ ಇದುವರೆಗೆ 20 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ ಕೇವಲ 10 ಇಂಚು ಮಳೆಯಾಗುವ ಮೂಲಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಇಲ್ಲಿನ ರೈತಾಪಿ ವರ್ಗ ಭತ್ತದ ಉತ್ಪಾದನೆಯಲ್ಲಿ ತೀವ್ರ ನಷ್ಟ ಅನುಭವಿಸಿದ್ದರು.

ಕೊಟ್ಟಗೇರಿಯಲ್ಲಿ ಈವರೆಗೆ 24.40 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ 13 ಇಂಚು ಮಾತ್ರ ಮಳೆಯಾಗಿತ್ತು. ಕಾನೂರು-ಕೋತೂರು ವ್ಯಾಪ್ತಿಯಲ್ಲಿ 18 ಇಂಚು ಮಳೆ ದಾಖಲಾದ ವರದಿಯಾಗಿದೆ. ಇನ್ನುಳಿದಂತೆ ಶ್ರೀಮಂಗಲ, ಹುದಿಕೇರಿ, ಪೆÇನ್ನಂಪೇಟೆ, ಮಾಕುಟ್ಟ, ನಾಗರಹೊಳೆ, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ, ಬಿಟ್ಟಂಗಾಲ, ಹಾತೂರು ವ್ಯಾಪ್ತಿಯಲ್ಲಿಯೂ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ವರದಿಯಾಗಿದೆ.

ನಿಟ್ಟೂರು ಹಳೇ ಸೇತುವೆ ಮೇಲೆ ಇನ್ನೂ ಲಕ್ಷ್ಮಣ ತೀರ್ಥ ನದಿ ಪ್ರವಾಹ ಸ್ಥಿತಿ ಉದ್ಭವವಾಗಿಲ್ಲ. ಒಂದೊಮ್ಮೆ ಪ್ರವಾಹ ಸ್ಥಿತಿ ಉದ್ಭವವಾದರೆ ನೂತನ ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವದರಿಂದ ನಿಟ್ಟೂರು-ಬಾಳೆಲೆ ಸಂಪರ್ಕ ಕಡಿತಗೊಂಡು ವಾಹನ ಓಡಾಟ ನಿಲುಗಡೆಯಾಗಲಿದೆ. ಇದೀಗ ನೂತನ ಸೇತುವೆಯನ್ನು ರೂ.5.40 ಕೋಟಿ ವೆಚ್ಚದಲ್ಲಿ ಒಟ್ಟು 34 ಅಡಿಗೆ ಎತ್ತರಿಸಲಾಗಿದೆ. ಲಕ್ಷ್ಮಣ ತೀರ್ಥ ನದಿಯನ್ನು ಅಗಲೀಕರಣ ಮಾಡಿರುವ ಕಾರಣ ಪ್ರವಾಹ ನಿಧಾನವಾಗಿ ಏರುವ ಸಾಧ್ಯತೆ ಇದೆ. ನಿಟ್ಟೂರು-ಬಾಳೆಲೆ ಸಂಪರ್ಕ ರಸ್ತೆಯನ್ನು ಎತ್ತರಿಸಲಾಗುತ್ತಿದ್ದು, ಪ್ರವಾಹ ಸ್ಥಿತಿ ಉಲ್ಭಣಗೊಂಡಲ್ಲಿ ಅಲ್ಲಲ್ಲಿ ನೂತನ ಕಚ್ಚಾರಸ್ತೆ ಕುಸಿತದ ಸಾಧ್ಯತೆಯೂ ಇದೆ.

