ಕೂಡಿಗೆ, ಜೂ. 28: ಇತ್ತೀಚೆಗೆ ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯನ್ನು ಸಂಬಂಧಪಟ್ಟ ಇಲಾಖೆಗಳ ಕೆಲವು ಅಧಿಕಾರಿಗಳ ಗೈರು ಹಾಜರಿ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಅಂದು ಮುಂದೂಡಲ್ಪಟ್ಟ ಗ್ರಾಮ ಸಭೆಯು ಇಂದು ಮುಳ್ಳುಸೋಗೆ ಗ್ರಾ.ಪಂ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಗ್ರಾ.ಪಂನ ಮಾಜಿ ಸದಸ್ಯರಾದ ರಾಜೇಶ್ ಮತ್ತು ಹರೀಶ್ 2 ವರ್ಷಗಳಿಂದ ಗ್ರಾಮ ಸಭೆಗಳನ್ನೇ ನಡೆಸದೆ ವಸತಿ ರಹಿತರಿಗೆ ಹಾಗೂ ಕಾಮಗಾರಿಗಳಿಗೆ ಸರ್ಕಾರದ ಹಣವನ್ನು ಮಂಜೂರು ಮಾಡಿರುವ ವಿಷಯಗಳ ಕುರಿತು ಅಧ್ಯಕ್ಷರನ್ನು ಪ್ರಶ್ನಿಸಿದರು.

ನಮ್ಮ ಗ್ರಾಮ, ನಮ್ಮ ಯೋಜನೆಯಲ್ಲಿ ಗುರುತಿಸಲಾದ ಫಲಾನುಭವಿಗಳನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗಳಿಗೆ ಪೂರಕವಾಗಿ ಗ್ರಾಮಸ್ಥರಾದ ಮಹೇಶ್, ಗಣೇಶ್, ಹೆಲನ್, ರೋಹಿಣಿ, ಮಣಿ ಸೇರಿದಂತೆ ಬಹುತೇಕ ಗ್ರಾಮಸ್ಥರು ಸಭೆಯಲ್ಲಿ ಗೊಂದಲ ಸೃಷ್ಠಿ ಮಾಡಿದರು.

ನೋಡೆಲ್ ಅಧಿಕಾರಿಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಹೇಮಂತ್ ಕುಮಾರ್ ಗ್ರಾಮಸ್ಥರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಈ ಸಭೆ ಮಳೆ ಬರುವ ಸೂಚನೆಯ ಕಾರಣದಿಂದ ಸಮೀಪದ ಶಾಲೆಯ ಸಭಾಂಗಣದಲ್ಲಿ ಸಭೆ ಪ್ರಾರಂಭ ಮಾಡಲಾಗಿತ್ತು. ಸಭಿಕರ ಸಂಖ್ಯೆ ಹೆಚ್ಚಾಗಿ, ಕೂರಲು ಸ್ಥಳವಿಲ್ಲದೆ ಸಬಿಕರೆಲ್ಲರ ಒತ್ತಾಯ, ಒತ್ತಡಗಳ ಹಿನ್ನೆಲೆಯಲ್ಲಿ ಮಳೆಯೂ ಬರದ ಕಾರಣ ಗ್ರಾ.ಪಂ. ಆವರಣದಲ್ಲಿಯೇ ಗ್ರಾಮಸಭೆ ಮತ್ತೆ ಮುಂದುವರೆಯಿತು.

ಗಲಾಟೆ ಗದ್ದಲಗಳು ತಿಳಿಯಾಗುತ್ತಿದ್ದಂತೆ ವಿದ್ಯುಚ್ಛಕ್ತಿ, ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯೋಜನೆಗಳ ವಿವರಗಳನ್ನು ಗ್ರಾಮಸ್ಥರಿಗೆ ನೀಡಿದರು. ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ 2016-17 ನೇ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ, ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನ, ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳ ವಿವರಗಳನ್ನು ನೀಡಿದರು.

ಅನೇಕ ಇಲಾಖಾ ಕಾಮಗಾರಿಗಳ ಚರ್ಚೆಗಳ ನಂತರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಇಲಾಖೆಯ ಸವಲತ್ತು, ಫಲಾನುಭವಿಗಳ ಆಯ್ಕೆಯ ಬಗ್ಗೆ ಬಂದಿರುವ ಅರ್ಜಿಗಳನ್ನು ಮತ್ತು ಇನ್ನುಳಿದ ಮನೆ ನಿವೇಶನಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಕಛೇರಿಯ ಸಮಯದಲ್ಲಿ ಫಲಾನುಭವಿಗಳು ಅರ್ಜಿಗಳನ್ನು ನೀಡಬಹುದು. ಈ ವಿಷಯಕ್ಕೆ ಕಾಲಕಾಲಕ್ಕೆ ಮಾಸಿಕ-ಸಭೆಗಳನ್ನು ನಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲಾಗುವದು ಎಂದರು.

ಸಭೆಯಲ್ಲಿ ಜಿ.ಪಂ ಸದಸ್ಯರುಗಳಾದ ಮಂಜುಳಾ, ಚಂದ್ರಕಲಾ, ತಾ.ಪಂ ಸದಸ್ಯರಾದ ಪುಷ್ಪಾ, ಗ್ರಾ.ಪಂ ಉಪಾಧ್ಯಕ್ಷ ತಾರಾನಾಥ್, ಗ್ರಾ.ಪಂ. ನ ಎಲ್ಲಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗೊಂದಿಬಸವನಹಳ್ಳಿ, ಮುಳ್ಳುಸೋಗೆ, ಗುಮ್ಮನಕೊಲ್ಲಿ ವ್ಯಾಪ್ತಿಯ ಗ್ರಾಮಸ್ಥರು ಇದ್ದರು.