ಮಡಿಕೇರಿ, ಜೂ. 29 : ಕೇಂದ್ರ ಸರಕಾರದ ಬೆಳೆ ವಿಮಾ ಯೋಜನೆಯು ಕೊಡಗಿನ ಕಾಫಿ ಬೆಳೆಗಾರರ ಸಹಿತ ಕೃಷಿಕರಿಗೆ ಅಥವಾ ರೈತಾಪಿ ವರ್ಗಕ್ಕೆ ಯಾವದೇ ಪ್ರಯೋಜನವಾಗದು ಎಂಬ ಹಿನ್ನೆಲೆಯಲ್ಲಿ ಇಪ್ಪತ್ತು ಮಂದಿ ಕೃಷಿಕರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಈ ವಿಮಾ ಯೋಜನೆಯನ್ನು ರೈತರ ಮೇಲೆ ಹೇರದಂತೆ ತಡೆಯಾಜ್ಞೆ ತಂದಿದ್ದಾರೆ.ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಿಂದ ಕೊಡಗಿನ ರೈತರಿಗೆ ಯಾವ ಪ್ರಯೋಜನ ವಾಗದೆಂದು ಈ ಯೋಜನೆಯ ಕಡ್ಡಾಯ ಜಾರಿ ಕೊಡಗಿನ ರೈತರಿಗೆ ಬೇಡವೆಂದು ಜಿಲ್ಲೆಯ ಕೃಷಿಕರುಗಳಾದ 20 ಮಂದಿ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.

ರಾಜ್ಯ ಹೈಕೋರ್ಟ್‍ನ ನ್ಯಾಯಾಧೀಶರಾದ 4ನೇ ಪೀಠದ ಜಸ್ಟೀಸ್ ಬಿ.ಎಸ್. ಪಾಟೀಲ್ ಅವರು ಈ ಸಂಬಂಧ ಇಂದು ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಕೊಡಗು ಜಿಲ್ಲೆಯ ರೈತರಿಗೆ ವಿಮಾ ಕಂತು ಪಾವತಿಸುವದು ಕಡ್ಡಾಯವಲ್ಲವೆಂದು ಆದೇಶ ನೀಡುವದರೊಂದಿಗೆ ಜಿಲ್ಲೆಯ ರೈತರ ಪರ ವಕೀಲ ಕಾಂಗೀರ ಎಸ್. ಭೀಮಯ್ಯ

(ಮೊದಲ ಪುಟದಿಂದ) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸ್ವೀಕರಿಸಿ ಈ ತಡೆಯಾಜ್ಞೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರ ಸರಕಾರವು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಕಡ್ಡಾಯ ಜಾರಿಯೊಂದಿಗೆ ತಾ. 30 ರಂದು (ಇಂದು) ರೈತರು ವಿಮಾ ಕಂತು ಹಣ ಪಾವತಿಸಲು ಕಡೆಯ ದಿನವೆಂದು ಗಡುವು ನೀಡಿತ್ತು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಿತ ಎಲ್ಲ ಸಹಕಾರ ಸಂಸ್ಥೆಗಳಿಗೆ ವಿಮಾ ಹಣ ಕಂತು ಪಾವತಿಸಿಕೊಳ್ಳಲು ರಾಜ್ಯ ಸರಕಾರವು ಸುತ್ತೋಲೆ ರವಾನಿಸಿತ್ತು.

ಅಲ್ಲದೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಡಿ ರೈತರು ವಿಮಾ ಕಂತು ಪಾವತಿಗೆ ಜುಲೈ 15 ಕೊನೆಯ ದಿನವೆಂದು ನಿಗದಿಗೊಳಿಸಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನಿಂದ ಎಲ್ಲ ವ್ಯವಸಾಯ ಸೇವಾ ಸಹಕಾರ ಸಂಘಗಳು ಫಸಲು ಸಾಲ ಹಣ ಪಡೆಯುವ ವೇಳೆಯಲ್ಲೇ ಈ ವಿಮಾ ಕಂತು ತಡೆಹಿಡಿದು ಪಾವತಿಸಬೇಕೆಂದು ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಿತ್ತು.

