ಗೋಣಿಕೊಪ್ಪಲು, ಜೂ. 29: ಸ್ವಾತಂತ್ರ ಪೂರ್ವದ ತೋಟ ಮಾಲೀಕರ ಸಂಘಟನೆ ‘ಉಪಾಸಿ’ ಹಾಗೂ 1939ರಿಂದ ಆಸ್ತಿತ್ವಕ್ಕೆ ಬಂದಿರುವ ‘ದಿ ಎಸ್ಟೇಟ್ ಸ್ಟಾಫ್ ಯೂನಿಯನ್ ಆಫ್ ಸೌತ್ ಇಂಡಿಯಾ’ ನಡುವೆ ಕಾಫಿ, ಟೀ ಹಾಗೂ ರಬ್ಬರ್ ಕೈಗಾರಿಕೆ ಸಿಬ್ಬಂದಿಗಳ ವೇತನ ಪರಿಷ್ಕರಣೆಗೆ ಇತ್ತೀಚೆಗೆ ಒಪ್ಪಂದ ಏರ್ಪಟ್ಟಿದ್ದು, ಡಿಸೆಂಬರ್ 2016ರ ವೇತನದ ಮೇಲೆ ಶೇ. 23.5 ರಷ್ಟು ಮೂಲ ವೇತನ ಹೆಚ್ಚಳವಾಗಲಿದೆ. ಪ್ರತೀ ಮೂರು ತಿಂಗಳಿಗೆ ತುಟ್ಟಿ ಭತ್ಯೆ ಸಿಗಲಿದೆ ಎಂದು ಎಸ್ಟೇಟ್ ಸ್ಟಾಫ್ ಯೂನಿಯನ್ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ತಿಳಿಸಿದ್ದಾರೆ.

ಪಾಲಿಬೆಟ್ಟ ಟಾಟಾ ಕಾಫಿ ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ತಾ. 23 ರಂದು ಸಂಜೆ ವಿವಿಧ ತೋಟಗಳ ಕೈಗಾರಿಕಾ ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾಹಿತಿ ನೀಡಿದರು.

ಕಳೆದ 6 ತಿಂಗಳಿನಿಂದ ತಮಿಳುನಾಡಿನ ಕೂನೂರು, ಕೊಯಂಬತ್ತೂರು ಹಾಗೂ ಬೆಂಗಳೂರುವಿನಲ್ಲಿ 8 ಬಾರಿ ನಡೆದ ವೇತನ ಒಪ್ಪಂದ ಸಭೆಗಳ ಫಲಶ್ರುತಿಯಂತೆ ಇದೀಗ ವೇತನ ಶೇ. 23.5, ಪಿ.ಎಫ್. ಶೇ. 33 ಹಾಗೂ ತುಟ್ಟಿ ಭತ್ಯೆ 28 ಪಾಯಿಂಟ್‍ಗಳಿಂದ 32 ಪಾಯಿಂಟ್‍ಗಳವರೆಗೆ ಹೆಚ್ಚಳವಾಗಿದೆ. ಕಳೆದ 50 ವರ್ಷಗಳ ಹೋರಾಟದ ಫಲವಾಗಿ ಇದೇ ಪ್ರಥಮ ಬಾರಿಗೆ ಉತ್ತಮ ಸಿಬ್ಬಂದಿ ವೇತನ ಸಿಗಲಿದೆ ಎಂದು ಹೇಳಿದರು.

