ಸೋಮವಾರಪೇಟೆ, ಜೂ.28: ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಹರಾಜಿನ ಮೂಲಕ ಪಡೆದುಕೊಂಡಿರುವ ಫಲಾನುಭವಿಗಳು ನಂತರ ಒಳ ಒಪ್ಪಂದದ ಮೂಲಕ ಬೇರೆಯವರಿಗೆ ಪರಭಾರೆ ಮಾಡಿ ಸಾವಿರಾರು ರೂಪಾಯಿ ಬಾಡಿಗೆ ಮತ್ತು ಲಕ್ಷಾಂತರ ರೂ ಮುಂಗಡ ಹಣ ಪಡೆದಿದ್ದಾರೆ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯರುಗಳು ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಗೊಂಡು, ಪಂಚಾಯಿತಿ ಅಧಿಕಾರಿಗಳೇ ಸರ್ವೆ ನಡೆಸಿ ವರದಿ ತಯಾರಿಸಬೇಕು. ನಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಉದಯಕುಮಾರ್ ಪಂಚಾಯಿತಿಯ ಮಳಿಗೆಯನ್ನು ಅನ್ಯ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದ್ದು, ಈ ಬಗ್ಗೆ ಹಲವು ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಾಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಅಧ್ಯಕ್ಷೆ ಸೇರಿದಂತೆ ಇತರ ಸದಸ್ಯರೂ ದನಿಗೂಡಿಸಿದರು.

ಈಗಾಗಲೇ ಒಮ್ಮೆ ಸರ್ವೆ ಮಾಡಲಾಗಿದ್ದು, ಪರಭಾರೆಯಾಗಿರುವ ಬಗ್ಗೆ ನಿಖರ ದಾಖಲೆಗಳು ಲಭ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು. ಇನ್ನೊಮ್ಮೆ ಸರ್ವೆ ಮಾಡಿ ಮುಂದಿನ ಸಭೆಗೆ ಸಮಗ್ರ ಮಾಹಿತಿ ನೀಡಿ. ನಂತರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಮುಂದಾಗೋಣ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸಭೆಯಲ್ಲಿ ತಿಳಿಸಿದರು.

ಕೊಡವ ಸಮಾಜದ ಮುಂಭಾಗದ ರಸ್ತೆಯಲ್ಲಿ ಬೈಕ್ ಸವಾರರು ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆ ಮಾಡುತ್ತಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಪೊಲೀಸ್ ಇಲಾಖೆಯಿಂದ ಅಭಿಪ್ರಾಯ ಪಡೆಯುವ ಬಗ್ಗೆ ತೀರ್ಮಾನಿಸಲಾಯಿತು.

ಮಲೆನಾಡು ಅಭಿವೃದ್ಧಿ ನಿಗಮದ ಅನುದಾನದಲ್ಲಿ ಜೇಸೀ ವೇದಿಕೆ ಮುಂಭಾಗ ನಿರ್ಮಿಸಿರುವ ಸಭಾಂಗಣಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಅಭಿಯಂತರ ವೀರೇಂದ್ರ ಅವರಿಗೆ ಸೂಚಿಸಲಾಯಿತು.

ನಗರದ ಎಲ್ಲಾ ವಾರ್ಡ್‍ಗಳಲ್ಲಿ ವಿದ್ಯುತ್ ಕಂಬ, ಬೀದಿ ದೀಪಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಬಿ.ಎಂ. ಸುರೇಶ್ ಮನವಿ ಮಾಡಿದರು. ಕಳೆದ ಸಭೆಯಲ್ಲಿ ಗದ್ದಲಕ್ಕೆ ಕಾರಣವಾದ ಖಾಸಗಿ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣದ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಬಗ್ಗೆ ಸುರೇಶ್ ಸಲಹೆ ನೀಡಿದರು.

ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ದೇವರಾಜು ಅರಸು ಭವನ ನಿರ್ಮಿಸಲು ಸ್ಥಳಾವಕಾಶ ಕೋರಿ ಮನವಿ ಬಂದಿರುವ ಬಗ್ಗೆ ಚರ್ಚೆ ನಡೆದು, ಇಂದು ಪ.ಪಂ. ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪೌರ ಕಾರ್ಮಿಕರಿಗೂ ಖಾಯಂ ನಿವೇಶನ ಒದಗಿಸಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡು, ಕಸ ವಿಲೇವಾರಿಗೆ ಶಾಶ್ವತ ಪರಿಹಾರದ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಬಪ.ಪಂ. ವ್ಯಾಪ್ತಿಯ ಹೊಸ ಬಡಾವಣೆಯಲ್ಲಿ ಅರಸು ಭವನ ಹಾಗೂ ಪ.ಪಂ.ನಲ್ಲಿ ಕಳೆದ ಅನೇಕ ದಶಕಗಳಿಂದ ಪೌರಕಾರ್ಮಿಕರಾಗಿ ದುಡಿಯುತ್ತಿರುವ ನಿವೇಶನ ರಹಿತರಿಗೆ ನಿವೇಶನ ನೀಡುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಪಟ್ಟಣವನ್ನು ಕಾಡುತ್ತಿರುವ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಚರ್ಚೆ ನಡೆದು, ಪ.ಪಂ. ವ್ಯಾಪ್ತಿಯಲ್ಲಿಯೇ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತೆ ಕಸ ವಿಲೇವಾರಿ ಮತ್ತು ಅದರಿಂದ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲು ಸಭೆ ಅನುಮೋದನೆ ನೀಡಿತು.

ಸುಮಾರು 30 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಘಟಕ ನಿರ್ಮಿಸಲಾಗುವದು ಎಂದು ಪ,ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸಭೆಗೆ ಮಾಹಿತಿ ನೀಡಿದರು. ಬೇರೆಡೆಗಳಲ್ಲಿ ಜಾಗ ಗುರುತಿಸಿದ ಸಂದರ್ಭ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದುದರಿಂದ ಕಸ ವಿಲೇವಾರಿ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆ ಪಟ್ಟಣ ಪಂಚಾಯಿತಿಗೆ ಒಳಪಡುವ ಸ್ಥಳದಲ್ಲಿಯೇ ಘಟಕ ನಿರ್ಮಿಸುವ ಗಟ್ಟಿನಿರ್ಧಾರ ಕೈಗೊಳ್ಳಲೇಬೇಕಾಗಿದೆ ಎಂದು ಉಪಾಧ್ಯಕ್ಷ ರಮೇಶ್, ಸದಸ್ಯರುಗಳಾದ ನಾಗರಾಜ್, ಉದಯಕುಮಾರ್ ಸೇರಿದಂತೆ ಇತರರು ಸಹಮತ ವ್ಯಕ್ತಪಡಿಸಿದರು.

ಸಭೆಯಲ್ಲಿ ಸದಸ್ಯರುಗಳಾದ ಲೀಲಾ ನಿರ್ವಾಣಿ, ಸುಶೀಲಾ, ಸುಷ್ಮಾ ಶೆಟ್ಟಿ, ವೆಂಕಟೇಶ್, ಬಿ.ಎಂ. ಈಶ್ವರ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿರೋಧ ಪಕ್ಷದ ಸದಸ್ಯರುಗಳಾದ ಕೆ.ಎ. ಆದಂ, ಶೀಲಾ ಡಿಸೋಜ, ಮೀನಾಕುಮಾರಿ, ನಾಮನಿರ್ದೇಶಿತ ಸದಸ್ಯ ಇಂದ್ರೇಶ್ ಅವರುಗಳು ಗೈರಾಗಿದ್ದರು.

ಸುಷ್ಮಾ ಆಯ್ಕೆ : ಇಲ್ಲಿನ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸದಸ್ಯೆ ಸುಷ್ಮಾ ಸುಧಾಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ.ಪಂ. ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸುಷ್ಮಾ ಅವರು ಅವಿರೋಧವಾಗಿ ಆಯ್ಕೆಯಾದರು.

ಇದುವರೆಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸುಶೀಲಾ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಈ ಸಂದರ್ಭ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಉಪಾಧ್ಯಕ್ಷ ರಮೇಶ್ ಸೇರಿದಂತೆ ಸದಸ್ಯರುಗಳು, ಮುಖ್ಯಾಧಿಕಾರಿ ನಾಚಪ್ಪ ಉಪಸ್ಥಿತರಿದ್ದರು.