ಮಡಿಕೇರಿ, ಜೂ. 28: ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ನ್ಯಾಯಾಲಯವು ನಿರ್ದಿಷ್ಟಪಡಿಸಿರುವ ಸ್ಥಳಗಳಲ್ಲಿ ಮದ್ಯದ ವಹಿವಾಟು ವಿಚಾರಕ್ಕೆ ಸಂಬಂಧಿಸಿದಂತೆ ಇದ್ದ ಗೊಂದಲ- ಮಾಲೀಕರ ದ್ವಂದ್ವಕ್ಕೆ ಕೊನೆಗೂ ಸ್ಪಷ್ಟ ತೀರ್ಮಾನ ಹೊರಬಿದ್ದಿದೆ. ಈತನಕ ಹಾಗಾಗಬಹುದು... ಹೀಗಾಗಬಹುದು ಎಂಬ ಚರ್ಚೆ - ನಿರೀಕ್ಷೆಗಳಲ್ಲೇ ಕರ್ನಾಟಕ ರಾಜ್ಯದ ಅಬಕಾರಿ ವರ್ಷದ ಮುಕ್ತಾಯದ ದಿನ ಸಮೀಪಿಸಿಬಿಟ್ಟಿದ್ದು, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಪಾಲನೆಯಾಗಲೇ ಬೇಕಾಗಿದೆ ಎಂಬ ಅಂಶ ಇದೀಗ ಖಾತರಿಗೊಂಡಿದೆ. ಬಾಧಿತ ಮಳಿಗೆಗಳ ಪರವಾನಗಿ ನವೀಕರಣ ಸದ್ಯದ ಮಟ್ಟಿಗೆ ತಡೆಹಿಡಿಯಲ್ಪಡಲಿದೆ. ಜುಲೈ 1ರಿಂದ ಈ ಮಳಿಗೆಗಳು ವಹಿವಾಟು ಸ್ಥಗಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಇಂತಹ ಸನ್ನದುದಾರರಿಗೆ ತಮ್ಮ ಪರವಾನಗಿ ನವೀಕರಣ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿದೆ ಯಾದರೂ ಸದ್ಯದ ವಹಿವಾಟು ಸ್ಥಗಿತ ಗೊಳಿಸಬೇಕಲ್ಲದೆ ನಿಯಮಕ್ಕೆ ಒಳಪಟ್ಟು ಸ್ಥಳಾಂತರ ಮಾಡಲೇಬೇಕಾಗಿದೆ.

ವಹಿವಾಟನ್ನು ಬೇರೆಡೆಗೆ ಸ್ಥಳಾಂತರಗೊಳಿಸುತ್ತೇವೆ ಎಂದು ಬರಹದಲ್ಲಿ ಕೊಟ್ಟು ಪರವಾನಗಿ ಶುಲ್ಕದೊಂದಿಗೆ ಹೆಚ್ಚುವರಿ ಶೇಕಡಾ 25 ಶುಲ್ಕವನ್ನು ಪಾವತಿಸಿದಲ್ಲಿ ಈಗಿರುವ ಜಾಗದಲ್ಲೇ 3 ತಿಂಗಳು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.

ಈ ಕುರಿತು ಈತನಕದ ಎಲ್ಲಾ ಪ್ರಸ್ತಾವನೆಗಳು, ಮನವಿಗಳನ್ನು ಇಲಾಖೆ ಹಾಗೂ ರಾಜ್ಯ ಸರಕಾರ ವಿವರವಾಗಿ ಪರಿಶೀಲಿಸಿದ್ದು, ಇದೀಗ ತಾ. 27ರಂದು ನೂತನ ಆದೇಶ ಹೊರಡಿಸಿದೆ. ಸರ್ವೋಚ್ಚ ನ್ಯಾಯಾಲ ಯದ ತೀರ್ಪಿನ ಹಿನ್ನೆಲೆಯಲ್ಲಿ ವಿಶೇಷ ಪರಿಸ್ಥಿತಿಯಲ್ಲಿ ಈ ಸನ್ನದುಗಳು ಸ್ಥಳಾಂತರ ಗೊಳ್ಳಬೇಕಿದೆ. ಅಲ್ಲದೆ ಸ್ಥಳಾಂತರಕ್ಕೆ ಸಮಯದ ತೀವ್ರ ಅಭಾವವಿರುವದರಿಂದ ಈ ಆದೇಶ ಹೊರಬಿದ್ದಿದೆ.

ಸನ್ನದು ಸ್ಥಳಾಂತರಗೊಳ್ಳುವ ಪ್ರಕರಣಗಳಿಗೆ ಹಾಗೂ 2017-18ನೇ ಸಾಲಿನ ಸನ್ನದು ನವೀಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಏಕಕಾಲಿಕ ಕ್ರಮವಾಗಿ ವಿನಾಯಿತಿ/ ರಿಯಾಯಿತಿ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೀಡಲಾಗಿದ್ದು, ಸ್ಥಳಾಂತರಕ್ಕೆ 30.9.2017ರವರೆಗೆ ಅವಕಾಶ ನೀಡಲಾಗಿದೆ.

ಬಾಧಿತ ಸನ್ನದುಗಳನ್ನು ಸ್ಥಳಾಂತರಗೊಳಿಸಲು ಸನ್ನದುದಾರರು ಪರವಾನಗಿ ಶುಲ್ಕದ ಶೇ.50ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿತ್ತು. ಇದೀಗ ಈ ಹೆಚ್ಚುವರಿ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದ್ದು, ಮೂಲ ಶುಲ್ಕಕ್ಕೆ ಶೇಕಡಾ 25 ಹೆಚ್ಚುವರಿ ಪಾವತಿಸಬೇಕಾಗಿದೆ. ಗರಿಷ್ಠ ಸನ್ನದುಗಳ ಕೋಟಾ ಮಿತಿಯಿಂದ ಅಐ-2 ಸನ್ನದುಗಳಿಗೆ ಮಾತ್ರ ಅನ್ವಯವಾಗು ವಂತೆ ವಿನಾಯಿತಿ ನೀಡಲಾಗಿದೆ.

ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 23ರ 2ನೇ ಪರಂತುಕದಲ್ಲಿನ ನಿಬರ್ಂಧ ಗಳಿಂದ ವಿನಾಯಿತಿ ನೀಡಿ, ಸನ್ನದುಗಳನ್ನು ಜಿಲ್ಲಾ ವ್ಯಾಪ್ತಿಯೊಳಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರುಗಳಿಗೆ ಅಧಿಕಾರ ನೀಡಲಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು (ಮೊದಲನೇ ಪುಟದಿಂದ) 1968ರ ನಿಯಮ 8 ಹಾಗೂ ನಿಯಮ 12ನ್ನು ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ನಿಯಮ 23 2ರ ಪರಂತುಕಕ್ಕೆ ಸೂಕ್ತ ತಿದ್ದುಪಡಿ ತರಲಾಗುವದು ಎಂದು ಸರಕಾರದ ಉಪ ಕಾರ್ಯದರ್ಶಿ, (ಆಡಳಿತ ಮತ್ತು ಸಮನ್ವಯ) ಆರ್ಥಿಕ ಇಲಾಖೆಯ ಯು.ಎಚ್. ನಾರಾಯಣ ಸ್ವಾಮಿ ಅವರು ತಾ. 27ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತಾವನೆ ಏನಿತ್ತು?

