ಮಡಿಕೇರಿ, ಜೂ. 30: ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರ ಕಾರ್ಯವೈಖರಿಯಿಂದ ಬೇಸತ್ತ ಸದಸ್ಯರು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ನೂತನ ಅಧ್ಯಕ್ಷರಾಗಿ ದೇವರಾಜ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎ.ವಿ. ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರು ಇತ್ತೀಚಿನ ದಿನಗಳಲ್ಲಿ ಉಳಿದ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸರಿಯಾಗಿ ಸಭೆಗಳನ್ನು ನಡೆಸದೆ ತನ್ನದೇ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಇದರಿಂದ ಸಂಘದ ಕಾರ್ಯಚಟುವಟಿಕೆಗೆ ಹಿನ್ನಡೆಯಾಗಿದೆ. ಸಂಘದ 9 ಸದಸ್ಯರಲ್ಲಿ 6 ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದೇವೆ ಎಂದು ತಿಳಿಸಿದರು. ಪ್ರಮುಖರಾದ ಟಿ.ಡಿ. ರಮಾನಂದ್ ಮಾತನಾಡಿ, ಹಿಂದಿನ ಅಧ್ಯಕ್ಷರು ಎಲ್ಲ ವಿಚಾರಗಳಲ್ಲೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಈ ಹಿನ್ನೆಲೆ ನಿರ್ದೇಶಕರು ಸೇರಿ ನೂತನವಾಗಿ ಸಂಘದ ರಚನೆಯನ್ನು ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ದೇವರಾಜ್ ಗೌಡ, ಉಪಾಧ್ಯಕ್ಷೆ ಪಿ.ಜಿ. ಜಾನಕಿ, ಕಾರ್ಯದರ್ಶಿ ವಾಮನ, ಖಜಾಂಚಿ ಎಂ.ಕೆ. ನಳಿನಾಕ್ಷಿ, ನಿರ್ದೇಶಕರುಗಳಾಗಿ ಟಿ.ಡಿ. ರಮಾನಂದ್, ಎ.ವಿ. ಮಂಜುನಾಥ್, ಶಶಿಧರ್, ಇ. ಸುರೇಂದ್ರ, ಬಿ.ಟಿ. ದೇವರಾಜ್ ಅವರುಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ದೇವರಾಜ್ ಗೌಡ, ಪಿ.ಜಿ. ಜಾನಕಿ, ವಾಮನ, ಎಂ.ಕೆ. ನಳಿನಾಕ್ಷಿ ಉಪಸ್ಥಿತರಿದ್ದರು.