ಮಡಿಕೇರಿ, ಜೂ.29 : ಇಂದಿನ ಸಮಾಜ ವಿದ್ಯಾರ್ಜನೆಗೆ ಅಗತ್ಯವಿರುವ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದ್ದು, ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶಗಳಿಸಿ ಸಾಧನೆ ಮಾಡಿದ ಚೆಂಬು ಸರಕಾರಿ ಪ್ರೌಢಶಾಲೆಯ ಶಿಕ್ಷಕರುಗಳನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅನಂತಶಯನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಈ ದೇಶ ಕಂಡ ಆದರ್ಶ ವ್ಯಕ್ತಿಗಳಂತೆ ಎಲ್ಲಾ ವಿದ್ಯಾರ್ಥಿಗಳು ಖ್ಯಾತಿಯ ಶಿಖರವನ್ನೇರಲು ಸಾಧನೆಯ ಹಾದಿಯಲ್ಲಿ ಸಾಗಬೇಕೆಂದರು.

ಹಿಂದಿನ ಕಾಲದಲ್ಲಿ ಶೈಕ್ಷಣಿಕ ಸಾಧನೆಗಳಿಗೆ ಅವಕಾಶಗಳು ಕಡಿಮೆ ಇತ್ತು, ಆದರೆ ಇಂದು ಸಾಕಷ್ಟು ಅವಕಾಶಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬಡವರ್ಗದ ಅಪ್ಪ ಅಮ್ಮನ ಕನಸನ್ನು ವಿದ್ಯಾರ್ಥಿಗಳು ನನಸು ಮಾಡಬೇಕೆಂದು ಸಲಹೆ ನೀಡಿದರು.

ಜಿ.ಪಂ.ನ ನಿವೃತ್ತ ಯೋಜನಾಧಿಕಾರಿ ಸತ್ಯನ್ ಮಾತನಾಡಿ, ಸಂವಿಧಾನದಲ್ಲಿ ಮೀಸಲಾತಿಯ ಕೊಡುಗೆಯನ್ನು ನೀಡುವ ಮೂಲಕ ಡಾ. ಅಂಬೇಡ್ಕರ್ ಅವರು ಸಮಾನತೆಯ ಸಮಾಜವನ್ನು ಕಟ್ಟಲು ಶ್ರಮಿಸಿದರು. ದೂರದೃಷ್ಟಿಯ ಚಿಂತನೆಯ ಸಂವಿಧಾನದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಅಲ್ಲದೆ ಸರ್ವರಿಗೂ ಶಿಕ್ಷಣ ಸಿಗಬೇಕೆನ್ನುವ ಆಲೋಚನೆ ಅಂಬೇಡ್ಕರ್ ಅವರಲ್ಲಿತ್ತು ಎಂದು ಹೇಳಿದರು.

ಟಿ.ಆರ್.ವಾಸುದೇವ್ ಮಾತನಾಡಿ, ಶಾಲೆಗಳು ದೇವಾಲಯ ವಿದ್ದಂತೆ, ಶಿಕ್ಷಕರುಗಳು ಪ್ರತ್ಯಕ್ಷ ದೇವರು ಎಂದು ಶ್ಲಾಘಿಸಿದರು.

ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕತೆ, ಏಕಾಗ್ರತೆ, ಪಾರದರ್ಶಕತೆ, ಪ್ರಾಮಾಣಿಕತೆ, ಉತ್ಕøಷ್ಟತೆ ಹಾಗೂ ಉತ್ತರದಾಯಿತ್ವ ವನ್ನು ಅಳವಡಿಸಿಕೊಳ್ಳಬೇಕೆಂದರು. ಪೋಷಕರು ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

ಸ್ಥಳೀಯ ಪ್ರಮುಖ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, ಗ್ರಾಮೀಣ ಭಾಗದ ಶಾಲೆಯ ಸಾಧನೆಯನ್ನು ಮತ್ತು ಸಾಧನೆಗೆ ಕಾರಣಕರ್ತರಾದ ಶಿಕ್ಷಕರುಗಳ ಶ್ರಮವನ್ನು ಶ್ಲಾಘಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ದೇಜಮ್ಮ, ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕೆÀ್ಷ ಸರಸ್ವತಿ, ದಸಂಸ ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್ ಹಾಗೂ ಸಂಘಟನಾ ಸಂಚಾಲಕ ದೀಪಕ್ ಉಪಸ್ಥಿತರಿದ್ದರು.

ಶಿಕ್ಷಕರುಗಳಾದ ದೇಜಮ್ಮ, ಪಿ.ಎಸ್. ಕಾಮಾಕ್ಷಿ, ಡಿ. ಸರಿತಾ, ಎಂ.ವಿ. ಮಮತ, ನಂದಾಮೋಳ್, ಜ್ಯೋತಿಶೆಟ್ಟಿ, ಕೆ.ಬಿ. ಕಮಲ ಹಾಗೂ ಹೇಮಲತಾ ಅವರುಗಳನ್ನು ದಸಂಸ ವತಿಯಿಂದ ಸನ್ಮಾನಿಸಲಾಯಿತು.