ಮಡಿಕೇರಿ, ಜೂ. 29: ಚೆಯ್ಯಂಡಾಣೆಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ದಾಸ್ತಾನು ಗೊಬ್ಬರ ಚೀಲಗಳ ದಾಸ್ತಾನು ನಾಪತ್ತೆಯೊಂದಿಗೆ, ಭಾರೀ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಂಘದ ಎಲ್ಲಾ ಉದ್ಯೋಗಿಗಳಿಗೆ ಲಿಖಿತ ನೋಟೀಸ್ ಜಾರಿಗೊಳಿಸಿರುವ ಆಡಳಿತ ಮಂಡಳಿ, 13 ಸಾವಿರಕ್ಕೂ ಅಧಿಕ ಗೊಬ್ಬರ ಮೂಟೆಗಳು ನಾಪತ್ತೆಯಾಗಿರುವ ಬಗ್ಗೆ ಲಿಖಿತ ಉತ್ತರಕ್ಕೆ ಸೂಚಿಸಿದೆ.ಕಳೆದ ಮಾರ್ಚ್‍ನಲ್ಲಿ ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ಈ ಹಿಂದೆ ಎರಡು ಬಾರಿ ಅಧ್ಯಕ್ಷರಾಗಿದ್ದ ಪಿ.ಎಸ್. ಮಾದಪ್ಪ ಅವರ ನೇತೃತ್ವದಲ್ಲಿ ಹೊಸ ನಿರ್ದೇಶಕರು ಅಧಿಕಾರ ವಹಿಸಿಕೊಳ್ಳುವದರೊಂದಿಗೆ ಸಂಘದ ದಾಸ್ತಾನು ಪರಿಶೀಲನೆ ನಡೆಸಿದ್ದಾರೆ.

ಆಘಾತಕಾರಿ ಅಂಶ: ಈ ಸಂದರ್ಭ ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ದಾಖಲೆಗಳ ಪ್ರಕಾರ ಅಂದಾಜು 13438 ಚೀಲಗಳಿಗೂ ಅಧಿಕ ಗೊಬ್ಬರ ಗೋದಾಮಿನಲ್ಲಿ ಇರುವದಾಗಿ ಲೆಕ್ಕ ತೋರಿಸಿರುವದು ಕಂಡು ಬಂದಿದೆ. ಆ ಮೇರೆಗೆ ಗೊಬ್ಬರದ ಗೋದಾಮು ಪರಿಶೀಲನೆ

(ಮೊದಲ ಪುಟದಿಂದ) ಮಾಡಲಾಗಿ ಅಲ್ಲಿ ಗೊಬ್ಬರ ದಾಸ್ತಾನು ಕಂಡು ಬಂದಿಲ್ಲ. ಮಾತ್ರವಲ್ಲದೆ ದಾಖಲೆಯ ಲೆಕ್ಕ ತಾಳೆಯಾಗಿಲ್ಲ.

ಈ ಆಘಾತಕಾರಿ ಅಂಶದಿಂದ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಪ್ರಮುಖರು, ಮೇಲ್ನೋಟಕ್ಕೆ ಗೊಬ್ಬರ ದಾಸ್ತಾನು ಅವ್ಯವಹಾರ ಗೋಚರಿಸಿದ ಬೆನ್ನಲ್ಲೇ ವಿಎಸ್‍ಎಸ್‍ಎನ್ ವ್ಯಾಪಾರ ವಹಿವಾಟು ಸಂಬಂಧ ಭಾರೀ ಹಣ ದುರುಪಯೋಗದ ಶಂಕೆಯೊಂದಿಗೆ ವಿಎಸ್‍ಎಸ್‍ಎನ್ ಲೆಕ್ಕಾಧಿಕಾರಿ ಉಮಾವತಿ, ಕಾರ್ಯದರ್ಶಿ ಸಿ.ಎಂ. ಗೋಪಿ, ಮಾರಾಟ ಗುಮಾಸ್ತ ಅಯ್ಯಪ್ಪ ಹಾಗೂ ಚಂಗಪ್ಪ ಸೇರಿದಂತೆ ಜವಾನ ದೇವಪ್ಪ ಸಹಿತ ಎಲ್ಲರಿಗೂ ನೋಟೀಸ್ ಜಾರಿಗೊಳಿಸಿದ್ದಾರೆ. ಹೀಗಿದ್ದೂ ಸಂಬಂಧಪಟ್ಟವರಿಂದ ಸೂಕ್ತ ಸಮಜಾಯಿಷಿಕೆ ಲಭಿಸದ ಕಾರಣ, ಅಧ್ಯಕ್ಷ ಮಾದಪ್ಪ ನೇತೃತ್ವದ ಆಡಳಿತ ಮಂಡಳಿಯು ಜಿಲ್ಲಾ ಸಹಕಾರ ಉಪ ನಿಬಂಧಕರ ಕಚೇರಿಗೆ ನಿಯೋಗ ತೆರಳಿ ಹಗರಣದ ತನಿಖೆಗಾಗಿ ದೂರು ಸಲ್ಲಿಸಿರುವದಾಗಿ ಗೊತ್ತಾಗಿದೆ.