ತಮಿಳುನಾಡಿನ ಕೂನೂರುವಿನಲ್ಲಿ ತಾ. 16 ರಂದು ನಡೆದ ನೌಕರರ ಮತ್ತು ಮಾಲೀಕರ ಸಂಘಟನೆಗಳ ಮಧ್ಯೆ ಒಪ್ಪಂದವೇರ್ಪಟ್ಟಿದೆ. ಮಾಲೀಕರ ಸಂಘಟನೆಯಾದ ಯುನೈಟೆಡ್ ಫ್ಲಾಂಟರ್ಸ ಅಸೋಸಿಯೇಶನ್ ಆಫ್ ಸದರನ್ ಇಂಡಿಯಾ (ಉಪಾಸಿ) ಹಾಗೂ ದಿ ಎಸ್ಟೇಟ್ ಸ್ಟಾಫ್ ಯೂನಿಯನ್ ಆಫ್ ಸೌತ್ ಇಂಡಿಯಾ ಒಟ್ಟು 50 ವರ್ಷಗಳಲ್ಲಿ 20 ಬಾರಿ ವೇತನ ಒಪ್ಪಂದಕ್ಕೆ ಸಹಿ ಹಾಕುತ್ತಾ ಬಂದಿವೆ. ಈ ಬಾರಿ ಹೆಚ್ಚಳವಾದ ಶೇ. 23.5 ರಷ್ಟು ವೇತನವು 1.1.2017 ರಿಂದ ಪೂರ್ವಾನ್ವಯವಾಗುವಂತೆ 31.5.2019 ರವರೆಗೆ ಮೂರು ವರ್ಷದ ಅವಧಿಗೆ ಸೀಮಿತವಾಗಿರುತ್ತದೆ ಎಂದು ತಿಳಿಸಿದರು.

ಡಿಸೆಂಬರ್ 2016ರ ವೇತನದ ಮೇಲೆ ಶೇ.23.5 ರಷ್ಟು ಹೆಚ್ಚಾಗುವ ಮೂಲ ವೇತನದೊಂದಿಗೆ ಪ್ರತೀ ಪಾಯಿಂಟ್‍ಗೆ ರೂ. 28 ರಿಂದ ರೂ. 32 ರವರೆಗೆ ಪ್ರತೀ ಮೂರು ತಿಂಗಳಿಗೊಮ್ಮೆ ತುಟ್ಟಿಭತ್ಯೆ (ಡಿಎ) ಸಿಗಲಿದೆ. ಹಾಗೆಯೇ ಪ್ರವಾಸ ಭತ್ಯೆ, ವಾರ್ಷಿಕ ಇನ್‍ಕ್ರಿಮೆಂಟ್ ಇತ್ಯಾದಿ ವಿಷಯಗಳ ಸಂಬಂಧವೂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಶಿವಾನಂದಸ್ವಾಮಿ ವಿವರಿಸಿದರು.

ಉಪಾಸಿ ಅಧ್ಯಕ್ಷ ಕೊಡಗಿನ ವಿನೋದ್ ಶಿವಪ್ಪ, ಉಪಾಧ್ಯಕ್ಷ ತಮಿಳುನಾಡಿನ ಜಯರಾಮ್ ನೇತೃತ್ವದ ಮಾಲೀಕರ ಸಂಘಟನೆ ಹಾಗೂ ಎಸ್ಟೇಟ್ ಸ್ಟಾಫ್ ಯೂನಿಯನ್ ಸಂಘದ ಕಾರ್ಯಾಧ್ಯಕ್ಷ ಪಿ.ಆರ್. ಥೋಮಸ್, ಅಧ್ಯಕ್ಷ ಪಿ.ಎಸ್. ರೆಬೆಲೋ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕರ್ನಾಟಕದಿಂದ ಜಂಟಿ ಪ್ರಧಾನ ಕಾರ್ಯದರ್ಶಿಯಾದ ತಾನು, ಉಪಾಧ್ಯಕ್ಷ ಸುಧಾಕರ ಶೆಟ್ಟಿ ಹಾಗೂ ಟಾಟಾ ಕಾಫಿ ಸಂಸ್ಥೆಯ ಕೊಡಗು ಘಟಕದ ಅಧ್ಯಕ್ಷ ಮುರುಳಿ ಮೋಹನ್ ದಾಸ್ ಸಹಿ ಮಾಡಿರುವದಾಗಿ ತಿಳಿಸಿದ್ದಾರೆ. ವೇತನ ಹೆಚ್ಚಳದಿಂದಾಗಿ ಮೂಲ ವೇತನದ ಮೇಲೆ ರೂ. 3 ಸಾವಿರದಿಂದ ರೂ. 7 ಸಾವಿರದವರೆಗೂ ಸಿಬ್ಬಂದಿಗೆ ಇದರ ಲಾಭ ಸಿಗಲಿದೆ ಎಂದು ನುಡಿದರು.

