ಮಡಿಕೇರಿ, ಜೂ. 29: ಇಂದಿನ ಆಧುನಿಕ ಯಂತ್ರಗಳ ಬರಾಟೆ, ಐಷಾರಾಮಿ ವಾಹನಗಳ ಓಡಾಟಕ್ಕೂ ಮುನ್ನ ಕೇವಲ ಮೂರ್ನಾಲ್ಕು ದಶಕಗಳ ಹಿಂದಿನ ನೇಗಿಲ ಯೋಗಿಯ ಆ ಜೀವನ ಕೊಡಗಿನಲ್ಲಿ ಅತ್ಯಂತ ಸುಂದರ ಬದುಕು ಕೊಟ್ಟಿತ್ತು. ವರುಷಗಳು ಉರುಳಿದಂತೆ ಕೊಡಗಿನ ಜನತೆಯ ಆ ಸುಂದರ ಬದುಕು ಕ್ಷೀಣಗೊಳ್ಳುತ್ತಿರುವ ಅನುಭವವಾಗುತ್ತಿದೆ.

ಕೃಷಿ ಕಾಯಕ ನಿರತ ನೇಗಿಲ ಯೋಗಿಯ ಗದ್ದೆ ಉಳುಮೆ ಕೆಲಸಕ್ಕೆ ಸಾಲುಗಟ್ಟಿ ನಿಲ್ಲುತ್ತಿದ್ದ ಆ ಎತ್ತುಗಳು, ಗೊಬ್ಬರ ಖನಿಯಾಗಿದ್ದ ಗೋ ಸಂಪತ್ತು, ಮನೆ ತುಂಬ ಮಕ್ಕಳು, ಬಾಣೆಯೆಲ್ಲ ಜಾನುವಾರು, ಶಾಲಾ ಮೈದಾನ ತುಂಬಾ ಬಾಲ - ಬಾಲೆಯರ ಆ ನಲಿವು ಎಲ್ಲವೂ ನೆನಪಿನಲ್ಲಿ ಕಾಡುತ್ತಿದೆ. ಮುಂಗಾರು ಸಮೀಪಿಸುತ್ತಲೇ ಕೊಟ್ಟಿಗೆಯಿಂದ ಮನೆ ಮಂದಿಯೆಲ್ಲ ಸೇರಿಕೊಂಡು ಕುಕ್ಕೆ ಕುಕ್ಕೆ ಸಗಣಿ ಗೊಬ್ಬರ ಹೊತ್ತು ಹಾಕುವ ಮುಖಾಂತರ, ಬಂಗಾರದ ಬೆಳೆ ಕೊಡುವ ಆ ಗದ್ದೆಯನ್ನು ಸಾಲುಗಟ್ಟಿ ಊಳುತ್ತಿದ್ದ ನೇಗಿಲ ಯೋಗಿಯ ಹಾಡು ಕೇಳುವದು ಅಪರೂಪವಾಗಿದೆ.

ಅದ್ಭುತ ಮೈಕಟ್ಟಿನ ಸಾಲು ಸಾಲು ಜೋಡೆತ್ತುಗಳಿಗೆ ನೇಗಿಲು - ನೊಗ ಜೋಡಿಸಿ ಏಕಾಗ್ರಚಿತ್ತದಿಂದ ಕಾಯಕದೊಂದಿಗೆ ಸ್ವಾಭಿಮಾನ ಬದುಕು ಕಟ್ಟಿಕೊಂಡಿದ್ದ ರೈತ ಕುಟುಂಬಗಳ ತುಂಬು ಜೀವನ ಕಣ್ಮರೆಯಾಗಿ ಬರಿಯ ಬರಡುತನದ ಅನುಭವವಾಗತೊಡಗಿದೆ. ಊರ ಮಂದಿಯೆಲ್ಲ ಪರಸ್ಪರ ಕೈಜೋಡಿಸಿ ಮುಂಗಾರಿನ ನಾಲ್ಕೈದು ತಿಂಗಳ ಮಳೆಗಾಲ ಎದುರಿಸಲು ಕೊಟ್ಟಿಗೆ ತುಂಬ ಸೌದೆ, ಜಾನುವಾರುಗಳಿಗೆ ರಾಶಿ ರಾಶಿ ಹುಲ್ಲು, ಕೋಣೆಯ ಮಂಚದಡಿಯಲ್ಲಿನ ಬಲಿತ ಸೌತೆ, ಬೆಳ್ಳರಿ ಕಾಯಿಗಳು, ಅಟ್ಟದ ಮೇಲ್ಗಡೆಯ ಭತ್ತರಾಶಿ, ಕಾಚಂಪುಳಿ, ಜೇನು ಇತ್ಯಾದಿ ಕೇವಲ ನೆನಪಿನಲ್ಲಿವೆ.

