ಸೋಮವಾರಪೇಟೆ, ಜೂ. 28: ಸಮೀಪದ ಯಡವನಾಡು ಗ್ರಾಮದಿಂದ ಹಾರಂಗಿ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ದಶಕಗಳೇ ಕಳೆದಿದ್ದರೂ ಜನಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿ ವರ್ಗ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ರಸ್ತೆಯಲ್ಲಿ ನಿರ್ಮಾಣವಾಗಿರುವ ಬೃಹತ್ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ಹೊರಹಾಕಿದರು.ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭ ಮುಳುಗಡೆಯಾದ ಕೃಷಿ ಭೂಮಿಗೆ ಪರ್ಯಾಯವಾಗಿ ಕಳೆದ 45 ವರ್ಷಗಳ ಹಿಂದೆ ಸರ್ಕಾರ ಯಡವನಾಡು ಬಳಿಯಲ್ಲಿ ಕೃಷಿಕರಿಗೆ ಭೂಮಿ ಹಂಚಿಕೆ ಮಾಡಿತ್ತು. ಇಲ್ಲಿ ನೆಲೆನಿಂತವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯವಹಿಸಿದ ಪರಿಣಾಮ ಇಂದಿಗೂ ಇಲ್ಲಿನ ಜನರು ರಸ್ತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಯಡವನಾಡು ಗ್ರಾಮದಿಂದ ಹಾರಂಗಿ ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗದ ಒಂದು ಕಿ.ಮೀ. ದೂರಕ್ಕೆ ಕಳೆದ 5 ವರ್ಷಗಳ ಹಿಂದೆ ಡಾಮರು ಹಾಕಲಾಗಿದ್ದು, ಮುಂದುವರೆದ ಒಂದು ಕಿ.ಮೀ. ರಸ್ತೆಗೆ ಕಲ್ಲುಗಳನ್ನು ಮಾತ್ರ ಹಾಕಲಾಗಿತ್ತು. 5 ವರ್ಷದ ಹಿಂದೆ ಹಾಕಿದ್ದ ಡಾಮರು ಸಂಪೂರ್ಣ ಕಿತ್ತುಬಂದು ರಸ್ತೆಯ ಮಧ್ಯದಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಜನರು ನಡೆದಾಡಲೂ ಸಹ ಕಷ್ಟವಾಗಿ ಪರಿಣಮಿಸಿದೆ.

ಈ ಬಗ್ಗೆ ಜನಪ್ರತಿನಿಧಿಗಳು ಐಗೂರು ಗ್ರಾಮ ಪಂಚಾಯಿತಿಗೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ದೊರೆತಿಲ್ಲ. ಗ್ರಾಮದ ಮಕ್ಕಳು ಶಾಲಾ ಕಾಲೇಜಿಗೆ ತೆರಳುವದೂ ಸಹ ಕಷ್ಟಕರವಾಗಿದೆ. ಇದೀಗ ಬೀಳುತ್ತಿರುವ ಮಳೆಗೆ ರಸ್ತೆಯ ಗುಂಡಿಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದು, ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಶೇಖರ್, ಮಲ್ಲಪ್ಪ, ನವೀನ್, ಕರುಣಾಕರ್, ಮನು, ಚಂದ್ರಶೇಖರ್, ಸುತನ್, ಗ್ರಾ.ಪಂ. ಮಾಜೀ ಸದಸ್ಯೆ ಗೌರಮ್ಮ, ಮಧು, ಧನು ಸೇರಿದಂತೆ ಇತರರು ಅಳಲು ತೋಡಿಕೊಂಡಿದ್ದಾರೆ.ಗ್ರಾಮದ ಮುಖ್ಯರಸ್ತೆಯು ಹೀನಾಯ ಸ್ಥಿತಿಗೆ ತಲುಪಿದ್ದು, ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು ಇತ್ತ ಗಮನಹರಿಸಬೇಕು. ತಪ್ಪಿದಲ್ಲಿ ಐಗೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.