ಅಬಕಾರಿ ಆಯುಕ್ತರು ನ್ಯಾಯಾಲಯದ ನಿರ್ದೇಶನವನ್ನು ಪ್ರಸ್ತಾಪಿಸಿ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಹೀಗಿತ್ತು. ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ :12164-12166/2016 ಮತ್ತು ಸಿವಿಲ್ ಅಪೀಲ್ ಸಂಖ್ಯೆ : 12170/ 2016ರಲ್ಲಿ ದಿನಾಂಕ : 15.12.2016ರಂದು ನೀಡಿರುವ ತೀರ್ಪನ್ನು ಮರುಪರಿಶೀಲನೆ ಮಾಡಿ ಕೆಲವು ಬದಲಾವಣೆ /ಸ್ಪಷ್ಟೀಕರಣವನ್ನು ದಿನಾಂಕ : 31.3.2017ರ ಆದೇಶದಲ್ಲಿ ನೀಡಿದೆ. ಸದರಿ ಆದೇಶದ ಪ್ರಕಾರ ದಿನಾಂಕ :15.12.2016ರ ಹಿಂದೆ ಅಸ್ತಿತ್ವದಲ್ಲಿದ್ದು, ನವೀಕರಣಗೊಂಡಿರುವ ಸನ್ನದುಗಳನ್ನು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟಂತೆ ದಿನಾಂಕ : 30.6.2017ರವರೆಗೆ ಮುಂದು ವರಿಯಲು ಅನುಮತಿಸಲಾಗಿದೆ. ಸದರಿ ತೀರ್ಪಿನನ್ವಯ ಸರ್ವೋಚ್ಚ ನ್ಯಾಯಾಲಯವು ನಿರ್ದಿಷ್ಟಪಡಿಸಿರುವ ಸ್ಥಳಗಳಲ್ಲಿರುವ ಯಾವದೇ ಸನ್ನದನ್ನು ದಿನಾಂಕ : 15.12.2016ರ ನಂತರ ಮಂಜೂರಾತಿ ಅಥವಾ ನವೀಕರಣ ಮಾಡಬಾರದೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ಈ ನಿರ್ದೇಶನದ ಪ್ರಕಾರ ದಿನಾಂಕ : 30.06.2017ರ ನಂತರ ನ್ಯಾಯಾಲಯವು ನಿರ್ದಿಷ್ಟಪಡಿಸಿರುವ ಸ್ಥಳಗಳಲ್ಲಿ ಮದ್ಯದ ವಹಿವಾಟು ನಡೆಸಲು ಅವಕಾಶವಿಲ್ಲ. ಈ ನಿರ್ದೇಶನದಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಇಂತಹ ಸ್ಥಳಗಳಲ್ಲಿರುವ ಸನ್ನದುಗಳನ್ನು ಆಕ್ಷೇಪಣಾ ರಹಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕಾಗಿದೆ. ಆದರೆ, ಇಂತಹ ಸ್ಥಳಾಂತರಕ್ಕೆ ಇರುವ ಸಮಸ್ಯೆಗಳು ಹಾಗೂ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸನ್ನದುದಾರರು ಅಬಕಾರಿ ಇಲಾಖೆ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತಂದಿರುತ್ತಾರೆ. ಈ ಸಮಸ್ಯೆಗಳನ್ನು ಮತ್ತು ಅನಾನುಕೂಲವನ್ನು ಪರಿಗಣಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಸನ್ನದು ಸ್ಥಳಾಂತರಗೊಳ್ಳುವ ಪ್ರಕರಣಗಳಿಗೆ ಹಾಗೂ 2017-2018ನೇ ಸಾಲಿನ ಸನ್ನದು ನವೀಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಈ ಕೆಳಕಂಡ ವಿನಾಯಿತಿ/ ರಿಯಾಯಿತಿಗಳನ್ನು ನೀಡುವಂತೆ ಪ್ರಸ್ತಾಪಿಸಲಾಗಿತ್ತು.

ಬಾಧಿತ ಸನ್ನದುಗಳನ್ನು ಸ್ಥಳಾಂತರಿಸಲು ಸನ್ನದುದಾರರಿಗೆ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ ನಿಯಮ 8ರಲ್ಲಿ ನಿಗದಿಪಡಿಸಿರುವ ಸನ್ನದು ಸ್ಥಳಾಂತರದ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವದು.

