ಸುಂಟಿಕೊಪ್ಪ, ಜೂ. 28: ಶತಮಾನೋತ್ಸವ ಕಂಡು 1 ವರ್ಷ ಕಳೆದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಯಾವಾಗ ಬೇಕಾದರೂ ಕುಸಿದು ಬೀಳಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ.

ಸುಂಟಿಕೊಪ್ಪ ಹೋಬಳಿ ಹಲವು ರಾಜಕೀಯ ದಿಗ್ಗಜರಿಗೆ ಆಶ್ರಯ ನೀಡಿದೆ. ಕುಶಾಲನಗರ ನಿವಾಸಿ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರಿಗೂ ಸುಂಟಿಕೊಪ್ಪಕ್ಕೂ ನಿಕಟ ಸಂಪರ್ಕ ಇತ್ತು. ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ಕೆ.ಎಂ. ಇಬ್ರಾಹಿಂ, ಎಸ್.ಬಿ. ಶಂಕರ್, ಎಂ.ಎ. ವಸಂತ, ಮಾಜಿ ರಾಜ್ಯಸಭಾ ಸದಸ್ಯ ದಿ. ಎಫ್.ಎಂ. ಖಾನ್ ಆಯಕಟ್ಟಿನ ಸ್ಥಾನದಲ್ಲಿದ್ದು, ಅಧಿಕಾರ ಚಲಾವಣೆ ಮಾಡುತ್ತಿದ್ದರು.

ಸುಂಟಿಕೊಪ್ಪ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿದ್ದು, ಇದೀಗ ಸುಂಟಿಕೊಪ್ಪ ಗ್ರೇಡ್ 1 ಪಂಚಾಯಿತಿ ಆಗಿದೆ. ಆದರೆ ಪ್ರತ್ಯೇಕ ಬಸ್ ನಿಲ್ದಾಣ ಇಲ್ಲದಾಗಿದೆ. ಮಾರುಕಟ್ಟೆ ಸ್ಥಿತಿ ಅಯೋಮಯವಾಗಿದೆ. ನೂರು ವರ್ಷ ತುಂಬಿದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 1916ರಲ್ಲಿ ಸ್ಥಾಪನೆಯಾಗಿದ್ದು, ಈ ಶಾಲೆಯ ಸಭಾಂಗಣದ ಹೆಂಚುಗಳು ಹಾರಿಹೋಗಿದ್ದು, ಬಾರುಪಟ್ಟಿಗಳು ಮುರಿದು ಬೀಳುತ್ತಿವೆ. ಶಾಲಾ ಆಡಳಿತ ಮಂಡಳಿಯವರು ತಗಡಿನ ಶೀಟು ಮುಚ್ಚಿ ತೇಪೆ ಹಾಕುತ್ತಿದ್ದಾರೆ. ಹಸಿ ಇಟ್ಟಿಗೆಯಿಂದ ಕಟ್ಟಿದ ಈ ಕಟ್ಟಡ ಇಂದೋ-ನಾಳೆಯೋ ಬೀಳಲಿದೆ.

ಕೊಡುಗೆ: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ 1916 ರಲ್ಲಿ ಪಟ್ಟೆಮನೆ ಕುಟುಂಬಸ್ಥರು 2 ಎಕ್ರೆ ಜಾಗವನ್ನು ಉದಾರವಾಗಿ ನೀಡಿದ್ದರು. ಗದ್ದೆಹಳ್ಳದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮೆಟ್ರಿಕ್ ಪೂರ್ವ ಹಿಂದುಳಿದ ಹಾಸ್ಟೆಲ್ ಹಾಗೂ ಮೈದಾನಕ್ಕೆ 2 ಎಕ್ರೆ ಜಾಗವನ್ನು ಉಚಿತವಾಗಿ ದಾನ ನೀಡಿದ್ದಾರೆ. ಅದರಂತೆ ಹುಲ್ಲಿನ ಜೋಪಡಿಯಲ್ಲಿ ಶಾಲೆಯನ್ನು ಆರಂಭಿಸಲಾಯಿತು.