ರಸ್ತೆ ವಿಸ್ತರಣೆಗೆ ಬಾಳೆಲೆ ವ್ಯಾಪ್ತಿಯಿಂದ ಸಾಗುವಾಗ ನೂತನ ಸೇತುವೆ ರಸ್ತೆ ಕಾಮಗಾರಿಗೆ 5 ಸೆಂಟ್ ನಿವೇಶನ ಅಗತ್ಯವಿದ್ದು, ಖಾಸಗಿ ಮಾಲೀಕರು ಮತ್ತು ಲೋಕೋಪಯೋಗಿ ಇಲಾಖೆ ನಡುವೆ ಅಗತ್ಯ ಜಾಗಕ್ಕಾಗಿ ಮಾತೂಕತೆ ನಡೆಯುತ್ತಿದೆ. ಉಳಿದಂತೆ ಹಲವು ರೈತಾಪಿ ವರ್ಗ ಇಲಾಖೆಯ ರಸ್ತೆ ಅಗಲೀಕರಣಕ್ಕೆ ಉಚಿತವಾಗಿ ತಮ್ಮ ತಮ್ಮ ಜಾಗವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಈ ವಿಭಾಗದ ಹೋರಾಟಗಾರ ಅರಮಣಮಾಡ ಸತೀಶ್ ದೇವಯ್ಯ, ಬಾಳೆಲೆ ಗ್ರಾ.ಪಂ.ಮಾಜಿ ಅಧ್ಯಕ್ಷ ಆದೇಂಗಡ ವಿನು, ಪೆÇನ್ನಿಮಾಡ ನಂಜಪ್ಪ ಹಾಗೂ ಅರಮಣಮಾಡ ಅರುಣ್ ತಮ್ಮಯ್ಯ ತಿಳಿಸಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಅವರನ್ನು ಬಾಳೆಲೆ ನಾಗರಿಕರ ನಿಯೋಗ ಭೇಟಿ ಮಾಡಿದ್ದು, ತುರ್ತು ನಿಟ್ಟೂರು ಸೇತುವೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಅಭಿವೃದ್ಧಿ ಜಾಗಕ್ಕೆ ಅಧಿಸೂಚನೆ ಹೊರಡಿಸಲು ಮನವಿ ಮಾಡಿದ್ದಾರೆ.

ನಲ್ಲೂರು-ಬಾಳೆಲೆ-ಪೆÇನ್ನಂಪೇಟೆ ಸಂಪರ್ಕ ರಸ್ತೆ ಮಾರ್ಗ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಇದೀಗ ಸ್ಥಗಿತಗೊಂಡಿದೆ. ಕೀರೆ ಹೊಳೆಗೆ ಅಡ್ದಲಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು ಇದೀಗ ಇನ್ನೂ ಯಾವದೇ ಪ್ರವಾಹದ ಸ್ಥಿತಿ ಕಂಡು ಬಂದಿಲ್ಲ. ತಾಲೂಕಿನಾದ್ಯಂತ ಗದ್ದೆ ಉಳುಮೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ವಾಡಿಕೆ ಮಳೆಯಾಗಿ ಭತ್ತದ ಮಡಿಗಳಲ್ಲಿ ನೀರು ನಿಂತಲ್ಲಿ ಮಾತ್ರ್ರ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ.

ಕಳೆದ ವರ್ಷ ಒಂದು ಹೆಕ್ಟೇರ್‍ಗೆ ತಲಾ 50 ಕ್ವಿಂಟಾಲ್ ಭತ್ತದ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ, ಬರದ ಛಾಯೆ ಹಿನ್ನೆಲೆ ಹೆಕ್ಟೇರ್‍ಗೆ ಕೇವಲ 28 ಕ್ವಿಂಟಾಲ್ ಭತ್ತದ ಉತ್ಪಾದನೆಯಾಗಿದ್ದು, ಒಟ್ಟಾರೆ ಶೇ.50 ರಷ್ಟು ಭತ್ತದ ಉತ್ಪಾದನೆ ಕುಂಠಿತಗೊಂಡಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಬಾರಿ ಭತ್ತದ ಉತ್ಪಾದನೆ ನಷ್ಟದ ಹಿನ್ನೆಲೆ ಪೆÇ್ರೀತ್ಸಾಹ ಧನ, ನಷ್ಟ ಪರಿಹಾರ ನೀಡಲಾಗಿದೆ. ಕೆಲವು ರೈತರ ಆಧಾರ್ ಕಾರ್ಡ್ ಇತ್ಯಾದಿ ತಾಂತ್ರಿಕ ಕಾರಣಗಳಿಗಾಗಿ ಪರಿಹಾರ ನೀಡಲಾಗಿಲ್ಲ ಎಂದು ವೀರಾಜಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೀನಾ ಮಾಹಿತಿ ನೀಡಿದ್ದಾರೆ.

