ಗೋಣಿಕೊಪ್ಪಲು, ಜೂ. 28: ಮಾಯಮುಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚೆನ್ನಂಗೊಲ್ಲಿ ಗ್ರಾಮದ ಅಭಿವೃದ್ದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಹೇಳಿದರು.

ಚೆನ್ನಂಗೊಲ್ಲಿ ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಳೆದ 5 ವರ್ಷಗಳಿಂದ ಸಮಿತಿಯೊಂದು ಇದು ದೇವರಕಾಡು ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಇದರಿಂದ ಇಲ್ಲಿನ ಅಭಿವೃದ್ದಿಗೆ ತೊಡಕು ಉಂಟಾಗಿದೆ. ಸುಮಾರು 503 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದು ರಸ್ತೆ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯದಿಂದ ಜನರು ವಂಚಿತರಾಗಿದ್ದಾರೆ.

ಗ್ರಾಮದಲ್ಲಿ 2 ಅಂಗನವಾಡಿ, ಶಾಲೆ, ಅಂಚೆ ಕಚೇರಿಗಳಿದ್ದು, ಯಾವದೇ ಅಭಿವೃದ್ಧಿ ಇಲ್ಲಿ ನಡೆಯುತ್ತಿಲ್ಲ. ಸಚಿವ ಸೀತಾರಾಮ್ ಅವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಸ್ಪಂದಿಸಿದ್ದಾರೆ ಎಂದು ನಿವಾಸಿಗಳು ಹೇಳಿಕೊಂಡರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ, ತಹಶೀಲ್ದಾರರೊಂದಿಗೆ ಸಭೆ ನಡೆಸಿ ದಾಖಲೆ ಪರಿಶೀಲಿಸಿ ಗ್ರಾಮದ ನಿವಾಸಿಗಳಿಗೆ ನ್ಯಾಯ ದೊರಕಿಸಲು ಪ್ರಯತ್ನ ಮಾಡಲಾಗುವದು ಎಂದು ಹರೀಶ್ ಬೋಪಣ್ಣ ನಿವಾಸಿಗಳಿಗೆ ಭರವಸೆ ನೀಡಿದರು.

ಈಗಾಗಲೇ ಗ್ರಾಮದ ನಿವಾಸಿಗಳು ಹಾಗೂ ಸಮಿತಿಯೊಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದರು.

ಈ ಸಂದರ್ಭ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ, ಆರ್‍ಎಫ್‍ಓ ಅಶೋಕ್, ಡಿಆರ್‍ಎಫ್‍ಓ ಗಣಪತಿ, ಸ್ಥಳೀಯರಾದ ಮಣಿ, ತಿತಿಮತಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಗ್ರಾಮಸ್ಥರು ಇದ್ದರು.