ಅಧಿಕ ಸಂಬಳದೊಂದಿಗೆ ಅಧಿಕ ಕೆಲಸ ಮಾಡುವ ಹೊಣೆ ಸಿಬ್ಬಂದಿಗಳ ಮೇಲೆ ಇದೆ. ಮಾಲೀಕರ ಋಣ ತೀರಿಸುವ ನಿಟ್ಟಿನಲ್ಲಿ ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು. ಯಾವದೇ ಆರೋಪಗಳಿಲ್ಲದೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ನುಡಿದರು. ಟಾಟಾ ಕಾಫಿ ಸಂಸ್ಥೆಯ ಶೇ. 90 ಸಿಬ್ಬಂದಿಗಳು ಯೂನಿಯನ್‍ನಲ್ಲಿದ್ದಾರೆ ಎಂದರು.

ಅಧ್ಯಕ್ಷ ಪಿ.ಎಸ್. ರೆಬೆಲೋ ಅವರು ಮಾತನಾಡಿ, 1947ರಲ್ಲಿ ಮೊದಲ ವೇತನ ಪರಿಷ್ಕರಣೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಹಿಂದೆ ಮಾಲೀಕರು ಲಾಭದಾಯಕ ಅವಧಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರು. ಇದೀಗ ಉಪಾಸಿ ಅಧ್ಯಕ್ಷ ಕೊಡಗಿನ ವಿನೋದ್ ಶಿವಪ್ಪ ಅವರಿಗೆ ಮನವರಿಕೆಯಾದ ಹಿನ್ನೆಲೆ ಉತ್ತಮ ಒಪ್ಪಂದಕ್ಕೆ ಸಹಿ ಬಿದ್ದಿದೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯದ ಕಾಫಿ, ಟೀ ಹಾಗೂ ರಬ್ಬರ್ ಕೈಗಾರಿಕಾ ಸಿಬ್ಬಂದಿಗಳಿಗೆ ಇದರಿಂದ ಹೆಚ್ಚು ಲಾಭವಾಗಲಿದ್ದು, ಸಿಬ್ಬಂದಿಗಳ ಪರವಾಗಿ ಹೋರಾಟ ಮಾಡುತ್ತಿರುವ ಸಂಘಟನೆಯ ಖರ್ಚು ವೆಚ್ಚ ಭರಿಸಲು ಸಿಬ್ಬಂದಿಗಳು ತಮ್ಮ ಒಂದು ತಿಂಗಳ ಹೆಚ್ಚಳಗೊಂಡ ವೇತನ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಸಂಘದ ಅಧ್ಯಕ್ಷ ಪಾಣತ್ತಲೆ ಮುರುಳಿ ಮೋಹನ್ ದಾಸ್ ಅವರು ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭ ಟಾಟಾ ಕಾಫಿ ಹಾಗೂ ಬಿಬಿಟಿಸಿ ಕಾಫಿ ಸಂಸ್ಥೆಯ ಸಿಬ್ಬಂದಿಗಳ ಪರವಾಗಿ ರೆಬೆಲೋ, ಶಿವಾನಂದಸ್ವಾಮಿ ಹಾಗೂ ಮುರುಳಿ ಅವರನ್ನು ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಪದ್ಮಿನಿ, ಕಾರ್ಯದರ್ಶಿ ತಮ್ಮಯ್ಯ, ಬೋಪಣ್ಣ ಮುಂತಾದವರು ಉಪಸ್ಥಿತರಿದ್ದರು.

- ಟಿ.ಎಲ್. ಶ್ರೀನಿವಾಸ್