ಮಡಿಕೇರಿ, ಜೂ. 29: ಒಂದು ಕಾಲದಲ್ಲಿ ಮಡಿಕೇರಿ ನಗರದಲ್ಲಿ ವಾಹನ ಚಾಲನೆ ಮಾಡುವದೆಂದರೆ ಸುಲಭದ ಮಾತು. ಆದರೆ ಪ್ರಸ್ತುತ ನರಕಯಾತನೆ ಕೆಲವೊಮ್ಮೆ ವಾಹನವನ್ನು ಬದಿಗಿರಿಸಿ ನಡೆದು ಬಿಡೋಣ ಎನ್ನುವಷ್ಟು ಮಟ್ಟಿಗೆ ಟ್ರಾಫಿಕ್ ಸಮಸ್ಯೆಯ ಕಿರಿಕಿರಿ!ಮಡಿಕೇರಿ ನಗರದಲ್ಲಿ ದಿನೇ ದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಸ್ಥಳೀಯ ವಾಹನಗಳ ಜೊತೆಯಲ್ಲಿ ಪ್ರವಾಸಿಗರ ವಾಹನಗಳು ಸೇರಿಕೊಂಡು ಮಂಜಿನ ನಗರಿಯಲ್ಲಿ ಸಂಚಾರ ವ್ಯವಸ್ಥೆ ಅಯೋಮಯ. ಸಂಚಾರಿ ಠಾಣೆಗೆ ಅಧಿಕಾರಿಯೇ ಇಲ್ಲ. ಕಾನೂನು ಸುವ್ಯವಸ್ಥೆ, ಸಂಚಾರಿ ಠಾಣೆ ಎರಡಕ್ಕೂ ಒಬ್ಬರೇ ಅಧಿಕಾರಿ! ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿಯೂ ಇಲ್ಲ. ಇರುವ ಸಿಬ್ಬಂದಿಗಳೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿ ಸೇರಿಕೊಂಡರೂ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ದಿನನಿತ್ಯ ಪರದಾಟ.

(ಮೊದಲ ಪುಟದಿಂದ) ಎಲ್ಲಿ ನೋಡಿದರೂ ವಾಹನಗಳೇ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್. ಒಮ್ಮೊಮ್ಮೆ ಬೆಳಗ್ಗೆ ಕೆಲವರು ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿ ತೆರಳಿದರೆ ಅವರು ಬರುವವರೆಗೆ ಆ ಜಾಗದಲ್ಲಿ ಟ್ರಾಫಿಕ್ ಜಾಮ್, ಪೊಲೀಸರು ಸಂಬಂಧಿಸಿದ ಚಾಲಕರಿಗಾಗಿ ಸಿಳ್ಳೆ ಊದಿ ಊದಿ ಸುಸ್ತಾದ ಬಳಿಕ ಏನೂ ಅರಿವಿಲ್ಲದಂತೆ ಬರುವ ಚಾಲಕರು ತಪ್ಪನ್ನು ಒಪ್ಪಿಕೊಳ್ಳದೇ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುತ್ತಾರೆ! ಇದರಿಂದಾಗಿ ಪೊಲೀಸರಿಗೂ ನಾಗರಿಕರಿಗೂ ಒಂದು ರೀತಿಯ ಮುಜುಗರ. ಒಂದೆಡೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಮತ್ತೊಂದೆಡೆ ಅಗತ್ಯವಿರುವೆಡೆ ‘ನೋ ಪಾರ್ಕಿಂಗ್’ ಫಲಕಗಳೂ ಇಲ್ಲ. ಚಿತ್ರದಲ್ಲಿರುವದು ಚೌಕಿ ವೃತ್ತದ ಬಳಿ ಇಂದು ಎದುರಾದ ವಾಹನ ದಟ್ಟಣೆ.

ಇಂತಹ ಸನ್ನಿವೇಶ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಾಮೂಲಿ ಎನಿಸಿದೆ. ಕೆಲವೊಮ್ಮೆ ತುರ್ತು ಚಿಕಿತ್ಸಾ ವಾಹನಗಳೂ ಕೂಡ ಪರದಾಡುತ್ತಾ ಸಂಚರಿಸಬೇಕಾದ ದುಸ್ಥಿತಿ ಎದುರಾಗುತ್ತದೆ. ಒಟ್ಟಿನಲ್ಲಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಅನುಸರಿಸುವದರೊಂದಿಗೆ, ಪೊಲೀಸರು ಕೂಡ ವಾಹನ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ತುರ್ತು ಅನಿವಾರ್ಯತೆ ಇದೆ.

- ಉಜ್ವಲ್ ರಂಜಿತ್