ಅಮ್ಮ ಸಿದ್ಧಗೊಳಿಸುತ್ತಿದ್ದ ಬಿಸಿ ಬಿಸಿ ರುಚಿಕರ ಆಹಾರಕ್ಕೆ ತಕ್ಕಂತೆ ಹೊಟ್ಟೆ ತುಂಬಿಸುತ್ತಿದ್ದ ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ ಇತ್ಯಾದಿಯ ಪರಿಮಳದ ಕಂಪು ತಂಪು ಇಂದು ಕನಸಾಗತೊಡಗಿದೆ. ಮಳೆ - ಗಾಳಿಯ ವ್ಯತ್ಯಾಸದೊಂದಿಗೆ ಅಥವಾ ಕದ್ದು ಮುಚ್ಚಿ ಕುಡಿಯುತ್ತಿದ್ದ ತಣ್ಣೀರು, ಮಳೆ ನೆನೆಯುವ ಹುರುಪಿನಿಂದ ಶೀತವಾದಾಗ ಬೈಗುಳದೊಂದಿಗೆ ಅಮ್ಮ ಕೊಡುತ್ತಿದ್ದ ಕಷಾಯ, ಅಪ್ಪ ಅರೆದು ಕುಡಿಸುತ್ತಿದ್ದ ಸೊಪ್ಪಿನ ರಸಗಳ ನಾಟಿ ಔಷಧಿ ಹೇಳ ಹೆಸರಿಲ್ಲದಾಗಿದೆ.

ಪ್ರಾರಂಭಿಕ ಮುಂಗಾರು ಬೆನ್ನಲ್ಲೇ ಉಳುಮೆ ಸಾಗಿದ ಗದ್ದೆಗಳಲ್ಲಿ ನಾಟಿ ಕಾರ್ಯಕ್ಕೆ ಸಿದ್ದಗೊಳ್ಳುತ್ತಿದ್ದ ಹಚ್ಚ ಹಸಿರಿನ ಪೈರುಗಳ್ನು ಹೆಂಗಳೆಯರು ಒಗ್ಗೂಡಿ ಕಟ್ಟು ಕಟ್ಟು ರಾಶಿಗೊಳಿಸಿದರೆ, ಅವುಗಳನ್ನು ಬುಟ್ಟಿಗಳಲ್ಲಿ ತುಂಬಿಕೊಂಡು ಹೋಗಿ ಗದ್ದೆ ಏರಿಯಲ್ಲಿ ಹಾಕುತ್ತಿದ್ದ ಮಕ್ಕಳು, ಆ ಪೈರನ್ನು ವಿಶಾಲ ಗದ್ದೆ ತುಂಬಾ ಹರಡಿ ಸಾಲು ಸಾಲು ನಾಟಿ ನೆಡುತ್ತಿದ್ದ ಹಿರಿಯರ ಗುಂಪು ಮರೆಯಾಗುತ್ತಿವೆ. ಅಗಡಿಯ ಪೈರು ಕೆಲಸ ಕೊನೆಗೊಳ್ಳುತ್ತಲೇ, ಭತ್ತದ ಗದ್ದೆಯ ನಾಟಿ ಕಾರ್ಯ ಮುಗಿಯುತ್ತಿದ್ದಂತೆಯೇ, ದೊಡ್ಡಗದ್ದೆಯ ಅತ್ತಲಿಂದ ಇತ್ತಲಿನ ತುತ್ತ ತುದಿವರೆಗೆ ಸ್ಪರ್ಧೆಯ ರೀತಿಯಲ್ಲಿ ನಡೆಸುತ್ತಿದ್ದ ನಾಟಿ ಓಟದ ಸೊಬಗು ಇಂದು ಕೇವಲ ಒಂದು ಆಚರಣೆಯಾಗಿಬಿಟ್ಟಿದೆ.

