ಶನಿವಾರಸಂತೆ, ಜೂ. 28: ಸೇವೆಯೊಂದಿಗೆ ಸ್ನೇಹ, ಸಂತೋಷ, ನೆಮ್ಮದಿ ಸಿಗುವ ಏಕೈಕ ಸಂಸ್ಥೆ ರೋಟರಿ ಎಂದು ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಆರ್. ಎಸ್. ನಾಗಾರ್ಜುನ್ ಅಭಿಪ್ರಾಯಪಟ್ಟರು.

ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸೋಮವಾರಪೇಟೆ ಹಿಲ್ಸ್ ವತಿಯಿಂದ ಸ್ಥಾಪನೆಯಾದ ನೂತನ ಶನಿವಾರಸಂತೆ ರೋಟರಿ ಕ್ಲಬ್ ಅನ್ನು ಉದ್ಘಾಟಿಸಿ, ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು. ರೋಟರಿ ವೈಯಕ್ತಿಕ ಬೆಳವಣಿಗೆಯೊಂದಿಗೆ ಮಾಡುವ ಎಲ್ಲಾ ಕೆಲಸಗಳಿಗೂ ಅರ್ಥ ಕೊಡುವ ಸಂಸ್ಥೆಯಾಗಿದೆ. ಯುವಜನತೆ ಹೆಚ್ಚು ಸಂಖ್ಯೆಯಲ್ಲಿ ರೋಟರಿ ಸದಸ್ಯರಾಗಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ವಿಭಾಗೀಯ ಸಮಿತಿ ಚೇರ್‍ಮನ್ ಪ್ರಕಾಶ್ ಕಾರಂತ್ ಮಾತನಾಡಿ, ಉತ್ತಮ ಸದಸ್ಯರಿಂದ ಯಾವದೇ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯ. ಸಾಮಾಜಿಕವಾಗಿ ಬೆಳೆದು, ಎಲ್ಲರನ್ನೂ ಬೆಳೆಸುವ ಸಂಸ್ಥೆ ರೋಟರಿಯಾಗಿದ್ದು, ಆಶೋತ್ತರ ಗಳೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದರು. ಜಿಲ್ಲಾ ಸದಸ್ಯತ್ವ ಸಮಿತಿ ಚೇರ್‍ಮನ್ ಶೇಖರ್ ಶೆಟ್ಟಿ ಮಾತನಾಡಿ, ಪ್ರತಿಷ್ಠಿತ ರೋಟರಿ ಕ್ಲಬ್‍ನ ಸದಸ್ಯತ್ವದಿಂದ ಘನತೆ, ಗೌರವ ಸಿಗುತ್ತದೆ. ರೊಟೇರಿಯನ್ನರು ಆಪತ್ತಿನಲ್ಲಿ ಆಪದ್ಭಾಂದವರಂತೆ ಸಮಾಜದ ಋಣ ತೀರಿಸುತ್ತಾರೆ ಎಂದರು. ಜಿಲ್ಲಾ ತರಬೇತುದಾರ ಪಿಡಿಜಿ ರೊಟೇರಿಯನ್ ಡಾ. ರವಿ ಅಪ್ಪಾಜಿ ಹಾಗೂ ಜಿಲ್ಲಾ ಗವರ್ನರ್ ರೊಟೇರಿಯನ್ ಎಂ.ಎಂ. ಸುರೇಶ್ ಚಂಗಪ್ಪ ಮಾತನಾಡಿದರು. ಎಜಿಝೋನ್ ರೊಟೇರಿಯನ್ ಡಾ. ಪ್ರಶಾಂತ್, ರೋಟರಿ ಪಿ. ನಾಗೇಶ್, ಕಾರ್ಯದರ್ಶಿ ರೋಟರಿ ವನಮಾಲಿ ಹೆಬ್ಬಾರ್, ಶನಿವಾರಸಂತೆ ರೋಟರಿ ಕ್ಲಬ್ ನೂತನ ಅಧ್ಯಕ್ಷ ಹೆಚ್.ವಿ. ದಿವಾಕರ್, ಕಾರ್ಯದರ್ಶಿ ಡಿ. ಅರವಿಂದ್, 2018ರ ಸಾಲಿನ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ರೋಟರಿ ಜಿಲ್ಲಾ ಸಮಿತಿ ಹಾಗೂ ಸೋಮವಾರಪೇಟೆ ರೋಟರಿ ಹಿಲ್ಸ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ 51 ಮಂದಿ ನೂತನ ಸದಸ್ಯತ್ವ ಪಡೆದು ಕುಟುಂಬ ಸಹಿತ ಸನ್ಮಾನಿತರಾದರು.