ಮಡಿಕೇರಿ: 2016-17 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 90 ರಷ್ಟು ಸಾಧನೆ ಮಾಡಿದ ಹಾಕತ್ತೂರು ಪ್ರೌಢಶಾಲೆಯ ಶಿಕ್ಷಕರುಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ದಾನಿಗಳು ಹಾಗೂ ಸಮಾಜ ಸೇವಕ ಟಿ.ಆರ್. ವಾಸುದೇವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಳೆಗಾರ ರಾಘವೇಂದ್ರ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಲು ಶಿಕ್ಷಕರ ಪರಿಶ್ರಮವೇ ಕಾರಣವಾಗಿದೆ ಎಂದರು. ದಾನಿ ತೇಜಸ್ ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದರೆ ಬೇಸರ ಪಟ್ಟುಕೊಳ್ಳದೆ ಶಿಕ್ಷಕರುಗಳ ಸಲಹೆ, ಸೂಚನೆಗಳನ್ನು ಪಡೆದು ಸತತ ಪ್ರಯತ್ನದಿಂದ ಶೈಕ್ಷಣಿಕ ಸಾಧನೆ ಮಾಡಬೇಕೆಂದರು. ವೃತ್ತ ನಿರೀಕ್ಷಕ ಬಿ.ಆರ್. ಪ್ರದೀಪ್ ಮಾತನಾಡಿ, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ಅಭ್ಯುದಯವನ್ನು ಸಾಧಿಸಬೇಕೆಂದು ಸಲಹೆ ನೀಡಿದರು.

ದ.ಸಂ.ಸ.ಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಸಮಿತಿಯ ಈ ದೇಶದ ಬಡವರ್ಗದ ಮಂದಿ ಕೂಡ ಐಎಎಸ್, ಐಎಫ್‍ಎಸ್, ಐಪಿಎಸ್, ಕೆಎಎಸ್, ಡಾಕ್ಟರ್, ಇಂಜಿನಿಯರ್‍ಗಳಾಗಿ ದೇಶದ ಭವಿಷ್ಯವನ್ನು ರೂಪಿಸುವಂತಾಗಬೇಕೆಂದರು. ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಸಂ.ಸ.ಯ ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್ ವಹಿಸಿದ್ದರು. ಪ್ರಮುಖರಾದ ದೀಪಕ್ ಸ್ವಾಗತಿಸಿ, ಶಾಲೆಯ ಶಿಕ್ಷಕಿ ಗಾಯತ್ರಿ ನಿರೂಪಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎ. ರವಿ ಹಾಗೂ ದಾಮೋದರ ಉಪಸ್ಥಿತರಿದ್ದರು.