1945 ರಲ್ಲಿ ಕಾಫಿ ಬೆಳೆಗಾರರು, ದಾನಿಗಳಾದ ಜಿ.ಎಂ. ಮಂಜುನಾಥಯ್ಯ ಅವರು ತಮ್ಮ ತಂದೆ ಜಿ.ಎಂ. ಮಂಜಯ್ಯ ಅವರ ಜ್ಞಾಪಕಾರ್ಥವಾಗಿ ಈ ಸರಕಾರಿ ಶಾಲೆಯ ಸಭಾಂಗಣದ ಕೊಠಡಿಯನ್ನು ನಿರ್ಮಿಸಿಕೊಟ್ಟಿದ್ದರು. ಇದರಿಂದ ಸಾವಿರಾರು ಬಡ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಪ್ರತಿಭೆಯನ್ನು ಹೊರಹೊಮ್ಮಿಸಲು, ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ಈ ಕಟ್ಟಡವು ಸಹಕಾರಿಯಾಗಿತ್ತು. 1967ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಸ್ವತಂತ್ರ ಪಾರ್ಟಿಯಿಂದ ಸ್ಪರ್ಧಿಸಿದ್ದ ಜಿ.ಯಂ. ಮಂಜುನಾಥಯ್ಯ ಅವರು ಗೆಲುವು ಸಾಧಿಸಿದನ್ನು ಇಲ್ಲಿ ಸ್ಮರಿಸಬಹುದು.

ಅಪಾಯ ತಪ್ಪಿದ್ದಲ್ಲ: ಈ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇರುವದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದಿರುವದು ವಿಷಾದನೀಯ.

ಇದೇ ಶಾಲಾ ಆವರಣದಲ್ಲಿ ಸರಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಲವಾರು ವರ್ಷಗಳಿಂದ ನಡೆಯುತಿತ್ತು. ಇದೀಗ ಕಳೆದ ವರ್ಷದಿಂದ ಮಾರುಕಟ್ಟೆ ರಸ್ತೆಯಲ್ಲಿ ನೂತನ ಸರಕಾರಿ ಪದವಿಪೂರ್ವ ಕಾಲೇಜು ಪ್ರಾರಂಭಗೊಂಡಿದೆ. ಪ್ರೌಢಶಾಲೆಯು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡದ ಒತ್ತಿನಲ್ಲಿಯೇ ನಡೆಯುತ್ತಿದೆ.

ತಾರತಮ್ಯ ಯಾಕೆ: ಸರಕಾರಿ ಶಾಲೆಗಳ ಕಟ್ಟಡಕ್ಕೆ ಜನಪ್ರತಿನಿಧಿಗಳ, ಶಿಕ್ಷಣ ಇಲಾಖೆಯವರ, ಶಾಲಾಭಿವೃದ್ಧಿ ಸಮಿತಿಯವರ ಇಚ್ಛಾಶಕ್ತಿ ಕೊರತೆ, ನಿರ್ಲಕ್ಷ್ಯದಿಂದ 1945 ರಲ್ಲಿ ದಾನಿಗಳಿಂದ ನಿರ್ಮಿಸಲಾದ ಸರಕಾರಿ ಶಾಲೆಯ ಸಭಾಂಗಣ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಶಾಲಾ ಮಕ್ಕಳು ಕಟ್ಟಡದ ಅಕ್ಕಪಕ್ಕ ಓಡಾಡುತ್ತಿರುವದು ಕಂಡು ಬರುತ್ತಿದೆ. ಅನಾಹುತ ಸಂಭವಿಸಿದರೆ ಹೊಣೆ ಯಾರು?

ಸಂಬಂಧಿಸಿದ ಇಲಾಖೆ ಶೀಘ್ರ ಕ್ರಮ ಕೈಗೊಳ್ಳುವಂತಾಗಬೇಕು. ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿ.ಪಂ. ಸದಸ್ಯರು, ತಾ.ಪಂ. ಸುಂಟಿಕೊಪ್ಪ ಗ್ರಾ.ಪಂ. ಆಡಳಿತ ಮಂಡಳಿಯವರು ಕುಸಿದು ಬೀಳಲಿರುವ ಕಟ್ಟಡಕ್ಕೆ ಕಾಯಕಲ್ಪ ಒದಗಿಸಬೇಕೆಂದು ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.