ಒಡೆಯನಪುರ, ಜೂ. 28: ರೈತರು ಕೃಷಿ ಹಾಗೂ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೃಷಿ ಪ್ರಗತಿಯಲ್ಲಿ ವಿಶ್ವಕ್ಕೆ ಒಂದನೆ ಸ್ಥಾನವನ್ನು ತಂದುಕೊಡುವಂತಹ ಕಾಯಕವನ್ನು ಮಾಡಬೇಕು ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡ್ಲಿಪೇಟೆ ವಲಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ತಾಲೂಕು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಯಂತ್ರೋಪಕರಣಗಳ ಮೂಲಕ ಕೃಷಿಯನ್ನು ಮಾಡುತ್ತಿರುವದು ಅನಿವಾರ್ಯವಾಗಿದೆ.

ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿ ಸುವ ಸಲುವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯವರು ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬೆಲೆಗೆ ಬಾಡಿಗೆಗೆ ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿರುವದು ಶ್ಲಾಘನೀಯವಾದದ್ದು, ಈ ನಿಟ್ಟಿನಲ್ಲಿ ರೈತರು ಸಂಸ್ಥೆಯಿಂದ ನೀಡುವ ಕೃಷಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಸಬಲರಾಗಿ ಕೃಷಿ ಕ್ಷೇತ್ರವನ್ನು ಪ್ರಗತಿಯತ್ತ ಮುನ್ನಡೆಸಬೇಕೆಂದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಸ್ತುತ ಸಾಲಿನಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ 7 ಕಡೆಗಳಲ್ಲಿ ಕೃಷಿ ವಿಚಾರ ಸಂಕಿರಣವನ್ನು ನಡೆಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿದೆ ಎಂದರು.

ಸೋಮವಾರಪೇಟೆ ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಮಾತನಾಡಿ, ರೈತರು ಕೃಷಿಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡರೆ ಕೃಷಿ ಉತ್ಪಾದನೆ ಯಲ್ಲಿ ಹೆಚ್ಚಿನ ಲಾಭಗಳಿಸಬಹುದು, ಮಣ್ಣಿನ ಆರೋಗ್ಯ ಪರೀಕ್ಷೆಯಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಇದರಿಂದ ಕೃಷಿ ಬೆಳೆಯ ಇಳುವರಿಯೂ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ಪ್ರಗತಿಪರ ಕೃಷಿಕ ಭಗವಾನ್ ಮಾತನಾಡಿ, ರೈತರು ಕೃಷಿ ಕಾರ್ಮಿಕರ ಕೊರತೆಯಿಂದ ಎಚ್ಚೆತ್ತು ತಾವೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವದರಿಂದ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಬಹುದು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದೊಡ್ಡಕೊಡ್ಲಿ ಗ್ರಾಮದ ಕೃಷಿ ಪ್ರಶಸ್ತಿ ವಿಜೇತ ಎಸ್.ಎಂ. ಶಬೀರ್ ಅಧ್ಯಕ್ಷತೆ ವಹಿಸಿದರು. ಶನಿವಾರಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಮಾತ ನಾಡಿದರು. ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮಗಳೂರು ಪ್ರಾದೇಶಿಕ ಕಚೇರಿಯ ಸಮನ್ವಯಾಧಿಕಾರಿ ಕೇಶವ ನಾಯ್ಕ್, ತೋಟಗಾರಿಕೆ ಇಲಾಖೆಯ ರಮೇಶ್, ಸೋಮವಾರಪೇಟೆ ಕೃಷಿ ಅಧಿಕಾರಿ ಎನ್. ಗೀತ, ವಲಯ ಮೇಲ್ವಿಚಾರಕ ಸುಬ್ರಮಣ್ಯ, ಕೃಷಿ ಯಂತ್ರಧಾರೆ ವ್ಯವಸ್ಥಾಪಕ ಸದಾಶಿವ, ಸೇವಾ ಪ್ರತಿನಿಧಿಗಳಾದ ಎಸ್.ಆರ್. ಶೋಭ, ಪವನ್, ರಾಣಿ ಮುಂತಾದವರು ಇದ್ದರು.

- ವಿ.ಸಿ. ಸುರೇಶ್