ಮಡಿಕೇರಿ, ಜೂ. 30: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿರುವ ಕಾಡಾನೆಗಳ ಸಮಸ್ಯೆ ಕುರಿತು ರಾಜ್ಯ ಸರಕಾರದ ಮಟ್ಟದಲ್ಲಿ ಗಮನ ಸೆಳೆದು, ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವೆ ಎಂದು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ, ಪ್ರಸಕ್ತ ಬೆಂಗಳೂರಿಗೆ ಮುಂಬಡ್ತಿಯೊಂದಿಗೆ ವರ್ಗಾವಣೆಗೊಂಡಿರುವ ಮನೋಜ್ ಕುಮಾರ್ ತಿಳಿಸಿದ್ದಾರೆ.ಜಿಲ್ಲೆಯಿಂದ ಬೆಂಗಳೂರಿಗೆ ವರ್ಗಾವಣೆಯೊಂದಿಗೆ ಕಾಡಾನೆಗಳ ನಿರ್ವಹಣಾ ವಿಭಾಗಕ್ಕೆ ನೇಮಕ ಗೊಂಡಿರುವ ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ, ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ತಮಗೆ ಲಭಿಸಿದ ಅನುಭವವನ್ನು ಸರಕಾರದ ಮುಂದಿಡುವದಾಗಿ ಭರವಸೆಯ ನುಡಿಯಾಡಿದರು.

ಅನಾಹುತ ತಪ್ಪಿಸಲು ಕ್ರಮ : ಕಳೆದ ಎರಡೂವರೆ ವರ್ಷದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಒಂದಿಷ್ಟು ಸುಧಾರಣಾ ಕ್ರಮದೊಂದಿಗೆ ಆಹಾರಕ್ಕೆ ಪೂರಕ ಬೆಳೆಗಳನ್ನು ಮತ್ತು ನೀರಿಗಾಗಿ 23 ಕೆರೆಗಳನ್ನು ದುರಸ್ತಿಗೊಳಿಸಿದ್ದಾಗಿ ನೆನಪಿಸಿದರು. ಸ್ಥಳೀಯರ ಸಹಕಾರ ದಿಂದ ಕಾಡಾನೆಗಳ ನಿಯಂತ್ರಣ ದೊಂದಿಗೆ ಫಸಲು ನಾಶ ತಡೆಗೆ

ಒತ್ತು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಂದಕ ಉಪಯೋಗವಿಲ್ಲ : ಕೊಡಗಿನ ಹವಾಮಾನಕ್ಕೆ ಕಂದಕ ನಿರ್ಮಾಣ ಹಾಗೂ ಸೌರ ವಿದ್ಯುತ್ ಬೇಲಿ ಕೂಡ ಪ್ರಯೋಜನಕಾರಿ ಯಲ್ಲವೆಂದು ಅಭಿಪ್ರಾಯ ಪಟ್ಟ ಅವರು, ಕೊಡಗಿನಿಂದ ಕಾಡಾನೆಗಳನ್ನು ಪಳಗಿಸಿ ಬೇಡಿಕೆ ಇರುವ ರಾಜ್ಯಗಳಿಗೆ ಕಳುಹಿಸಿಕೊಡುವ

(ಮೊದಲ ಪುಟದಿಂದ) ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುವದು ಎಂದರು. ಕೇರಳ, ತಮಿಳುನಾಡು, ಛತ್ತಿಸ್‍ಘಡ, ಉತ್ತರಪ್ರದೇಶ ರಾಜ್ಯಗಳಿಗೆ ತಲಾ 1 ರಿಂದ 12 ಆನೆಗಳನ್ನು ಸಾಕಲು ಬೇಡಿಕೆಯಿದ್ದು, ದುಬಾರೆಯಲ್ಲಿ ಪಳಗಿದ ಸಾಕಾನೆಗಳನ್ನು ಹೊರರಾಜ್ಯಗಳಿಗೆ ನಿರ್ವಹಣೆಗಾಗಿ ಕಳುಹಿಸಿ, ಇಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಹಿಡಿದು ಶಿಬಿರದಲ್ಲಿ ಪಳಗಿಸಲಾಗುವದೆಂದು ಆಶಯ ಹೊರಗೆಡವಿದರು.

ದುರಂತ ಆಕಸ್ಮಿಕ : ಅಮ್ಮತ್ತಿ ಬಳಿ ಕಣ್ಣಾಂಗಾಲ ಗ್ರಾಮದಲ್ಲಿ ಈಚೆಗೆ ಆರು ಕಾಡಾನೆಗಳು ದುರಂತ ಸಾವು ಕಂಡಿದ್ದು, ಆಕಸ್ಮಿಕ ತುಂಡಾದ ವಿದ್ಯುತ್ ತಂತಿಯ ಸ್ಪರ್ಶದಿಂದ ಎಂದು ಅನಿಸಿಕೆ ಹೊರಗೆಡವಿದ ಅವರು, ಇಲಾಖೆಯು ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಕಾರಣದ ವರದಿಗೆ ಆದೇಶಿಸಲಾಗಿದೆ ಎಂದರು.

ನೂತನ ಅಧಿಕಾರಿ : ಕೊಡಗು ಜಿಲ್ಲೆಯಲ್ಲಿ ತಾವು ನಿರ್ಗಮಿಸಲಿರುವ ಸ್ಥಾನಕ್ಕೆ ನೂತನ ಅಧಿಕಾರಿಯಾಗಿ ಲಿಂಗರಾಜು ಎಂಬವರು ನೇಮಕಗೊಂಡಿದ್ದು, ತಾವು ವರ್ಗಾವಣೆಗೊಂಡರೂ ಜಿಲ್ಲೆಯ ಕಾಡಾನೆ ಸಮಸ್ಯೆ ಬಗ್ಗೆ ಗಮನ ಹರಿಸುವದಾಗಿ ಮಾರ್ನುಡಿದರು. ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆ ಮುನ್ನೂರು ದಾಟಿದ್ದು, ಈ ಪೈಕಿ 40ಕ್ಕೂ ಅಧಿಕ ಕಾಡಾನೆಗಳು ನಿರಂತರವಾಗಿ ಕಾಫಿ ತೋಟಗಳಲ್ಲಿ ಆಹಾರಕ್ಕಾಗಿ ಅಡ್ಡಾಡುತ್ತಿರುವದಾಗಿ ತಮ್ಮ ಗಮನಕ್ಕೆ ಬಂದಿದೆ ಎಂದ ಅವರು, ಸರಕಾರದಿಂದ ಅನುಮತಿ ಲಭಿಸಿದರಷ್ಟೇ ಸೆರೆ ಹಿಡಿಯಲು ಸಾಧ್ಯವೆಂದ ಅವರು, ಎರಡು ಕಾಡಾನೆಗಳ ಸೆರೆಹಿಡಿಯಲು ಅನುಮತಿ ಸಿಕ್ಕಿದೆ ಎಂದರು.