ಭಾಗಮಂಡಲ, ಜೂ. 28: ಮೊನ್ನೆ ನದಿ ದಾಟುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಯುವಕ ಶವ ಸಂಸ್ಕಾರ ಸಂದರ್ಭ ಉಂಟಾದ ಗಲಭೆಯಲ್ಲಿ ವ್ಯಕ್ತಿಯೋರ್ವ ಮತ್ತೋರ್ವನ ಮೇಲೆ ಕತ್ತಿ ಪ್ರಹಾರ ನಡೆಸಿದ ಘಟನೆ ನಡೆದಿದೆ.ಮೂಲತಃ ಕೊಪಟ್ಟಿ ಗ್ರಾಮ ನಿವಾಸಿ, ಕುಶಾಲಪ್ಪ (ವಿನು) ಎಂಬಾತ ಮೊನ್ನೆ ಸಂಜೆ ಕಕ್ಕಬೆ ಬಳಿಯ ನಾಲಡಿ ಎಂಬಲ್ಲಿ ನದಿ ದಾಟುವಾಗ ಪಾಲದಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ. ನಿನ್ನೆ ಸಂಜೆ ಮೃತನ ಶವಸಂಸ್ಕಾರ ಕಾರ್ಯ ಕೊಪಟ್ಟಿಯಲ್ಲಿ ನಡೆಯುತ್ತಿತ್ತು. ಮೃತನ ಸಂಬಂಧಿ ಉತ್ತಪ್ಪ ಎಂಬವರು ಶವವನ್ನು ಹುಳಲು ಗುಂಡಿ ತೋಡುವ ಕಾರ್ಯದಲ್ಲಿ ಸಹಕರಿಸುತ್ತಿದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ ಮೃತನ ಕುಟುಂಸ್ಥರಾದ ಮೊಣ್ಣಪ್ಪ ಎಂಬವರು ಉತ್ತಪ್ಪ ಎಂಬವರಲ್ಲಿ ತಗಾದೆ ತೆಗೆದಿದ್ದಾರೆ.

‘ನೀನ್ಯಾಕೆ ಈ ಕೆಲಸ ಮಾಡಬೇಕು, ನಾನು ಮಾಡುತ್ತೇನೆ, ನೀನು ಮಾಡಬೇಡ’ ಎಂದು ಹೇಳಿದ್ದಾರೆ. ಉತ್ತರವಾಗಿ ಉತ್ತಪ್ಪ ‘ಇಷ್ಟೊತ್ತು ಇಲ್ಲದವರು ಈಗ್ಯಾಕೆ ಬಂದ್ರಿ, ನಾನೇ ಮಾಡುತ್ತೇನೆ’ ಎಂದಿದ್ದಾರೆ. ಪಾನಮತ್ತನಾಗಿದ್ದ ಮೊಣ್ಣಪ್ಪ ಮನಬಂದಂತೆ ಬಯ್ಯುತ್ತಾ ‘ನಿನ್ನ ಕೊಲ್ಲದೆ ಬಿಡೊಲ್ಲ’ ಎಂದುಕೊಂಡು ಅಲ್ಲಿಂದ ತೆರಳಿದ್ದಾನೆ.

ಕೆಲ ಹೊತ್ತಿನ ಬಳಿಕ ಮನೆಯಿಂದ ಕತ್ತಿಯೊಂದಿಗೆ ಬಂದ ಮೊಣ್ಣಪ್ಪ, ಬಗ್ಗಿಕೊಂಡು ಕೆಲಸ ಮಾಡುತ್ತಿದ್ದ ಉತ್ತಪ್ಪ ಎಂಬವರ ತಲೆ ಭಾಗಕ್ಕೆ ಹಿಂದಿನಿಂದ ಕಡಿದಿದ್ದಾರೆ. ಎಲ್ಲರೂ ಏನಾಯಿತೆಂದು ನೋಡುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಗಾಯಗೊಂಡ ಉತ್ತಪ್ಪನನ್ನು ಸ್ಥಳೀಯ ಜಿಲ್ಲಾಸ್ಪತೆಗೆ ದಾಖಲಿಸಿದ್ದಾರೆ.

ಆರೋಪಿ ಬಂಧನ

ಕತ್ತಿಯಿಂದ ಕಡಿದು ನಾಪತ್ತೆಯಾಗಿದ್ದ ಮೊಣ್ಣಪ್ಪ ಇಂದು ಬೆಳಗ್ಗಿನ ಜಾವ ಕೊಪಟ್ಟಿ ಬಳಿಯ ಅಂಗನವಾಡಿ ಹಿಂದೆ ಅವಿತುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸದಾಶಿವ, ಸಹಾಯಕ ಠಾಣಾಧಿಕಾರಿ ಕಾವೇರಪ್ಪ, ಸಿಬ್ಬಂದಿಗಳಾದ ಶಿವರಾಮ, ನಂಜುಂಡ ಪಾಲ್ಗೊಂಡಿದ್ದರು. - ಸುನಿಲ್