ಗೋಣಿಕೊಪ್ಪಲು, ಜೂ. 29: ಕಾನೂರಿನಲ್ಲಿ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿದ ಬೃಹತ್ ಸೇತುವೆ ಸಮೀಪದಲ್ಲಿಯೇ ಅಮ್ಮಕೊಡವ ಕುಟುಂಬದವರ ಸ್ಮಶಾನವಿದೆ. ಲಕ್ಷ್ಮಣ ತೀರ್ಥ ನದಿ ತಟದಲ್ಲಿ ಪ್ರವಾಹ ಸ್ಥಿತಿ ಇದ್ದಾಗ ಸ್ಮಶಾನವೂ ಮುಳುಗಡೆಯಾಗುತ್ತದೆ. ಮಳೆಗಾಲದಲ್ಲಿ ಯಾರಾದರೂ ನಿಧನ ಹೊಂದಿದ್ದಲ್ಲಿ ಶವ ಸಂಸ್ಕಾರ ಮಾಡುವದೇ ದೊಡ್ಡ ಸವಾಲು. ಸಣ್ಣದಾದ ತೋಡೊಂದರ ಮೂಲಕ ಶವವನ್ನು ಪ್ರಯಾಸದಾಯಕವಾಗಿ ಸಾಗಿಸಬೇಕಾದ ಅನಿವಾರ್ಯತೆ. ಈ ಬಗ್ಗೆ ಹಿಂದೆ ‘ಶಕ್ತಿ’ ಬೆಳಕು ಚೆಲ್ಲಿತ್ತು. ಇದೀಗ ಕಿರುಸೇತುವೆಯನ್ನು ನಿರ್ಮಿಸಲು ಸರ್ಕಾರ ರೂ. 10 ಲಕ್ಷ ಅನುದಾನ ಕಲ್ಪಿಸಿದ್ದು, ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಇಲ್ಲಿನ ಗ್ರಾ.ಪಂ. ಸದಸ್ಯ ಕಾಡ್ಯಮಾಡ ಬೋಪಣ್ಣ ಅವರು ಈ ಹಿಂದೆ ಅಮ್ಮಕೊಡವ ಕುಟುಂಬದ ಸ್ಮಶಾನದ ಹಾದಿ ಬಗ್ಗೆ ಬೆಳಕು ಚೆಲ್ಲಿದ್ದರು. ಕಾಮಗಾರಿ ಆರಂಭವಾಗಿ ಸುಮಾರು 2 ವರ್ಷ ಕಳೆದರೂ ಸೇತುವೆ ಪೂರ್ಣಗೊಂಡಿಲ್ಲ. ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. 10 ಲಕ್ಷ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. ಜಿ.ಪಂ. ಇಂಜಿನಿಯರಿಂಗ್ ವಿಭಾಗಕ್ಕೆ ಇದರ ಕೆಲಸ ವಹಿಸಲಾಗಿದೆ.

ಇದೀಗ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಸೇತುವೆ ಇಬ್ಬದಿ ಮಣ್ಣು ತುಂಬಿಸಿ ಹಾದಿ ಸುಗಮ ಮಾಡಿ ಕೊಡಬೇಕಾಗಿದೆ. ಸುಮಾರು 70 ಅಮ್ಮಕೊಡವ ಕುಟುಂಬಗಳು ಸಣ್ಣ ಹಿಡುವಳಿ ದಾರರಾಗಿ ಕಾನೂರು ಸುತ್ತಮುತ್ತಲೂ ವಾಸ ಮಾಡುತ್ತಿದ್ದು, ಇದೇ ಸ್ಮಶಾನವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇದೀಗ ಗುತ್ತಿಗೆದಾರರು ಅನುದಾನ ಸಾಲುತ್ತಿಲ್ಲವೆಂದು ಹೇಳುತ್ತಿದ್ದಾರೆ ಎಂದು ಅಮ್ಮಕೊಡವ ಕುಟುಂಬ ಸದಸ್ಯ ಮನ್ನಕಮನೆ ಕಿರಣ್ ಆರೋಪಿಸುತ್ತಾರೆ.

ಕಾಮಗಾರಿಯನ್ನು ವೀಕ್ಷಣೆ ಮಾಡಿದಲ್ಲಿ ಕೇವಲ ರೂ. 5 ಲಕ್ಷದ ಕಾಮಗಾರಿಯೂ ನಡೆದಿರುವದಿಲ್ಲ. ಬದಲಿಗೆ ಕಳಪೆ ಕಾಮಗಾರಿ ಎಂದು ಹಲವು ಅಮ್ಮಕೊಡವ ಕುಟುಂಬಸ್ಥರು ‘ಶಕ್ತಿ’ಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀ ಕೃಷ್ಣ ಅಮ್ಮ ಕೊಡವ ಸಂಘ, ಅನ್ನಪೂರ್ಣೇಶ್ವರಿ ಅಮ್ಮಕೊಡವ ಮಹಿಳಾ ಸಂಘ, ಸ್ಥಳೀಯರಾದ ಹೆಮ್ಮಚ್ಚಿಮನೆ ಮಂಜುನಾಥ್, ಆಶಿತಾ, ಮನ್ನಕಮನೆ ರಾಜು ಮುಂತಾದವರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಉದ್ದೇಶಿತ ಸೇತುವೆ ಕಳಪೆ ಕಾಮಗಾರಿ ಬಗ್ಗೆ ಜಿ.ಪಂ. ವತಿಯಿಂದ ತನಿಖೆಗೆ ಒತ್ತಾಯಿಸಿದ್ದಾರೆ. ಈಗಾಗಲೇ ಬಾಳೆಲೆ-ಕಾನೂರು ವ್ಯಾಪ್ತಿಯ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಅವರಿಗೂ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ನೀಡಿರುವದಾಗಿ ತಿಳಿಸಿದ್ದಾರೆ. ಈ ಬಗ್ಗೆ ಜಿ.ಪಂ. ಇಂಜಿನಿಯರಿಂಗ್ ವಿಭಾಗ ತನಿಖೆ ನಡೆಸಿ, ಸಂಬಂಧಿಸಿದ ಗುತ್ತಿಗೆ ದಾರರು ಹಾಗೂ ಅಭಿಯಂತರರ ವಿರುದ್ಧ ಕ್ರಮಕ್ಕೆ ಅಮ್ಮಕೊಡವ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಕಾಮಗಾರಿಗೆ ತಂದು ಹಾಕಿರುವ ಕಲ್ಲು, ಮರಳು ಹಾಗೂ ಸಿಮೆಂಟ್ ನಿಷ್ಪ್ರಯೋಜಕ ವಾಗಿದೆ ಎಂದು ದೂರಿದ್ದಾರೆ.

- ಟಿ.ಎಲ್. ಶ್ರೀನಿವಾಸ್