ಹೀಗಾಗಿ ಕೊಡಗಿನಲ್ಲಿ ಬಹುತೇಕ ಬೆಳೆಗಾರರು ಕಾಫಿಯೊಂದಿಗೆ ಕರಿಮೆಣಸು ಬೆಳೆಯುವ ಕಾರಣ ತಮ್ಮ ತಮ್ಮ ತೋಟಗಳ ಫಸಲು ಸಂಬಂಧ ಸಾಲ ಸೌಲಭ್ಯ ಹೊಂದಲು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿ ಕರಿಮೆಣಸು ರಹಿತವೆಂದು ಪರಿಗಣಿಸಲು ಈ ಯೋಜನೆ ತೊಡಕಾಗುತಿತ್ತು.ಮಾತ್ರವಲ್ಲದೆ ಸಂಪಾಜೆ, ಪೆರಾಜೆ, ಕೊಯನಾಡು ಸೇರಿದಂತೆ ಕೆಲವೆಡೆ ಅಡಿಕೆಯನ್ನು ಕಾಫಿ ನಡುವೆ ಬೆಳೆಯುವದರಿಂದ ಸಾಲ ಸೌಲಭ್ಯ ಹೊಂದಿಕೊಳ್ಳುವದು ಹಾಗೂ ಮರುಪಾವತಿ ಆದಾಯ ಲೆಕ್ಕಕ್ಕೆ ಸಮಸ್ಯೆ ಉಂಟಾಗಿತ್ತು.ಇಲ್ಲಿ ಕಾಫಿಗೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ಅನ್ವಯವಾಗದ ಕಾರಣ ಭತ್ತ ಬೆಳೆಯುವ ಸಣ್ಣ ರೈತರಿಗೆ ವಿಮಾ ಕಂತು ಹಣ ಕಟ್ಟುವದು ಕಡ್ಡಾಯಗೊಳಿಸುವದರಿಂದ ತೊಂದರೆಯನ್ನು ಅನುಭವಿಸುತ್ತಾರೆಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದರು.

ವಿಮಾ ಸಂಸ್ಥೆ : ಕೇಂದ್ರ ಸರಕಾರದ ನಿರ್ದೇಶನದಂತೆ ರಾಜ್ಯ ಸರಕಾರ ಕೂಡ ಸುತ್ತೋಲೆ ಹೊರಡಿಸಿ ಜಿಲ್ಲೆಯ ರೈತರಿಗೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಾಲ ಹಣ ಪಾವತಿಸುವಾಗ ಅಡಿಕೆ ಹಾಗೂ ಕರಿಮೆಣಸುಗಳಿಗೆ ಶೇ. 5ರಷ್ಟು ವಿಮಾ ಕಂತು ಕಡಿತಗೊಳಿಸಿಕೊಂಡು ಹಣ ಪಾವತಿಸಲು ತಿಳಿಸಿತ್ತು.

ಇನ್ನು ಭತ್ತ ಹಾಗೂ ಮುಸುಕಿನ ಜೋಳ ಕೃಷಿಕರು ಸಾಲ ಸೌಲಭ್ಯ ಪಡೆಯಬೇಕಿದ್ದರೆ ಶೇ. 2ರಷ್ಟು ವಿಮಾ ಕಂತು ಪಾವತಿಸಬೇಕಿತ್ತು. ಈ ಬಗಗೆ ಒತ್ತಡದಲ್ಲಿ ಸಿಲುಕಿದ ಬೆಳೆಗಾರರು ಉಚ್ಛನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರತಿವಾದಿಗಳು ಯಾರು ? ನ್ಯಾಯಾಲಯದ ಮೆಟ್ಟಿಲೇರಿದ್ದ ಬೆಳೆಗಾರರು ಕೇಂದ್ರ ಸರಕಾರ, ರಾಜ್ಯ ಸರಕಾರ, ಅಪೆಕ್ಸ್ ಬ್ಯಾಂಕ್, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಸಹಿತ ಸಂಬಂಧಿಸಿದ ಅಧಿಕಾರಿಗಳನ್ನು ಪ್ರತಿವಾದಿಗಳಾಗಿ ಗುರಿ ಮಾಡಿದ್ದರು.

ಜಿಲ್ಲೆಯ ರೈತರ ಪರ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ವಕೀಲ ಕಾಂಗೀರ ಎಸ್. ಭೀಮಯ್ಯ ಮೂಲಕ ಸಲ್ಲಿಸಿ ಜಿಲ್ಲೆಯಲ್ಲಿ ಫಸಲು ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆಗೆ ಒತ್ತಡ ಹೇರದಂತೆ ತಡೆಯಾಜ್ಞೆಯನ್ನು ಇಪ್ಪತ್ತು ಮಂದಿ ಬೆಳೆಗಾರರು ಕೋರಿದ್ದರು.

