ಕುಶಾಲನಗರ, ಜೂ. 28: ಕೊಪ್ಪ ಸಮೀಪದ ಗಿರಗೂರು ಗ್ರಾಮದಲ್ಲಿ ಖಾಸಗಿ ಶಾಲೆಯೊಂದರಿಂದ ಒತ್ತುವರಿಯಾಗಿದ್ದ ಗೋಮಾಳವನ್ನು ಕಂದಾಯ ಇಲಾಖೆ ತೆರವುಗೊಳಿಸಿ ಸ್ವಾಧೀನಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ. ಗಿರಗೂರು ಗ್ರಾಮದ ಸರ್ವೆ ನಂ 33 ರಲ್ಲಿನ 11.24 ಎಕರೆ ಬಿ ಖರಾಬು ಜಾಗದ ಪೈಕಿ 3.35 ಎಕರೆ ಜಾಗವನ್ನು ಖಾಸಗಿ ವಿದ್ಯಾಸಂಸ್ಥೆ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಕಾಶ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಸಂದರ್ಭ ಯಾವದೇ ದಾಖಲಾತಿಗಳಿಲ್ಲದೆ ಗೋಮಾಳವನ್ನು ಅತಿಕ್ರಮಿಸಿಕೊಂಡು ಬೇಲಿ ನಿರ್ಮಿಸಿ ಕಟ್ಟಡಗಳನ್ನು ಕಟ್ಟಿರುವದು ಕಂಡುಬಂದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಉಪವಿಭಾಗಾಧಿಕಾರಿ ಆದೇಶದಂತೆ ಪಿರಿಯಾಪಟ್ಟಣ ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಜೆಸಿಬಿ ಮೂಲಕ ಬೇಲಿಯನ್ನು ತೆರವುಗೊಳಿಸಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಸರಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳು ಅನಧಿಕೃತವಾಗಿದ್ದು ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವದು ಎಂದು ತಹಶೀಲ್ದಾರ್ ಮಹೇಶ್ ತಿಳಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೊಪ್ಪ ಗ್ರಾಮಪಂಚಾಯ್ತಿ ಸದಸ್ಯ ಶಿವಪ್ರಕಾಶ್, ಒತ್ತುವರಿಯಾಗಿದ್ದ ಜಾಗದ ಬಗ್ಗೆ ಕಳೆದ 20 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದು ಇದೀಗ ತೆರವುಗೊಳಿಸುವಂತೆ ಆದೇಶ ಹೊರಬಿದ್ದಿದೆ. ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಸರಕಾರಿ ಕಾಲೇಜು ನಿರ್ಮಾಣದೊಂದಿಗೆ ಸಾರ್ವಜನಿಕ ಬಳಕೆಗೆ ಮೀಸಲಿರಿಸಬೇಕಿದೆ ಎಂದರು.

ಸ್ಥಳೀಯ ಮುಖಂಡರಾದ ಹೆಚ್.ಜೆ.ಕರಿಯಪ್ಪ ಮಾತನಾಡಿ, ಸರಕಾರವನ್ನು ವಂಚಿಸಿ ಬಡ ಮಕ್ಕಳ ಹೆಸರಿನಲ್ಲಿ ಖಾಸಗಿ ಸಂಸ್ಥೆ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಕಾರ್ಯನಿರ್ವಹಿಸು ತ್ತಿತ್ತು. ಇದೇ ರೀತಿ ಎಲ್ಲೆಡೆ ಒತ್ತುವರಿಯಾಗಿರುವ ಸರಕಾರಿ ಜಾಗವನ್ನು ವಶಪಡಿಸಿಕೊಳ್ಳುವ ಕೆಲಸವಾಗಬೇಕಿದೆ ಎಂದರು.

ಬೆಟ್ಟದಪುರ ಠಾಣಾಧಿಕಾರಿ ಚಿಕ್ಕಸ್ವಾಮಿ, ಬೈಲುಕೊಪ್ಪ ಠಾಣಾಧಿಕಾರಿ ರಾಮಚಂದ್ರನಾಯಕ್ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.