ಮಡಿಕೇರಿ, ಜೂ. 30: ಬಿಜೆಪಿ ರಾಜ್ಯ ಕಾರ್ಯದರ್ಶಿ ವಿರುದ್ಧ ಎಂ.ಎಂ. ರವೀಂದ್ರ ನೀಡಿರುವ ಹೇಳಿಕೆಯನ್ನು ಬಲ್ಲಮಾವಟಿ ಬಿಜೆಪಿ ಸ್ಥಾನೀಯ ಸಮಿತಿ, ಗ್ರಾ.ಪಂ., ಯುವಕ ಸಂಘ, ಸಹಕಾರ ಸಂಘ, ಧವಸ ಭಂಡಾರ, ಹಾಕಿ ಕ್ಲಬ್ ಪದಾಧಿಕಾರಿಗಳು ಖಂಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರುಗಳು, ಮನು ಮುತ್ತಪ್ಪ ಅವರು ಯಾವದೇ ಪಕ್ಷದಿಂದ ಬಂದವರಲ್ಲ, ಕಳೆದ 35 ವರ್ಷಗಳಿಂದ ಪಕ್ಷದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಗ್ರಾ.ಪಂ. ನಿಂದ ಹಿಡಿದು ಜಿ.ಪಂ. ಸದಸ್ಯರಾಗಿ ಸಹಕಾರ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದಾರೆ. ಪಕ್ಷದಲ್ಲೂ ಕೂಡ ಸ್ಥಾನೀಯ ಸಮಿತಿ, ಯುವ ಮೋರ್ಚಾ, ತಾಲೂಕು, ಜಿಲ್ಲಾ ವಕ್ತಾರರಗಾಗಿ, ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇದೀಗ ರಾಜ್ಯ ಕಾರ್ಯದರ್ಶಿ ಯಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಅವರ ನೇತೃತ್ವದಲ್ಲಿ ಬಲ್ಲಮಾವಟಿ ಗ್ರಾ.ಪಂ., ವಿಎಸ್‍ಎಸ್‍ಎನ್, ತಾ.ಪಂ., ಜಿ.ಪಂ., ಆರ್‍ಎಂಸಿಯಲ್ಲಿ ಅಧಿಕಾರ ಹಿಡಿಯುವಂತಾಗಿದೆ.

ಆದರೆ, ಹಿಂಬಾಗಿಲಿನ ಮೂಲಕ ಅಧಿಕಾರ ಹಿಡಿಯುವ ರವೀಂದ್ರ ಅವರು ಪಂಚಾಯಿತಿ ವ್ಯಾಪ್ತಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ನಿರಾಧಾರ ಆರೋಪ ಮಾಡುತ್ತಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಸ್ಥಾನೀಯ ಸಮಿತಿ ಅಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಚಂಗೇಟಿರ ಕುಮಾರ್ ಸೋಮಣ್ಣ, ಜಿಲ್ಲಾ ಸಮಿತಿ ಸದಸ್ಯ ಕರವಂಡ ಲವ ನಾಣಯ್ಯ, ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷೆ ಸರಸು ಪೆಮ್ಮಯ್ಯ, ಉಪಾಧ್ಯಕ್ಷೆ ಚೋಕಿರ ದೇವಕಿ, ಸದಸ್ಯರಾದ ಬದ್ದಂಜೆಟ್ಟಿರ ದೇವಯ್ಯ, ಬೈರುಡ ಮುತ್ತಪ್ಪ, ಧರಣಿ ಬೈರಪ್ಪ, ಮಡಿವಾಳರ ಪಾಪು ಬಿದ್ದಪ್ಪ, ಅಪೊಲೊ ಯುವಕ ಸಂಘದ ಅಧ್ಯಕ್ಷ ವಿ.ಜಿ. ವಸಂತ್ ಮುತ್ತಪ್ಪ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಧವಸಭಂಡಾರ ಅಧ್ಯಕ್ಷ ನುಚ್ಚುಮಣಿಯಂಡ ಚಿಂಗಪ್ಪ, ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅವರುಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಕಾಳನ ರವಿ ಖಂಡನೆ

ಮನು ಮುತ್ತಪ್ಪ ವಿರುದ್ಧದ ಹೇಳಿಕೆಯನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಖಂಡಿಸಿದ್ದಾರೆ. ರವೀಂದ್ರ ಹಿಂದೆ ಬಿಜೆಪಿ ಶಾಸಕರಾಗಿದ್ದ ಡಿ.ಎಸ್. ಮಾದಪ್ಪ, ಬಸವರಾಜು ಅವರುಗಳನ್ನು ದಾರಿ ತಪ್ಪಿಸಿ ಎಲ್ಲಾ ಕೆಲಸಗಳ ಗುತ್ತಿಗೆ ವಹಿಸಿಕೊಂಡು ದಂಧೆ ಮಾಡಿದ್ದಾರೆ. ಛಾಪಾ ಹಗರಣದ ರೋಶನ್ ಬೇಗ್ ಅವರನ್ನು ತನ್ನ ವಿವಾಹಕ್ಕೆ ಬರಮಾಡಿಕೊಂಡು ಹಿಂದೂ ಸಂಸ್ಕøತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದೀಗ ಮನು ಮುತ್ತಪ್ಪ ಅವರ ವಿರುದ್ಧ ಹೇಳಿಕೆ ನೀಡುತ್ತಿರುವದು ಅವರ ಅಜ್ಞಾನವನ್ನು ತೋರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 7 ತಿಂಗಳಲ್ಲೇ ಅಧ್ಯಕ್ಷ ಸ್ಥಾನ ಕಳೆದುಕೊಂಡು ಇದೀಗ ಪಕ್ಷ ವಿರೋಧಿ ಕೆಲಸದೊಂದಿಗೆ ಜಾತೀಯ ವಿಷ ಬೀಜ ಬಿತ್ತುತ್ತಿರುವದು ಅವರಿಗೆ ಶೋಭೆಯಲ್ಲ. ಪಕ್ಷವಿರೋಧಿ, ಜಾತಿಯ ವಿಷ ಬೀಜ ಬಿತ್ತಿಲ್ಲವೆಂದಾದರೆ, ಕಾವೇರಿ ಸನ್ನಿಧಿಗೆ ಆಗಮಿಸಿ ಪ್ರಮಾಣ ಮಾಡಲೆಂದು ಸವಾಲೆಸೆದಿದ್ದಾರೆ.