ಕೂಡಿಗೆ, ಜೂ. 28: ಸಮೀಪದ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ತೊರೆನೂರು ಶ್ರೀ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಸಭೆಯು ದೇವಾಲಯದ ಆವರಣದಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರ ನೇತೃತ್ವದಲ್ಲಿ ನಡೆಯಿತು.

ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ ಶ್ರೀ ಬಸವೇಶ್ವರ ದೇವಾಲಯದ ನೂತನ ಕಟ್ಟಡ ಹಾಗೂ ಜೀರ್ಣೋದ್ಧಾರದ ಬಗ್ಗೆ ನೀಲನಕ್ಷೆ ಮತ್ತು ಅದರ ವೆಚ್ಚಗಳ ಬಗ್ಗೆ ಸಭೆಗೆ ತಿಳಿಸಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿರುವ ಬಗ್ಗೆ ಚರ್ಚಿಸ ಲಾಯಿತು. ತೊರೆನೂರು ಗ್ರಾಮದ ಸರ್ವೆ ನಂ.180/1 ರ 16 ಎಕರೆ 84 ಸೆಂಟು ಜಾಗದಲ್ಲಿ ಕಳೆದ 50 ವರ್ಷಗ ಳಿಂದಲು ವಾಸವಿರುವ ಗ್ರಾಮಸ್ಥರಿಗೆ ಹಕ್ಕು ಪತ್ರ ದೊರಕದ ಬಗ್ಗೆ ಸಭೆಯ ಲ್ಲಿದ್ದ ಗ್ರಾಮಸ್ಥರುಗಳು ಶಾಸಕರಿಗೆ ತಿಳಿಸಿ, ಹಕ್ಕುಪತ್ರ ದೊರಕುವಂತೆ ಪ್ರಯತ್ನಿಸುವ ಬಗ್ಗೆ ಮನವಿ ಮಾಡಿದರು. ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಗೊಳಿಸಿಕೊಡಬೇಕು, ತೊರೆನೂರು ಗ್ರಾಮದಿಂದ ಬೈರಪ್ಪನಗುಡಿ ಮಾರ್ಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಅಳುವಾರಕ್ಕೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡುವ ಬಗ್ಗೆ ಗ್ರಾಮಕ್ಕೆ ಪ್ರಮುಖವಾಗಿ ಬೇಕಾಗುವ ವಿಚಾರಗಳ ಬಗ್ಗೆ ಮನವಿ ಸಲ್ಲಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡಿದರು. ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಹಕ್ಕುಪತ್ರ ನೀಡುವ ವಿಚಾರವಾಗಿ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ವಾಗಿರುವದರಿಂದ ಕಳೆದ ಅಧಿವೇಶನ ದಲ್ಲಿಯೂ ಸಿಎನ್‍ಡಿ ಲ್ಯಾಂಡ್ ವಿಷಯವಾಗಿ ಪ್ರಸ್ತಾವನೆ ನೀಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಗಳು ಸರ್ಕಾರದಿಂದ ಬಂದಿದೆ. 94ಸಿ ಅರ್ಜಿಗೆ ಸಂಬಂಧಿಸಿದಂತೆ ಹಕ್ಕು ಪತ್ರ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು.

ಕೊಡಗು ಮತ್ತು ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕಾವೇರಿ ಹೊಳೆಗೆ ಅಡ್ಡಲಾಗಿ ತೂಗುಸೇತುವೆ ಬದಲು ಶಾಶ್ವತ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಕಾವೇರಿ ನೀರಾವರಿ ನಿಗಮವನ್ನು ಸಂಪರ್ಕಿಸಿ ಶಾಶ್ವತ ಸೇತುವೆ ನಿರ್ಮಾಣದ ವಿಷಯವಾಗಿ ಚರ್ಚಿಸಲಾಗುವದು ಎಂದು ತಿಳಿಸಿದರು.

ಇದೇ ಸಂದರ್ಭ ದೇವಾಲಯ ಜೀರ್ಣೋದ್ಧಾರ ಸಮಿತಿಗೆ ರೂ. 5 ಲಕ್ಷ ಅನುದಾನ ನೀಡುವದಾಗಿ ಭರವಸೆ ನೀಡಿದರು. ಗ್ರಾಮಸ್ಥರುಗಳು ನೀಡಿದ ಮನವಿಗಳಲ್ಲಿ ರುದ್ರಭೂಮಿ, ನಿವೇಶನ ಹಂಚಿಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ತೊರೆನೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ತೆರೆಯುವಂತೆ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆ ಶಾಸಕರು ತೊರೆನೂರಿನಲ್ಲಿ ಶುದ್ಧ ಕುಡಿಯುವ ನೀರು ಘಟಕ ತೆರೆಯಲು ತುರ್ತಾಗಿ ಕ್ರಮ ಕೈಗೊಂಡು ಶೀಘ್ರವಾಗಿ ನಿರ್ಮಾಣ ಮಾಡಲಾಗುವದು ಎಂದು ಭರವಸೆ ನೀಡಿ, ಸ್ಥಳವನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭ ತೊರೆನೂರು ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಉಪಾಧ್ಯಕ್ಷ ಶಿವಾನಂದ, ಕಾರ್ಯ ದರ್ಶಿ ಟಿ.ಎನ್. ಸುಂದರೇಶ್, ಸಹ ಕಾರ್ಯದರ್ಶಿ ಟಿ.ಬಿ. ಜಗದೀಶ್, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯ ಮಹೇಶ್ ಕುಮಾರ್, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಚಂದ್ರಪ್ಪ, ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೃಷ್ಣೇಗೌಡ ಸೇರಿದಂತೆ ದೇವಾಲಯ ಸಮಿತಿ ನಿರ್ದೇಶಕರು, ಗ್ರಾಮಸ್ಥರು ಇದ್ದರು.