ವೀರಾಜಪೇಟೆ, ಜೂ. 30: ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಪೋಷಕರು ಇತರ ಮಕ್ಕಳಂತೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಪದವಿಗೇರಲು ಪ್ರಯತ್ನಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ 1 ರಿಂದ 10ನೇ ತರಗತಿಯ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಅನುಕೂಲಕ್ಕಾಗಿ ರೂ. 10 ಸಾವಿರ ನಗದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಿದರು. ಬಳಿಕ ಮಾತನಾಡಿದ ಮಹೇಶ್ ಗಣಪತಿ, ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆಯಾದರೂ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣ ಮತ್ತು ಅವರ ಸೌಲಭ್ಯಗಳಿಗಾಗಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ. ವಿಕಲ ಚೇತನರಿಗೂ ಸರ್ಕಾರಿ ಹುದ್ದೆಯ ಆಯ್ಕೆಯಲ್ಲಿ ಆದ್ಯತೆ ನೀಡುವಂತಾಗಬೇಕು. ಮಕ್ಕಳು ತಮ್ಮ ಜೀವನದಲ್ಲಿ ಛಲದಿಂದ ಗುರಿ ಮುಟ್ಟುವಂತಾಗಬೇಕು. ದೇವರನ್ನು ಪೂಜಿಸುವಂತೆ ತಂದೆ, ತಾಯಿ, ಗುರು, ಹಿರಿಯರಿಗೂ ಗೌರವ ನೀಡು ವಂತಾಗಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಗುರಿಮುಟ್ಟು ವಂತಾಗಬೇಕು ಎಂದರು. ಜಿಲ್ಲಾ ಉಪ ಯೋಜನಾಧಿಕಾರಿ ಭಾಗ್ಯಲಕ್ಷ್ಮಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ವೀರಾಜಪೇಟೆ ತಾಲೂಕು ಸರ್ವ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ, ದೈಹಿಕ ಶಿಕ್ಷಣ ಅಧಿಕಾರಿ ರತಿ, ಶಿಕ್ಷಣ ಸಂಯೋಜಕ ಅಂದ್ರೀತ, ಜಿಲ್ಲಾ ಸಹಾಯಕ ಸಮನ್ವಯಾಧಿಕಾರಿ ಗಳಾದ ಪರಶಿವಮೂರ್ತಿ, ಮಹದೇವ್ ಮುಂತಾದವರಿದ್ದರು.

ತಾಲೂಕಿನ ವಿಶೇಷ ಅಗತ್ಯತೆಯುಳ್ಳ 110 ಮಕ್ಕಳು ತಪಾಸಣಾ ಶಿಬಿರದಲ್ಲಿ ಭಾಗವಹಿ ಸಿದ್ದರು. ಐಇಆರ್‍ಟಿ ಕೆ.ಎಸ್. ಅಜಿತ ನಿರೂಪಿಸಿ, ಬಿ.ಆರ್.ಸಿ. ಮಹದೇವು ವಂದಿಸಿದರು.

ಶಿಬಿರದಲ್ಲಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಡಾ. ಹೇಮಪ್ರಿಯ, ಡಾ. ಗಿರಿಧರ್, ಬೆಂಗಳೂರಿನ ಡಾ. ಸುಧಾಕರ್, ಮಂಜುನಾಥ್, ಶಿವಕುಮಾರ್, ಶಿವರಾಮ್ ಮುಂತಾದವರು ಭಾಗವಹಿಸಿದ್ದರು.