ಈ ಪೈಕಿ ಸೋಮವಾರಪೇಟೆ ತಾಲೂಕಿನ ಕೆ.ಜಿ. ಸುರೇಶ್, ಕೆ.ಎಸ್. ದಾಸಪ್ಪ, ಎಂ.ಎಸ್. ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಎಸ್.ಎನ್. ಸೋಮಶೇಖರ್, ಎಂ.ಬಿ. ಪೂವಯ್ಯ, ಎಸ್.ಕೆ. ಪೂವಯ್ಯ, ಎಸ್.ಎಂ. ಚಂಗಪ್ಪ, ಬಿ.ಎಸ್. ಚಂಗಪ್ಪ, ಕೆ.ಪಿ. ರೋಷನ್, ಕೆ.ಟಿ. ಗಣಪಯ್ಯ, ಕೆ.ಜಿ. ಶ್ರೀಕಾಂತ್, ಎನ್. ನಂಜಪ್ಪ, ಬಿ.ಆರ್. ಸುಂದರ್, ಕೆ.ಕೆ. ಉದಯಚಂದ್ರ, ಕೆ.ಸಿ. ಮಮ್ಮು, ಪಿ.ಬಿ. ಬೋಪಯ್ಯ, ಸಿ.ಎಸ್. ಗಣಪತಿ, ಎನ್.ಎಂ. ಸುಬ್ರಮಣಿ ಹಾಗೂ ಕೆ.ಟಿ. ಅರುಣ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅಧಿಕಾರಿ ಸ್ಪಷ್ಟನೆ : ಹವಾಮಾನ ಆಧಾರಿತ ಬೆಳೆಗಳಿಗೆ ವಿಮಾ ಯೋಜನೆ ಜಾರಿಯಿಂದ ಜಿಲ್ಲೆಯ ಅಡಿಕೆ ಹಾಗೂ ಕರಿಮೆಣಸು ಬೆಳೆಗಾರರಿಗೆ ವೈಯಕ್ತಿಕ ನಷ್ಟಕ್ಕೆ ಒಳಗಾದರೂ ಕೂಡ ಪ್ರಯೋಜನ ಆಗಲಿದೆ ಎಂದು ಯೋಜನೆಯ ಅನುಷ್ಠಾನ ಅಧಿಕಾರಿ ಹಾಗೂ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗಿರೀಶ್ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಡಿ ಭತ್ತ ಮತ್ತು ಮುಸುಕಿನ ಜೋಳ ಕೃಷಿಕರಿಗೆ ಹವಾಮಾನ ವೈಪರೀತ್ಯವಲ್ಲದೆ ಯಾವದೇ ರೀತಿ ಪ್ರಕೃತಿ ವಿಕೋಪ, ಭೂಕುಸಿತ, ಮೇಘಸ್ಪೋಟ ಇತ್ಯಾದಿ ನಷ್ಟ ಹೊಂದಿದರೂ ಕೂಡ ವಿಮಾ ನೆರವು ಲಭಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಹವಾಮಾನ ಆಧಾರಿತ ವಿಮಾ ಯೋಜನೆ (ಡಬ್ಲ್ಯು.ಬಿ.ಸಿ.ಐ.ಎಸ್.) ಹಾಗೂ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ (ಪಿಎಂಎಫ್‍ಬಿವೈ) ಜಾರಿಯಿಂದ ಕ್ರಮವಾಗಿ ರೈತಾಪಿ ವರ್ಗ ಭಾರತೀಯ ಸ್ಟೇಟ್ ಬ್ಯಾಂಕ್‍ನಿಂದ (ಜಿಐಸಿ) ಅಗ್ರಿಕಲ್ಚರ್ ಇನ್ಶೂರೆನ್ಸ್ ಕಾರ್ಪೋರೇಶನ್ ಆಫ್ ನ್ಯೂ ಡೆಲ್ಲಿ (ಎ.ಐ.ಸಿ) ಮೂಲಕ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇಲ್ಲಿ ಒತ್ತಡ ಹೇರದೆ ರೈತರು ದೂರದೃಷ್ಟಿ ಯೋಜನೆಯ ಪ್ರಯೋಜನವನ್ನು ತಾವಾಗಿಯೇ ಹೊಂದಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಬಿ.ಡಿ. ಮಂಜುನಾಥ್ : ನ್ಯಾಯಾಲಯ ಈ ಸಂಬಂಧ ತಡೆಯಾಜ್ಞೆ ನೀಡಿರುವದು ಅರಿವಿಗೆ ಬಂದಿದ್ದು, ರೈತರು ಅವರ ಸ್ವಂತ ನಿರ್ಧಾರದಂತೆ ವಿಮೆ ಮಾಡಿಸಿಕೊಳ್ಳಬಹುದಾಗಿದ್ದು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಒತ್ತಡ ಹೇರುವದಿಲ್ಲವೆಂದು ಅಧ್ಯಕ್ಷ ಬಿ.ಡಿ. ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ. ವಿಮಾ ಯೋಜನೆಯನ್ನು ರೈತರ ಐಚ್ಚಿಕ ನಿರ್ಧಾರಕ್ಕೆ ಬಿಟ್ಟು ಅಧಿಕಾರಿಗಳು ಒತ್ತಡ ಹೇರದಿರುವದು ಒಳಿತು ಎಂದು ಮಂಜುನಾಥ್ ಮಾರ್ನುಡಿದರು.

ಶಶಿ ಸುಬ್ರಮಣಿ : ನ್ಯಾಯಾಲಯದಿಂದ ಕೊಡಗಿನ ಬೆಳೆಗಾರರು ಸೇರಿದಂತೆ ಎಲ್ಲ ಕೃಷಿಕರಿಗೆ ನಿರಾಳವಾಗಿದ್ದು, ಅಧಿಕಾರಿಗಳು ವಿಮಾ ಕಂತು ಪಾವತಿಸಲು ಒತ್ತಡ ಹೇರಬಾರದೆಂದು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ದೇವಣಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಪ್ರತಿಕ್ರಿಯೆ ನೀಡಿದ್ದಾರೆ.