ಜಾಲಾಡುತ್ತಿರುವ ದಾಖಲೆ : ಇಷ್ಟಕ್ಕೆ ಸುಮ್ಮನಿರದ ವಿಎಸ್‍ಎಸ್‍ಎನ್ ಆಡಳಿತ ಮಂಡಳಿ ಪ್ರಮುಖರು, ಕಚೇರಿಯ ಸಮಗ್ರ ದಾಖಲೆಗಳನ್ನು ಜಾಲಾಡಿದರೂ ಕೂಡ, ಗೊಬ್ಬರ ದಾಸ್ತಾನು ಅಥವಾ ಮಾರಾಟ ಸಹಿತ ಖರೀದಿ ಮಾಡಲಾಗಿರುವ ಯಾವ ಮಾಹಿತಿ ಲಭ್ಯವಾಗುತ್ತಿಲ್ಲವೆಂಬ ಆತಂಕಕಾರಿ ಬೆಳವಣಿಗೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚೆಯ್ಯಂಡಾಣೆ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ, ಇತ್ತೀಚಿನ ವರ್ಷಗಳಲ್ಲಿ ಗೊಬ್ಬರ ಸರಬರಾಜು ಮಾಡಿರುವ ಹಾಸನ ಹಾಗೂ ಇತರೆಡೆಯ ವಿತರಕರ ಬಳಿ ಖುದ್ದು ತೆರಳಿದ್ದು, ಗೊಬ್ಬರ ಪೂರೈಕೆ ಪ್ರಮಾಣದ ದಾಖಲಾತಿಗಳನ್ನು ಕಲೆ ಹಾಕುತ್ತಿರುವರೆಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ.

ಮೇಲಿನ ಹಗರಣ ಕುರಿತು ಸಹಕಾರ ಇಲಾಖೆಯ ಉಪನಿಬಂಧಕರು, ಇಲಾಖೆಯಿಂದ ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ಕೇಳಿಬಂದಿರುವ ಆರೋಪಗಳ ತನಿಖೆಗೆ ಆದೇಶಿಸಿ ಕಚೇರಿ ಸಿಬ್ಬಂದಿಯೊಬ್ಬರನ್ನು ನೇಮಿಸಿದೆಯೆಂದು ತಿಳಿದು ಬಂದಿದೆ. ಅವರು ರಜೆಯಲ್ಲಿ ತೆರಳಿರುವ ಕಾರಣ ವಿಚಾರಣೆ ವಿಳಂಬವಾಗುವ ಮಾತು ಕೇಳಿಬರುತ್ತಿದೆ. ಅಲ್ಲದೆ, ಇಡೀ ಹಗರಣ ಕುರಿತು ಸಮಗ್ರ ತನಿಖೆಯೊಂದಿಗೆ ತಪ್ಪಿತಸ್ಥರ ವಿರುದ್ಧ ಅನುಸರಿಸಬೇಕಾದ ಕ್ರಮದ ಹಿನ್ನೆಲೆ ಜುಲೈ 9 ರಂದು ಆಡಳಿತ ಮಂಡಳಿ ಸಭೆ ಕರೆಯಲಾಗುತ್ತಿದ್ದು, ಸಭೆಯಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಲಿದೆ ಎಂದು ತಿಳಿದು ಬಂದಿದೆ.

-ಶ್ರೀಸುತ