14000 ಹೆಕ್ಟೇರ್ ಗುರಿ

ಈ ಬಾರಿ ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 14,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಉತ್ಪಾದನೆ ಗುರಿ ಹೊಂದಲಾಗಿದ್ದು, 1130 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ದಾಸ್ತಾನಿದೆ. ಈಗಾಗಲೇ ರೈತರು ಸುಮಾರು 600 ಕ್ವಿಂಟಾಲ್ ಬೀಜವನ್ನು ಖರೀದಿಸಿ, ಸಸಿ ಮಡಿ ಮಾಡಲು 50 ಎಕರೆ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಲಾಗಿದೆ. ಪೆÇನ್ನಂಪೇಟೆ ಭತ್ತದ ಸಂಶೋಧನಾ ಕೇಂದ್ರ ಪ್ರಾತ್ಯಕ್ಷಿಕಾ ಪ್ರದೇಶದಲ್ಲಿಯೂ ಸುಮಾರು 10 ಎಕರೆ ಪ್ರದೇಶದಲ್ಲಿ ಭತ್ತದ ಬಿತ್ತನೆ ಮಾಡಲಾಗಿದೆ.

ಈ ಬಾರಿ 6000 ಹೆಕ್ಟೇರ್ ಪ್ರದೇಶದಲ್ಲಿ ನಾಟಿಯಂತ್ರದ ಮೂಲ ಭತ್ತದ ಸಸಿ ನಾಟಿ ಮಾಡುವ ಗುರಿ ಹೊಂದಲಾಗಿದ್ದು ಎಕರೆಗೆ ರೂ.600 ಪೆÇ್ರೀತ್ಸಾಹ ಧನ ಹಾಗೂ 5 ಎಕರೆವರೆಗೆ ಗರಿಷ್ಟ ರೂ.3000 ಪೆÇ್ರೀತ್ಸಾಹಧನ ನೀಡಲಾಗುವದು ಎಂದು ರೀನಾ ಮಾಹಿತಿ ನೀಡಿದ್ದಾರೆ. ಕಾನೂರು- ಶ್ರೀಮಂಗಲ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮೂಲಕವೂ ಈ ಬಾರಿ ಭತ್ತದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.

ಮಳೆಯ ತೀವ್ರತೆ ಇದೇ ವೇಗದಲ್ಲಿ ಮುಂದುವರಿದರೆ ಕಾನೂರು, ಬಾಳೆಲೆ, ಶ್ರೀಮಂಗಲ, ಅಮ್ಮತ್ತಿ ವ್ಯಾಪ್ತಿಯಲ್ಲಿ ಉಳುಮೆ ಕಾರ್ಯ ವೇಗ ಪಡೆದು ಕೊಳ್ಳಲಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.

ಆರಿದ್ರ ಆರ್ಭಟ

ಗೋಣಿಕೊಪ್ಪ ಸೇರಿದಂತೆ ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಕಾನೂರು, ತಿತಿಮತಿ, ಪಾಲಿಬೆಟ್ಟ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಆರಿದ್ರ ಮಳೆಯ ಆರ್ಭಟ ಹೆಚ್ಚಾಗಿದೆ. ಶ್ರೀಮಂಗಲದ ಲಕ್ಷ್ಮಣ ತೀರ್ಥ ನದಿ ಮತ್ತು ಪಟ್ಟಣದ ಕೀರೆ ಹೊಳೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.

ತಡೆಗೋಡೆ ಕುಸಿತ

3ನೇ ವಿಭಾಗದ ಕೀರೆಹೊಳೆ ಬದಿಯಲ್ಲಿರುವ ತಡೆಗೋಡೆ ಕುಸಿತಗೊಂಡಿದೆ. 2010 ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು 3 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಗೊಂಡಿತ್ತು.ಉಳಿದ ತಡೆಗೋಡೆಯ ಭಾಗಗಳು ಬಿರುಕು ಬಿಟ್ಟಿದ್ದು ಕುಸಿತದ ಭೀತಿ ಎದುರಾಗಿದೆ.

ದಸಂಸ ಜಿಲ್ಲಾ ಸಂಚಾಲಕ ಪರಶುರಾಮ್ ಮಾಧ್ಯಮದೊಂದಿಗೆ ಮಾತನಾಡಿ, ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಯಾವದೇ ಪ್ರಯೋಜನವಿಲ್ಲ. ಉಳಿದ ಭಾಗವು ಬಿರುಕು ಬಿಟ್ಟಿದ್ದು ಇಲ್ಲಿನ ನಿವಾಸಿಗಳಿಗೆ ಭಯ ಎದುರಾಗಿದೆ. ದಿನನಿತ್ಯ ಮಕ್ಕಳು ಇಲ್ಲಿ ಆಟವಾಡುತ್ತಿರುತ್ತಾರೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದ್ದಾರೆ.

