ಮಡಿಕೇರಿ, ಜೂ. 28: ಇತ್ತೀಚೆಗೆ ನಡೆದ ಸೆಸ್ಕ್ ಕುಂದುಕೊರತೆ ಸಭೆಯಲ್ಲಿ ಸಲಹಾ ಸಮಿತಿ ಸದಸ್ಯ ಎ.ಜಿ. ರಮೇಶ್ ಮಾತನಾಡಿ, ರಾಜರಾಜೇಶ್ವರಿ ನಗರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗ ಗ್ರಾಮೀಣ ಪ್ರದೇಶದಿಂದ ಬಂದಿದ್ದು, ನಗರ ಪ್ರದೇಶದ ಮಾರ್ಗಕ್ಕೆ ಹೊಂದಿಸುವಂತೆ ಕೇಳಿಕೊಂಡರು. ಇದಕ್ಕುತ್ತರಿಸಿದ ಸಹಾಯಕ ಇಂಜಿನಿಯರ್ ವಿನುತಾ ಸದರಿ ಮಾರ್ಗವನ್ನು ನಗರ ಪ್ರದೇಶದ ಮಾರ್ಗಕ್ಕೆ ಹೊಂದಿಸಿದಲ್ಲಿ ನಗರ ಪ್ರದೇಶದ ಕಟ್ಟಕಡೆಯ ಪ್ರದೇಶವು ರಾಜೇಶ್ವರಿ ನಗರ ಆಗಲಿದ್ದು, ಇದೀಗ ಚಾಲ್ತಿಯಲ್ಲಿರುವ ಮಾರ್ಗದಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವದರಿಂದ ನಿರಂತರ ವಿದ್ಯುತ್ ಕಲ್ಪಿಸಲು ಸಹಕಾರಿಯಾಗುವದೆಂದು ತಿಳಿಸಿದರು.

ರಾಜೇಶ್ವರಿ ನಗರದಲ್ಲಿ ಹೊಸದಾಗಿ ಅಂಗನವಾಡಿ ನಿರ್ಮಿಸುತ್ತಿದ್ದು, ಅದರ ಮೇಲ್ಭಾಗದಲ್ಲಿ 11 ಕೆ.ವಿ. ವಿದ್ಯುತ್ ಮಾರ್ಗ ಹಾದುಹೋಗಿದ್ದು, ಅದನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಸದರಿ ವಿದ್ಯುತ್ ಮಾರ್ಗವನ್ನು ಸ್ವಯಂ ನಿರ್ವಹಣೆ ಯೋಜನೆಯಲ್ಲಿ ಸ್ಥಳಾಂತರಗೊಳಿಸಬೇಕಾಗಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಅಭಿಯಂತರರೊಂದಿಗೆ ಸಂಪರ್ಕದಲ್ಲಿರುವದಾಗಿ ತಿಳಿಸಿದರು.

ಮತ್ತೋರ್ವ ಸದಸ್ಯ ಚಂಗಪ್ಪ ಮಾತನಾಡಿ, ರೇಸ್ ಕೋರ್ಸ್ ರಸ್ತೆಯಲ್ಲಿ ವಿದ್ಯುತ್ ತಂತಿ ಆಗಾಗ ತುಂಡಾಗುತ್ತಿದ್ದು, ಬದಲಾಯಿಸುವಂತೆ ತಿಳಿಸಿದರು. ಅದಕ್ಕುತ್ತರಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮುಂದಿನ ದಿನಗಳಲ್ಲಿ ವಿದ್ಯುತ್ ತಂತಿ ಬದಲಾಯಿಸಲು ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿದರು.

ಮಳೆಗಾಲದಲ್ಲಿ ಜಾರುವಿಕೆಯಿಂದಾಗಿ ವಿದ್ಯುತ್ ಕಂಬಗಳನ್ನು ಹತ್ತಲು ಅಸಾಧ್ಯವಾಗಿದ್ದು, ಮಾರ್ಗದಾಳುಗಳು ಬಿದಿರಿನ ಏಣಿ ಇಲ್ಲದಿರುವದರಿಂದ ವಿದ್ಯುತ್ ಕಂಬಗಳನ್ನು ಹತ್ತಲು ಕಷ್ಟಪಡುವಂತಾಗಿದೆ. ಇದರಿಂದಾಗಿ ವಿದ್ಯುತ್ ಕಂಬ ಏರುವ ಸಂದರ್ಭ ಕಂಬದಿಂದ ಜಾರಿ ಬಿದ್ದಲ್ಲಿ ಅಪಘಾತವಾಗಬಹುದು. ಆದುದರಿಂದ ಕೂಡಲೇ ಎಲ್ಲಾ ಮಾರ್ಗದಾಳುಗಳಿಗೆ ಅನುಕೂಲವಾಗುವಂತೆ ಬಿದಿರಿನ ಏಣಿಗಳನ್ನು ಸರಬರಾಜು ಮಾಡಲು ಮೇಲಧಿಕಾರಿಗಳಲ್ಲಿ ಕೇಳಿಕೊಳ್ಳುವಂತೆ ತಿಳಿಸಿದರು. ಅದಕ್ಕುತ್ತರಿಸಿದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೇಲಧಿಕಾರಿಗಳಿಗೆ ಪತ್ರ ಬರೆದಿರುವದಾಗಿ ತಿಳಿಸಿದರು.

ಸದಸ್ಯೆ ಡಿ. ಫಿಲೋಮಿನಾ ಮಾತನಾಡಿ, ಇಂದಿರಾನಗರದ ಕೆಳಭಾಗದಲ್ಲಿ ಬೀದಿ ದೀಪಗಳಿಗಾಗಿ ವಿದ್ಯುತ್ ಕಂಬ ನೆಡಲು ನಗರಸಭೆಗೆ ಮನವಿ ಮಾಡಿದ್ದು, ಪತ್ರ ಬಂದ ಕೂಡಲೇ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ತಿಳಿಸಿದರು. ಅದಕ್ಕುತ್ತರಿಸಿದ ಸಹಾಯಕ ಇಂಜಿನಿಯರ್ ಪತ್ರ ಬಂದ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವದಾಗಿ ತಿಳಿಸಿದರು. ಸಭೆಯಲ್ಲಿ ಇಲಾಖೆ ಅಧಿಕಾರಿಗಳಾದ ದೊಡ್ಡಮನಿ, ವಿನುತಾ, ಸಂಪತ್ ಪಾಲ್ಗೊಂಡಿದ್ದರು.