ಮಡಿಕೇರಿ, ಜೂ. 29: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಕೆಯ ಸಾವಿಗೆ ಕಾರಣಕರ್ತನಾದ ಪತಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಕೊಡ್ಲಿಪೇಟೆಯ ಬಸವೇಶ್ವರ ಕಲ್ಯಾಣ ಮಂಟಪ ರಸ್ತೆ ನಿವಾಸಿ, ಚಂದ್ರಶೇಖರ್ ಎಂಬಾತ ಸಕಲೇಶಪುರ ತಾಲೂಕಿನ ದೊಡ್ಡಕಲ್ಲೂರು ಗ್ರಾಮದ ಡಿ.ಆರ್. ಪಾಲಾಕ್ಷ ಅವರ ಪುತ್ರಿ ಸವಿತಾಳನ್ನು ವಿವಾಹವಾಗಿದ್ದ. ಮದುವೆ ಸಂದರ್ಭದಲ್ಲಿ ವರನ ಕಡೆಯಿಂದ 200 ಗ್ರಾಂ. ಒಡವೆಗಳನ್ನು ವರದಕ್ಷಿಣೆಯಾಗಿ ಕೇಳಲಾಗಿದ್ದು, ಈ ಪೈಕಿ 150 ಗ್ರಾಂ. ನೀಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಮದುವೆ ಸಂದರ್ಭದಲ್ಲಿ ರೂ. 1 ಲಕ್ಷ ನಗದು ಹಾಗೂ ಆಭರಣಗಳನ್ನು ದಕ್ಷಿಣೆಯಾಗಿ ಚಂದ್ರಶೇಖರ ಪಡೆದುಕೊಂಡಿದ್ದ.

ನಂತರದಲ್ಲಿ ಇನ್ನೂ ರೂ. 2 ಲಕ್ಷ ಹಣ ತರುವಂತೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದುದರಿಂದ ತಾ. 10.10. 2009 ರಂದು ಸವಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಮೃತಳ ಪೋಷಕರು ನೀಡಿದ ದೂರಿನ ಮೇರೆಗೆ ಮೊಕದ್ದಮೆ

(ಮೊದಲ ಪುಟದಿಂದ) ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು ಪತ್ನಿಗೆ ಕಿರುಕುಳ ಮತ್ತು ಮಾನಸಿಕ ದೌರ್ಜನ್ಯ ನೀಡಿದ ಅಪರಾಧಕ್ಕಾಗಿ 3 ವರ್ಷಗಳ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡ, ವರದಕ್ಷಿಣೆಗಾಗಿ ಪೀಡಿಸಿ ಆಕೆಯ ಸಾವಿಗೆ ಕಾರಣನಾಗಿರುವದರಿಂದ 8 ವರ್ಷಗಳ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡ, ಆತ್ಮಹತ್ಯೆಗೆ ಪ್ರಚೋದನೆ ಮಾಡಿದಕ್ಕಾಗಿ 6 ವರ್ಷಗಳ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡ, ವರದಕ್ಷಿಣೆ ಪಡೆದ ಅಪರಾಧಕ್ಕಾಗಿ 5 ವರ್ಷಗಳ ಕಠಿಣ ಸಜೆ ಮತ್ತು ರೂ. 1 ಲಕ್ಷ ದಂಡ, ಮದುವೆ ನಂತರವೂ ವರದಕ್ಷಿಣೆ ತರಲು ಒತ್ತಾಯ ಮಾಡಿದ ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ ಹಾಗೂ ರೂ. 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ವಸೂಲಾತಿಯಾಗುವ ಒಟ್ಟು ದಂಡದ ಹಣದಲ್ಲಿ ರೂ. 1.10 ಲಕ್ಷವನ್ನು ಮೃತಳ ತಂದೆ ಡಿ.ಆರ್. ಪಾಲಾಕ್ಷ ಅವರಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.

ಪತ್ನಿಯ ಹತ್ಯೆಗೆ ಯತ್ನಿಸಿದಾತನಿಗೆ ಶಿಕ್ಷೆ

ಪತ್ನಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈಯ್ಯಲು ಯತ್ನಿಸಿದಾತನಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮುಕ್ಕೋಡ್ಲು ಗ್ರಾಮದ ನಿವಾಸಿ, ಸುಬ್ರಮಣಿ ಎಂಬಾತ ಕುಂಬೂರಿವಿನ ಬಿ.ಎಸ್. ಅನಿತಾ ಎಂಬಾಕೆಯನ್ನು ವಿವಾಹವಾಗಿದ್ದು, ಇವರಿಗೆ ಓರ್ವ ಮಗಳಿದ್ದಾಳೆ. ಮದುವೆಯಾಗಿ ಒಂದು ವರ್ಷದವರೆಗೆ ಚೆನ್ನಾಗಿದ್ದ ಸುಬ್ರಮಣಿ ನಂತರ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದುದಲ್ಲದೆ, ತವರು ಮನೆಯಿಂದ ಹಣ, ಬೈಕ್ ಕೊಡಿಸುವಂತೆ ಪೀಡಿಸುತ್ತಿದ್ದ.