ಸನ್ನದು ಸ್ಥಳಾಂತರ ಕೋಟಾದ ಬಗ್ಗೆ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968ರ ನಿಯಮ 12ರಲ್ಲಿ ನಿಗದಿಪಡಿಸಿರುವ ಗರಿಷ್ಠ ಸನ್ನದುಗಳ ಸಂಖ್ಯೆ ಕೋಟಾ ಮಿತಿಯಿಂದ ಅಐ-2 ಸನ್ನದುದಾರರಿಗೆ ಮಾತ್ರ ವಿನಾಯಿತಿ ನೀಡುವದು.

ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮ 23ರ 2ನೇ ಪರಂತುಕದಲ್ಲಿನ ನಿರ್ಬಂಧಗಳಿಂದ ವಿನಾಯಿತಿ ನೀಡಿ ಸನ್ನದುಗಳನ್ನು ಜಿಲ್ಲಾ ವ್ಯಾಪ್ತಿಯೊಳಗೆ ಸ್ಥಳಾಂತರಿಸಲು ಅಬಕಾರಿ ಉಪ ಆಯುಕ್ತರುಗಳಿಗೆ ಅಧಿಕಾರ ನೀಡುವಂತೆ ಕೋರಲಾಗಿತ್ತು. ಅಬಕಾರಿ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಹೊಸ ಆದೇಶ ಹೊರಬಂದಿದೆ.

ರಾಷ್ಟ್ರೀಯ ಹೆದ್ದಾರಿ

ಮೈಸೂರು- ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಕುಶಾಲನಗರದಿಂದ ಮಡಿಕೇರಿ ತನಕದ ವ್ಯಾಪ್ತಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರಲಿದೆ. ಡಿ.ನೋಟಿಫಿಕೇಷನ್ ಪ್ರಕಾರ ವೀರಾಜಪೇಟೆ ಹಾಗೂ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳು ಉಳಿದುಕೊಳ್ಳಲಿವೆ. ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ಹಾಗೂ ಮಡಿಕೇರಿ ನಗರಸಭೆಯಾದರೂ 220 ಮೀಟರ್ / 500 ಮೀಟರ್ ನಿಯಮದಂತೆ ಹೆದ್ದಾರಿ ಬದಿಯಲ್ಲಿನ ಮಳಿಗೆಗಳ ಸ್ಥಳಾಂತರ ಅನಿವಾರ್ಯವಾಗಿದೆ. ಕುಶಾಲನಗರದಿಂದ ಸಂಪಾಜೆ ಮಾರ್ಗ ಹಾಗೂ ಹಾಸನದ ಕೊಣನೂರು - ಮಾಕುಟ್ಟ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ಈ ವ್ಯಾಪ್ತಿಯಲ್ಲಿನ ಮಳಿಗೆಗಳೂ ಕಡ್ಡಾಯವಾಗಿ ಸ್ಥಳಾಂತರವಾಗಲಿವೆ.

ಬಾಧಿತ ಮಳಿಗೆಗಳು

ಈ ಹಿಂದೆ ಜಿಲ್ಲೆಯಲ್ಲಿ ಒಟ್ಟು 166 ಮಳಿಗೆಗಳು ಸ್ಥಳಾಂತರವಾಗಬೇಕು ಎಂದು ಪರಿಗಣಿಸಲ್ಪಟ್ಟಿತ್ತು. ಇದೀಗ ‘ಡಿ. ನೋಟಿಫಿಕೇಷನ್ ಭಾಗ್ಯ’ದಿಂದ ಈ ಪೈಕಿ 30 ಮಳಿಗೆ ಯಥಾಸ್ಥಿತಿ ಮುಂದುವರಿಯುವ ಅವಕಾಶವಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ...

ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಸಂಪಾಜೆ ತನಕ 12 ಮಳಿಗೆಗಳು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಕೊಪ್ಪದಿಂದ ಸುಂಟಿಕೊಪ್ಪ ಮತ್ತು ಕೊಣನೂರು- ಮಾಕುಟ್ಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಿವಿಧ ಪರವಾನಗಿಯ 23 ಮಳಿಗೆಗಳು ಸೇರಿ ಒಟ್ಟು 35 ಮಳಿಗೆಗಳು ಎತ್ತಂಗಡಿಯಾಗಬೇಕಿವೆ.