ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೆದ್ದಾರಿ ಒತ್ತಿನ ಮದ್ಯದಂಗಡಿ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ವಿನಾಯಿತಿ ಒದಗಿಸುವಂತೆ ಪ್ರಯತ್ನಿಸುವ ಅವಶ್ಯಕತೆ ಎದುರಾಗಿದೆ. ಮದ್ಯ ವಹಿವಾಟು ಹಾಗೂ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕೊಡಗಿನಲ್ಲಿ ವಿಭಿನ್ನ ರೀತಿಯ ಸಮಸ್ಯೆಗಳಿವೆ ಎಂಬದನ್ನು ಸರಕಾರ ಅರಿಯಬೇಕಿದೆ. ಇದು ಕೇವಲ ತಮ್ಮ ಒಬ್ಬರ ಸಮಸ್ಯೆಯಲ್ಲ. ಜಿಲ್ಲೆಯ ಎಲ್ಲಾ ವರ್ತಕರು ಹಾಗೂ ಅವಲಂಬಿತರ ಸಮಸ್ಯೆಯಾಗಿದೆ. ಜಿಲ್ಲೆಯ ಪರಿಸ್ಥಿತಿಯಲ್ಲಿ ಸ್ಥಳಾಂತರಕ್ಕೆ ಜಾಗವೇ ಸಿಗದ ಸಮಸ್ಯೆಯಾಗಲಿದೆ.

ಉದಾಹರಣೆಗೆ ಸಿದ್ದಾಪುರ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಲ್ದಾರೆ, ಘಟ್ಟದಳ್ಳ, ಸಿದ್ದಾಪುರ, ಗೋಣಿಕೊಪ್ಪಲು ರಸ್ತೆ, ಕುಶಾಲನಗರ, ವೀರಾಜಪೇಟೆ ರಸ್ತೆ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ರಸ್ತೆಯ ಸುತ್ತಮುತ್ತ ಕಾಫಿ ತೋಟಗಳು ಹಾಗೂ ಅರಣ್ಯ ಪ್ರದೇಶಗಳೇ ಬರುತ್ತವೆ. ಕಾಫಿ ತೋಟ ಜಾಗವನ್ನು ಯಾರೂ ಬಿಟ್ಟುಕೊಡುವದಿಲ್ಲ. ಅಲ್ಲದೆ ಅರಣ್ಯ ಪ್ರದೇಶದಲ್ಲೂ ಮಳಿಗೆ ತೆರೆಯಲಾಗದು. ಇದರೊಂದಿಗೆ ಕಾಡಾನೆಗಳ ಸಮಸ್ಯೆಗಳೂ ಎಲ್ಲೆಮೀರಿದ್ದು ಜನತೆ, ಕಾರ್ಮಿಕ ವರ್ಗದವರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕೊಡಗು ಪುಟ್ಟ ಜಿಲ್ಲೆಯಾಗಿದ್ದು, ಇಂತಹ ಸನ್ನಿವೇಶದಲ್ಲಿ ಸ್ಥಳಾಂತರ ಮಾಡುವದು ಎಲ್ಲಿಗೆ ಎಂಬ ಪರಿಸ್ಥಿತಿ ಉಂಟಾಗಿದೆ.

ಗುಡ್ಡಗಾಡು ಪ್ರದೇಶವಾಗಿರುವ ಅಸ್ಸಾಂ, ಮೇಘಾಲಯದಲ್ಲಿ ಮದ್ಯ ವಹಿವಾಟಿಗೆ ವಿಶೇಷ ಪರಿಗಣನೆಯೊಂದಿಗೆ ಅವಕಾಶವಿದೆ. ಇದರಂತೆ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಕೊಡಗನ್ನು ವಿಶೇಷವಾಗಿ ಪರಿಗಣಿಸಬೇಕು. ಇದಲ್ಲದೆ ಕೊಡಗಿನಲ್ಲಿ ಮದ್ಯ ಬಳಕೆ ಸಂಸ್ಕøತಿಯ ಒಂದು ಭಾಗವಾಗಿಯೂ ಬಂದಿದೆ. ಈ ಎಲ್ಲಾ ಅಂಶಗಳನ್ನು ವಿಶೇಷವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆದ್ದಾರಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆ (ಮೇಜರ್ ಡಿಸ್ಟ್ರಿಕ್ಟ್ ರೋಡ್) ಎಂದು ಪರಿಗಣಿಸಿ ಸರಕಾರ ಕ್ರಮ ಕೈಗೊಂಡಲ್ಲಿ ಎಲ್ಲಾ ವರ್ತಕರು, ಅವಲಂಬಿತರು ಉಳಿದುಕೊಳ್ಳಲಿದ್ದಾರೆ.

- ಕುಟ್ಟಂಡ ಪ್ರಕಾಶ್ ಹಾಗೂ ವಾಣಿ, ವರ್ತಕರು, ಸಿದ್ದಾಪುರ.