ಬಹುಮಾನವೇನಿತ್ತು?: ಊರ ಮಂದಿಯ ಹುರುಪಿನ ಆ ನಾಟಿ ಓಟದಲ್ಲಿ ಮೊದಲು ಜಯಿಸಿದವರಿಗೆ ನೀಡುತ್ತಿದ್ದ ಆ ಬಲಿತ ಬಾಳೆಗೊನೆ, ದ್ವಿತೀಯ ಸ್ಥಾನಗಳಿಸಿದಾತನಿಗೆ ನೀಡುತ್ತಿದ್ದ ತೆಂಗಿನಕಾಯಿ, ತೃತೀಯ ಸ್ಥಾನ ಪಡೆದಾತನಿಗೆ ನೀಡುತ್ತಿದ್ದ ಎಲೆ ಅಡಿಕೆಯಂತಹ ಅಮೂಲ್ಯ ಬಹುಮಾನ ಇಂದು ಮೌಲ್ಯ ಕಳೆದುಕೊಂಡಿದೆ ಎನಿಸುತ್ತಿದೆ.

ಕಂಬಳ ಕಣ್ಮರೆ : ಮುಂಗಾರು ಕೃಷಿ, ಭತ್ತದ ಬೆಳೆ ಕುಯಿಲು, ಒಕ್ಕಲು ಕೆಲಸ ಸೇರಿದಂತೆ ಎಲ್ಲಾ ಶುಭ, ಅಶುಭ ಕಾರ್ಯಗಳಲ್ಲಿ ಮನೆಮಂದಿ, ಕುಟುಂಬ, ಊರು, ನಾಡು ಸೇರಿದಂತೆ ಒಗ್ಗೂಡಿ ನಿರಾಯಾಸದಿಂದ ಆಚರಿಸುತ್ತಿದ್ದ ಒಗ್ಗಟ್ಟಿನ ಪ್ರತೀಕವಿದ್ದ ಆ ಕಂಬಳಗಳೇ (ಸಾಮೂಹಿಕ ಕೆಲಸ) ಇಂದು ಕಾಣದಾಗಿದೆ. ಪರಿಣಾಮ ಊರು, ಕೇರಿ, ಮನೆ, ಮನಗಳಲ್ಲಿ ಅಂದು ಒಗ್ಗೂಡುವಿಕೆ ನಡುವೆ ಬೆಸೆದುಕೊಂಡಿದ್ದ ಆ ಸಂಬಂಧಗಳು ಇಂದು ಮರೆಯಾಗಿ ಪರಸ್ಪರ ದೂರ ದೂರವಾಗುತ್ತಿರುವ ಜೀವನ ಶೈಲಿಯ ನಡುವೆ ಸಂಶಯದ ಪುಸ್ತಕಗಳನ್ನು ನೋಡುವಂತಾಗಿದೆ.

ಇಂದಿನ ಈ ಜೀವನ ಶೈಲಿಯ ರೋಗಗ್ರಸ್ಥ ವ್ಯವಸ್ಥೆಯಿಂದ ಅಂದಿನ ಸುಂದರ ಬದುಕಿನೆಡೆಗೆ ನಮ್ಮ ಯುವ ಜನಾಂಗವನ್ನು ಕೊಂಡೊಯ್ಯಬೇಕಾದರೆ, ಮತ್ತೊಮ್ಮೆ ಕೃಷಿ ಕಾಯಕದಂತಹ ಸಾಮೂಹಿಕ ಜೀವನದ ಅವಿಭಕ್ತ ಕುಟುಂಬ ವ್ಯವಸ್ಥೆಗೆ ಮರಳಬೇಕೆನಿಸುತ್ತದೆ. ಅದು ಬಹುಶಃ ನಾಳೆಯ ನಮಗಾಗಿ, ನಮ್ಮ ಮಕ್ಕಳಿಗಾಗಿ, ನಮ್ಮ ಊರು, ನಾಡು, ಸಮಾಜದೊಂದಿಗೆ ಈ ಸುಂದರ ಕೊಡಗಿನ ಹಿರಿಮೆಗಾಗಿ, ಆ ಮೂಲಕ ಕರುನಾಡಿನ ಮೇಲ್ಮೆ ಹಾಗೂ ಬಲಿಷ್ಠ ಭಾರತದ ಪುನರುತ್ಥಾನಕ್ಕಾಗಿ, ಇಲ್ಲಿ ಯಾರೊಬ್ಬರಿಗಾಗಿ ಇನ್ನೊಬ್ಬರು ತ್ಯಾಗ ಮಾಡಬೇಕಿಲ್ಲ. ಬದಲಾಗಿ ಅವರವರ ಕಾಯಕವನ್ನು ಅರಿತು ಮಾಡುವದರಲ್ಲಿ ನಾಳಿನ ಸಾರ್ಥಕತೆ ಕಾಣಬಹುದು.

- ಶ್ರೀಸುತ