ಮಡಿಕೇರಿ, ಜೂ. 30: ಸೆಸ್ಕ್ ಅಧಿಕಾರಿಗಳು ಗ್ರಾಮ ಸಭೆಗೆ ಬಾರದ ಹಿನ್ನಲೆಯಲ್ಲಿ ಬೇಂಗೂರು ಗ್ರಾಮ ಸಭೆಯನ್ನು ಸದಸ್ಯರು ಹಾಗೂ ಗ್ರಾಮಸ್ಥರು ಬಹಿಷ್ಕರಿಸಿದ ಘಟನೆ ನಡೆಯಿತು.

ಬೇಂಗೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷ ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನೋಡಲ್ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಿ. ಚಿಕ್ಕಬಸವಯ್ಯ ಅವರ ಉಪಸ್ಥಿತಿಯಲ್ಲಿ ಪಿಡಿಓ ಚೋಂದಕ್ಕಿ ಅವರು ಆರಂಭಿಸುತ್ತಿದ್ದಂತೆ ಗ್ರಾಮಸ್ಥರಾದ ಮಂದಪಂಡ ಮನೋಜ್ ಮಂದಣ್ಣ, ಜೀವನ್, ತೇಜ ಉತ್ತಪ್ಪ ಅವರುಗಳು ಸೆಸ್ಕ್ ಅಧಿಕಾರಿಗಳು ಸಭೆಗೆ ಆಗಮಿಸುವಂತೆ ಪಟ್ಟು ಹಿಡಿದರು. ಕಳೆದ ಒಂದು ವಾರದಿಂದ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆಯಿದ್ದು, ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದರೂ ಸ್ಪಂದಿಸಿಲ್ಲ. ಅಧಿಕಾರಿಗಳು ಉಡಾಫೆಯಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಸಭೆಗೆ ಬಾರದಿದ್ದಲ್ಲಿ ಸಭೆಯನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯ ಸಿ. ಸುಮನ್ ದೂರವಾಣಿ ಮೂಲಕ ಸೆಸ್ಕ್ ಅಧಿಕಾರಿಯನ್ನು ಸಂಪರ್ಕಿಸಿದಾಗ ನಮಗೆ ಗ್ರಾಮಸಭೆಗೆ ಬಂದು ಕುಳಿತುಕೊಳ್ಳುವದು ಸಾಧ್ಯವಿಲ್ಲ. ಲೈನ್ ನೋಡುತ್ತಿದ್ದೇವೆ, ದುರಸ್ಥಿ ಮಾಡುತ್ತೇವೆ ಎಂದು ಉಡಾಫೆಯಿಂದ ಉತ್ತರಿಸಿದರೆನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ವಿದ್ಯುತ್ ಸಮಸ್ಯೆ ತಲೆದೋರಿದಾಗ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ದಿಗ್ಬಂಧನ ಕೂಡ ಮಾಡಿದ್ದರೂ ಈ ಬಾರಿ ಸಮಸ್ಯೆ ಇದ್ದರೂ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಹಿನ್ನಲೆಯಲ್ಲಿ ಸಭೆಯನ್ನು ಗ್ರಾಮಸ್ಥರು ಹಾಗೂ ಸದಸ್ಯರು ಬಹಿಷ್ಕರಿಸಿ ಹೊರ ನಡೆದರು. ಬಳಿಕ ಸಭೆಯನ್ನು ಮುಂದೂಡಲಾಯಿತು.