ಮಡಿಕೇರಿ, ಜೂ. 29: ಕಾಫಿ ಗಿಡಗಳಲ್ಲಿ ಕಂಡು ಬರುವ ರೋಗ ಲಕ್ಷಣ ಗಳನ್ನು ಪರಿಶೀಲಿಸಲು ಕೇಂದ್ರದ ಸಂಶೋಧಕರ ತಂಡ ಜುಲೈ 4 ರಂದು ಜಿಲ್ಲೆಗೆ ಆಗಮಿಸಲಿದ್ದು, ರೋಗ ಲಕ್ಷಣ ಕಂಡು ಬಂದಿರುವ ಕಾಫಿ ಬೆಳೆಗಾರರು ಕಾಫಿ ಮಂಡಳಿ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಲ್ಲಿ ತೋಟಗಳಿಗೆ ಆಗಮಿಸಿ ಪರಿಶೀಲಿಸಲಿದ್ದಾರೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ತಿಳಿಸಿದ್ದಾರೆ.ಕಾಫಿ ಮಂಡಳಿ ಸಭೆ ನಡೆಸುವ ಸಂದರ್ಭ ಕಾಫಿ ಗಿಡಗಳಲ್ಲಿ ಕಂಡು ಬರುವ ಬೆರ್ರಿಬೋರರ್ ಕಾಂಡಕೊರಕದಂತಹ ರೋಗಗಳ ಬಗ್ಗೆ ತಜ್ಞರ ತಂಡ ಪರಿಶೀಲಿಸಿ ಬೆಳೆಗಾರರಿಗೆ ಅಗತ್ಯ ಮುನ್ನೆಚ್ಚರಿಕೆ ನೀಡುವಂತೆ ಒತ್ತಡ ಹಾಕಿದ ಮೇರೆಗೆ ಸಂಶೋಧಕರ ತಂಡ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಕಾಫಿ ಗಿಡಗಳಲ್ಲಿ ರೋಗ ಲಕ್ಷಣ ಕಂಡು ಬಂದಿರುವ ಬೆಳೆಗಾರರು ಕಾಫಿ ಮಂಡಳಿ ಸದಸ್ಯರಾದ ಜಿ.ಎಲ್. ನಾಗರಾಜ್, ಎಂ.ಬಿ. ಅಭಿಮನ್ಯುಕುಮಾರ್, ಬೊಟ್ಟಂಗಡ ರಾಜು, ಮಚ್ಚಮಾಡ ಡಾಲಿ ಚಂಗಪ್ಪ ಮತ್ತು ತನ್ನ ಮೊಬೈಲ್ ಸಂಖ್ಯೆ 9449989084ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಕೋರಿದ್ದಾರೆ.