ವೀರಾಜಪೇಟೆ

ವೀರಾಜಪೇಟೆ ವಿಭಾಗದಲ್ಲಿ ಏಳು ದಿನಗಳ ಹಿಂದೆ ಕುಂಠಿತಗೊಂಡಿದ್ದ ಮಳೆ 3 ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವದರಿಂದ, ಮುಂಗಾರು ತೀವ್ರತೆ ಹೆಚ್ಚಿದೆ. ಕದನೂರು ಮೈತಾಡಿ ಗ್ರಾಮಗಳಲ್ಲಿ ಭತ್ತದ ಸಸಿನೆಡಲು ಸಿದ್ದತೆ ನಡೆಸಿದ್ದರೂ ಕೃಷಿ ಭೂಮಿ ಜಲಾವೃತಗೊಂಡು ರೈತರು ಕೃಷಿ ಚಟುವಟಿಕೆಗಳನ್ನು ಮಳೆ ನಿಧಾನವಾಗುವ ತನಕ ಮುಂದೂಡಬೇಕಾದ ಪರಿಸ್ಥಿತಿ ಒದಗಿದೆ.

ಆರ್ಜಿ, ಬೇಟೋಳಿ, ಹೆಗ್ಗಳ,ಕೆದಮುಳ್ಳೂರು, ಪಾಲಂಗಾಲ, ಬಾಳುಗೋಡು, ಪೆರುಂಬಾಡಿ ಬಿಟ್ಟಂಗಾಲ ಸೇರಿದಂತೆ ವಿವಿಧೆಡೆಗಳಲ್ಲಿ ಭಾರೀ ಗಾಳಿ ಬೀಸುವದರೊಂದಿಗೆ ರಭಸದಿಂದ ಮಳೆ ಸುರಿಯುತ್ತಿದೆ. ಕೊಡಗು ಕೇರಳ ಗಡಿ ಪ್ರದೇಶ ಮಾಕುಟ್ಟ ಕೂಟುಪೊಳೆ ವ್ಯಾಪ್ತಿಯಲ್ಲಿ ಮಳೆಯ ತೀವ್ರತೆ ಉಂಟಾಗಿದೆ. ಕೊಡಗಿನಲ್ಲಿ ಮುಂಗಾರು ವಿಳಂಬವಾದರೂ ಮಳೆಯ ತೀವ್ರತೆ ಹೆಚ್ಚಿರುವದರಿಂದ ಹಿಂದಿನ ವರ್ಷಕ್ಕಿಂತಲೂ ಈ ವರ್ಷ ನಿರೀಕ್ಷಿತ ಮಳೆಯಾಗುವ ಸಾಧ್ಯತೆ ಇದೆ. ಈಚೆಗಿನ ಮಳೆಯಿಂದ ವೀರಾಜಪೇಟೆ ಸುತ್ತ ಮುತ್ತಲಿರುವ ಕೆರೆ, ಹೊಳೆ, ತೋಡುಗಳು ನೀರಿನಿಂದ ಭರ್ತಿಯಾಗಿವೆ. ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತೆರೆದ ಬಾವಿಗಳ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ. ಇದೇ ವ್ಯಾಪ್ತಿಯ ತೋಡುಗಳು ತುಂಬಿ ಹರಿಯುತ್ತಿವೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಪಟ್ಟಣಕ್ಕೆ ನೀರು ಪೊರೈಕೆಯಲ್ಲಿ ಸುಧಾರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇತ್ರಿ ಗ್ರಾಮದ ಕಾವೇರಿ ಹೊಳೆಯಲ್ಲಿಯೂ ನೀರಿನ ಪ್ರಮಾಣ ಸುಮಾರು ಎರಡೂವರೆ ಅಡಿಗಳಷ್ಟು ಏರಿಕೆಯನ್ನು ಕಂಡಿದೆ ಎಂದು ಬೇತ್ರಿ ಗ್ರಾಮದ ನಿವಾಸಿಗಳು ತಿಳಿಸಿದ್ದಾರೆ. ನಿನ್ನೆ ಬೆಳಗಿನಿಂದ ಇಂದು ಬೆಳಗಿನವರೆಗೆ ಎರಡು ಇಂಚು ಮಳೆ ಸುರಿದಿದೆ.

- ಟಿ.ಎಲ್.ಶ್ರೀನಿವಾಸ್ , ದಿನೇಶ್ ಎನ್.ಎನ್., ಡಿ.ಎಂ.ಆರ್.