ಸೋಮವಾರಪೇಟೆ, ಜೂ. 29: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸುವ ಮೂಲಕ ಅದನ್ನು ಸಮಾಜದೆದುರು ತೆರೆದಿಡುವ ಕಾರ್ಯ ಆಗಬೇಕಿದೆ. ಪ್ರತಿಭೆಗಳನ್ನು ಸಮಾಜವೇ ಪ್ರೋತ್ಸಾಹಿಸಬೇಕಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಚಿಗುರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಗಳು ಅಡಗಿದ್ದು, ಅದನ್ನು ಹೊರತೆಗೆಯುವ ಕಾರ್ಯ ಶಿಕ್ಷಕರು ಮತ್ತು ಪೋಷಕರಿಂದ ಆಗಬೇಕಿದೆ. ಶಿಕ್ಷಣ ಕ್ಷೇತ್ರದೊಂದಿಗೆ ಇತರ ಕ್ಷೇತ್ರಗಳತ್ತಲೂ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಲೋಕೇಶ್ವರಿ ಗೋಪಾಲ್ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್. ಮುತ್ತಣ್ಣ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೋರ್ವರೂ ಶಿಸ್ತು ಸಂಯಮ ಮೂಡಿಸಿಕೊಳ್ಳಬೇಕು. ಜ್ಞಾನಾರ್ಜನೆಯೊಂದಿಗೆ ಸಮಾಜದ ಆಗುಹೋಗುಗಳ ಬಗ್ಗೆಯೂ ತಿಳಿದುಕೊಳ್ಳಬೇಕು.

ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ವೇದಿಕೆ ಲಭಿಸಿದಲ್ಲಿ ಮುಂದೆ ಉನ್ನತ ಸ್ಥಾನಕ್ಕೆ ಏರಬಲ್ಲರು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರವೂ ಬಹುಮುಖ್ಯ ಎಂದರು.

ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಜೆ.ಪಿ. ಲಿಂಗರಾಜು, ಕಾರ್ಯದರ್ಶಿ ಎನ್.ಬಿ. ಗಣಪತಿ, ನಿರ್ದೇಶಕ ಶಿವಯ್ಯ, ಪ್ರಾಥಮಿಕ ಶಾಲೆಯ ವ್ಯವಸ್ಥಾಪಕಿ ಕವಿತಾ ವಿರೂಪಾಕ್ಷ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯಿನಿ ಮಿಲ್ಟ್ರೇಡ್ ಗೋನ್ಸಾಲ್ ವೇಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್, ಶಾಂತಳ್ಳಿ ಗಣೇಶ್ ಅವರುಗಳು ಉಪಸ್ಥಿತರಿದ್ದರು.

ಮೈಸೂರಿನ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್‍ನ ವಿದ್ಯಾರ್ಥಿಗಳು ನಡೆಸಿಕೊಟ್ಟ ರಾಯಲ್ ರಿದಮ್ಸ್ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು.

ನಂತರ ವಿಶ್ವ ಮಾನವ ಕುವೆಂಪು ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ, ಏಕಪಾತ್ರಾಭಿನಯ ಸೇರಿದಂತೆ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿದವು.