ಮಡಿಕೇರಿ, ಜೂ. 28: ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು, ನಾನ್ ಕ್ಲಿನಿಕಲ್ ಹಾಗೂ ಇತರೆ ಹೊರಗುತ್ತಿಗೆ ಕಾರ್ಮಿಕರ ಸಂಘದಿಂದ ನಾನ್‍ಕ್ಲಿನಿಕಲ್ ಗುತ್ತಿಗೆ ಕಾರ್ಮಿಕರಿಗೆ ಪರಿಷ್ಕøತ ವೇತನ ಜಾರಿಗೊಳಿಸಿ, ಗುತ್ತಿಗೆದಾರರ ಕಿರುಕುಳ ತಪ್ಪಿಸಲು ಆಗ್ರಹಿಸಿ ಜಿಲ್ಲಾ ಆಸ್ಪತ್ರೆ ಎದುರು ಧರಣಿ ನಡೆಯಿತು.ಕೊಡಗು ಜಿಲ್ಲೆ ಮತ್ತು ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳು ಹಾಗೂ ಆರೋಗ್ಯ ಉಪಕೇಂದ್ರಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ನಾನ್‍ಕ್ಲಿನಿಕಲ್ ಹಾಗೂ ಡಿ. ದರ್ಜೆ ನೌಕರರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಈ ಯಾವದೇ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನವಾಗಲಿ, ಭವಿಷ್ಯ ನಿಧಿ, ಇ.ಎಸ್.ಐ. ನೀಡುತ್ತಿಲ್ಲ. ರಾಜ್ಯ ಕಾರ್ಮಿಕ ಇಲಾಖೆ ಆಸ್ಪತ್ರೆಗಳ ಹೊರಗುತ್ತಿಗೆ ಕಾರ್ಮಿಕರ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿ ಅರ್ಧ ವರ್ಷ ಕಳೆದರೂ ಜಾರಿಯಾಗಿಲ್ಲ. ಕಾರ್ಮಿಕರಿಗೆ ನಿಯಮಾನುಸಾರ ಯಾವದೇ ರಜೆ ನೀಡುತ್ತಿಲ್ಲ. ಕಾರ್ಮಿಕರು ಸಣ್ಣ - ಪುಟ್ಟ ರಜೆ ಪಡೆದರೂ ಅಥವಾ ಕನಿಷ್ಟ ವೇತನಕ್ಕೆ ಆಗ್ರಹಿಸಿದರೂ ಸಲ್ಲದ ಕಾರಣ ನೀಡಿ ಗುತ್ತಿಗೆದಾರರು ಕೆಲಸದಿಂದಲೇ ಕಿತ್ತು ಹಾಕುವ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಈವರೆಗೆ ಈ ಯಾವದೇ ಗುತ್ತಿಗೆದಾರರು ಕಾರ್ಮಿಕರಿಗೆ ಕ್ರಮಬದ್ಧವಾಗಿ ಭವಿಷ್ಯನಿಧಿ ಪಾವತಿಸಿಲ್ಲದ ಕಾರಣ ಈ ಎಲ್ಲಾ ಅಂಶಗಳನ್ನು ಜಾರಿಯಾಗುವವರೆಗೆ ತಕ್ಷಣದಿಂದ ಗುತ್ತಿಗೆದಾರರ ಯಾವದೇ ಬಾಕಿಯನ್ನು ಪಾವತಿಸದಂತೆ ತಡೆ ಹಿಡಿಯಬೇಕು ಹಾಗೂ ಇದಕ್ಕೆ ಕಾರಣವಾಗಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಂ.ಬಿ. ನಾಗಣ್ಣ, ಅನಿತಾ, ಜಯ, ಜ್ಯೋತಿ, ಮತ್ತಿತರರು ಪಾಲ್ಗೊಂಡಿದ್ದರು.