ಸೋಮವಾರಪೇಟೆ, ಜೂ. 30: ಸರ್ಕಾರದ ವಿವಿಧ ಇಲಾಖಾಧಿಕಾರಿ ಗಳ ಗೈರು ಹಾಜರಿಯಿಂದಾಗಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಗ್ರಾಮಸಭೆಗೆ ಬಹಿಷ್ಕಾರದ ಬಿಸಿ ಮುಟ್ಟಿಸಿದ ಘಟನೆ ಐಗೂರು ಗ್ರಾಮಸಭೆಯಲ್ಲಿ ನಡೆಯಿತು.

ಸಮೀಪದ ಐಗೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಅಧ್ಯಕ್ಷ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆಯಿತು. ಸಭೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಅಧಿಕಾರಿಗಳು ಗೈರಾಗಿದ್ದರಿಂದ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟಗೊಳ್ಳುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆನೆ ಕಂದಕಗಳನ್ನು ನಿರ್ಮಿಸಿದ್ದರೂ ಸಹ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆನೆಗಳ ಓಡಾಟಕ್ಕೆ ತಡೆಬಿದ್ದಿಲ್ಲ. ಇಂದಿಗೂ ಆನೆಗಳ ಉಪಟಳವಿದ್ದು, ಕಾಡಾನೆ ಗಳನ್ನು ಸ್ಥಳಾಂತರಿಸುವಂತೆ ಕೋವರ್‍ಕೊಲ್ಲಿ ಬಳಿ ಬೃಹತ್ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಆದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ಸಾರ್ವಜನಿಕರು ದೂರಿದರು.

ಈ ಬಗ್ಗೆ ವಿವರ ಮಾಹಿತಿ ನೀಡಬೇಕಾದ ಅರಣ್ಯಾಧಿಕಾರಿಗಳು ಸಭೆಗೆ ಆಗಮಿಸದೇ ಇದ್ದುದರಿಂದ ಗ್ರಾಮಸಭೆ ಗದ್ದಲದ ಗೂಡಾಯಿತು. ಇದರೊಂದಿಗೆ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವಿರಲಿ, ಪಾದಚಾರಿಗಳು ನಡೆದಾಡಲೂ ಕಷ್ಟಕರವಾಗಿದೆ. ಯಡವನಾಡು-ಹಾರಂಗಿ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದರೂ ಇಲಾಖಾಧಿಕಾರಿಗಳು ಗಮನಹರಿಸಿಲ್ಲ. ಗ್ರಾಮ ಸಭೆಗೂ ಆಗಮಿಸಿಲ್ಲ ಎಂದು ಯಡವನಾಡು ಭಾಗದಿಂದ ಆಗಮಿಸಿದ್ದ ಸಾರ್ವಜನಿಕರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖವಾಗಿ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿ ಗಳೇ ಆಗಮಿಸಿಲ್ಲ ಎಂದಾದರೆ ಇನ್ನು ಗ್ರಾಮ ಸಭೆ ನಡೆಸಿ ಪ್ರಯೋಜನ ವಾದರೂ ಏನು? ಎಂದು ಪ್ರಶ್ನಿಸಿದ ಸಾರ್ವಜನಿಕರು ಸಭೆಯನ್ನು ಬಹಿಷ್ಕರಿಸಿ ಹೊರನಡೆಯಲು ಮುಂದಾದರು.

ಈ ಸಂದರ್ಭ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿ ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಂದರ್ಭ ಅರ್ಧಗಂಟೆಯಲ್ಲಿ ಆಗಮಿಸುವದಾಗಿ ಭರವಸೆ ದೊರೆಯಿತು. ನಂತರ ಸಭೆ ಪ್ರಾರಂಭಗೊಂಡಿತು. ಅರ್ಧ ಗಂಟೆ ಕಳೆದರೂ ಅಧಿಕಾರಿ ಆಗಮಿಸದ ಹಿನ್ನಲೆ ಮತ್ತೊಮ್ಮೆ ಕರೆ ಮಾಡಲಾಯಿತು. ಈ ಸಂದರ್ಭ ಅಧಿಕಾರಿಯ ಮೊಬೈಲ್ ಸ್ವಿಚ್‍ಆಫ್ ಆಗಿತ್ತು.

ಇದರಿಂದ ಮತ್ತಷ್ಟು ಕೋಪೋದ್ರಿಕ್ತರಾದ ಸಾರ್ವಜನಿಕರು ಅಸಹನೆ ಹೊರಹಾಕಿದರು. ಅಷ್ಟರಲ್ಲಾಗಲೇ ಗ್ರಾಮಸಭೆಯ ನಿರ್ಣಯ ಪುಸ್ತಕಕ್ಕೆ ಎಲ್ಲರೂ ಸಹಿ ಹಾಕಿದ್ದರಿಂದ ಸಭೆಯನ್ನು ಮುಂದುವರೆಸಲಾಯಿತು.

ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಆಗಮಿಸಿದ್ದ ಅಧಿಕಾರಿಗಳು ಸಭೆಯ ಅರ್ಧದಲ್ಲೇ ಎದ್ದು ಹೋದರು. ಕೊನೆಯಲ್ಲಿ ಕೆಲವೇ ಇಲಾಖಾಧಿಕಾರಿಗಳು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಸಭೆಯಲ್ಲಿ ಉಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಿಗೆಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆದಿಲ್ಲ. ತಕ್ಷಣ ಮಳಿಗೆಗಳನ್ನು ಹರಾಜು ಮಾಡುವಂತೆ ಮಚ್ಚಂಡ ಪ್ರಕಾಶ್ ಆಗ್ರಹಿಸಿದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಣವೇ ಬರುತ್ತಿಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವದಾದರೂ ಹೇಗೆ? ಎಂದು ಹೊನ್ನಪ್ಪ ಪ್ರಶ್ನಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮಾ ಗೋಪಾಲ್ ಹಾಗೂ ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚನ್ನಕೇಶವ ತಮ್ಮ ಅನುದಾನ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶೈಲಾ, ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ, ಅಭಿವೃದ್ಧಿ ಅಧಿಕಾರಿ ಲಿಂಗರಾಜು ಸೇರಿದಂತೆ ಸದಸ್ಯರುಗಳು ಭಾಗವಹಿಸಿದ್ದರು.