ಇದರಿಂದ ಬೇಸತ್ತು ಸವಿತ ತನ್ನ ಮಗುವಿನೊಂದಿಗೆ ಕುಂಬೂರುವಿನ ತನ್ನ ತವರು ಮನೆಗೆ ತೆರಳಿ ಅಲ್ಲಿಂದ ಮಕ್ಕಂದೂರಿಗೆ ಹೊಲಿಗೆ ತರಬೇತಿಗೆ ಬರುತ್ತಿದ್ದಳು. ಅಲ್ಲಿಗೂ ಕೂಡ ಬರುತ್ತಿದ್ದ ಸುಬ್ರಮಣಿ ತನ್ನ ಜೊತೆ ಬಾ ಎಂದು ಪೀಡಿಸುತ್ತಿದ್ದ. ಇದಕ್ಕೆ ನಿರಾಕರಿಸಿದ್ದರಿಂದ ತಾ. 12.12.2013 ರಂದು ಸುಬ್ರಮಣಿ ಮಕ್ಕಂದೂರಿಗೆ ಬಂದು ರಸ್ತೆ ಬದಿ ಬಸ್‍ಗಾಗಿ ನಿಂತಿದ್ದ ಸವಿತಾಳಿಗೆ ತನ್ನ ಜೊತೆ ಬರುವಂತೆ ಹೇಳಿದ್ದಾನೆ. ಆಕೆ ಒಪ್ಪದ್ದರಿಂದ ಹೊಡೆದು, ಕತ್ತಿಯಿಂದ ತಲೆ, ಕುತ್ತಿಗೆ, ಬೆನ್ನು ಹಾಗೂ ಕೈಗೆ ಕಡಿದು ಪರಾರಿಯಾಗಿದ್ದರು.

ಈ ಸಂಬಂಧ ದೊರೆತ ಪುಕಾರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಅವರು, ಕೊಲೆಗೆ ಯತ್ನಿಸಿದ ಅಪರಾಧಕ್ಕಾಗಿ 5 ವರ್ಷ ಕಠಿಣ ಸಜೆ ಮತ್ತು ರೂ. 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾತಿಯಲ್ಲಿನ ಹಣದಲ್ಲಿ ರೂ. 12 ಸಾವಿರವನ್ನು ಗಾಯಾಳು ಅನಿತಾಳಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕಿ ಎಂ. ಕೃಷ್ಣವೇಣಿ ವಾದ ಮಂಡಿಸಿದ್ದರು.

ಕೊಲೆಯತ್ನ - ಆರೋಪಿಗೆ ಶಿಕ್ಷೆ

ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

2ನೇ ಮೊಣ್ಣಂಗೇರಿ ಗ್ರಾಮದಲ್ಲಿ ತಾ.2.8.2013 ರಂದು ಮಧ್ಯರಾತ್ರಿ ಆರೋಪಿ ಸೀತಾರಾಮ ಎಂಬಾತ ಹಣದ ವಿಚಾರದಲ್ಲಿ ಜಗಳ ಆರಂಭಿಸಿ ಪತ್ನಿ ಮೋಹಿನಿ ಸೇರಿದಂತೆ ರುಕ್ಮಿಣಿ, ಲತೀಶ್‍ಕುಮಾರ್ ಎಂಬವರುಗಳ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಗಂಭೀರ ಗಾಯಗೊಳಿಸಿದ್ದ ಸೀತಾರಾಮನನ್ನು ಬಂಧಿಸಿದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗೆ ಕೊಲೆಯತ್ನದ ಅಪರಾಧಕ್ಕಾಗಿ 6 ವರ್ಷಗಳ ಕಠಿಣ ಸಜೆ, 20 ಸಾವಿರ ದಂಡ, ಭಾರತ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಾಧಕ್ಕಾಗಿ 6 ತಿಂಗಳ ಕಠಿಣ ಸಜೆ ಹಾಗೂ 2 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾತಿಯಾಗುವ ದಂಡದ ಹಣದಲ್ಲಿ ಗಾಯಾಳುಗಳಿಗೆ ತಲಾ 5 ಸಾವಿರ ಪರಿಹಾರ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರ ಪರ ಸರ್ಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದಿಸಿದರು.