ಕೂಡಿಗೆ, ಜೂ. 30: ಹನ್ನೆರಡು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಅವ್ಯವಸ್ಥೆಯಿಂದ ಕೂಡಿದ್ದು, ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸೂಕ್ತ ಕ್ರಮಗಳ ಅಗತ್ಯವಿದೆ.

ಕಾವೇರಿ ನದಿಯಿಂದ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ 12 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ರೂ. 12 ಕೋಟಿ ವೆಚ್ಚದ ಬೃಹತ್ ಯೋಜನೆಯು ಪ್ರಾರಂಭಗೊಂಡು ಹತ್ತು ವರ್ಷಗಳು ಕಳೆದಿದೆ. ಆದರೆ ಇದುವರೆಗೂ ಕಾವೇರಿ ನದಿಯಿಂದ ಹೆಬ್ಬಾಲೆ ಗ್ರಾಮ ಪಂಚಾಯಿತಿ ಕಟ್ಟಡದ ಸಮೀಪವಿರುವ 2.5 ದಶಲಕ್ಷ ಸಾಮಥ್ರ್ಯದ ಬೃಹತ್ ನೀರಿನ ಟ್ಯಾಂಕ್, ನೀರು ಶುದ್ಧೀಕರಣದ ಘಟಕ, ಬೃಹತ್ತಾದ ಪೈಪ್ ಲೈನ್‍ಗಳ ಮೂಲಕ ನದಿಯಿಂದ ನೀರನ್ನು ಬೃಹತ್ ಟ್ಯಾಂಕ್‍ಗೆ ಸರಬರಾಜು ಮಾಡಿಕೊಂಡು ನಂತರ ಅದೇ ಕೇಂದ್ರದಲ್ಲಿ ಶುದ್ಧೀಕರಣಗೊಳಿಸಿ ಆರು ಗ್ರಾಮ ಪಂಚಾಯಿತಿಯ 12 ಹಳ್ಳಿಗಳ ಟ್ಯಾಂಕ್‍ಗಳಿಗೆ ಸರಬರಾಜು ಮಾಡುವ ಉದ್ದೇಶ ಹೊಂದಿದೆ. ಆದರೆ ಇದೀಗ ಶುದ್ಧೀಕರಣ ಘಟಕದಲ್ಲಿ ಒಂದು ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೊಂದು ಯಂತ್ರ ಸ್ಥಗಿತಗೊಂಡಿದ್ದರೂ, ಇದರ ದುರಸ್ತಿಗೆ ಇಲಾಖೆ ಮುಂದಾಗದ ಕಾರಣದಿಂದಾಗಿ 12 ಹಳ್ಳಿಗಳ ಜನರು ಶುದ್ಧೀಕರಣಗೊಳ್ಳದ ನೀರನ್ನು ಕುಡಿಯುವ ಪರಿಸ್ಥಿತಿ ಎದುರಾಗಿದೆ.

ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯವರು ಸುಮಾರು 5 ವರ್ಷಗಳವರೆಗೆ ಇದರ ವ್ಯವಸ್ಥೆಯನ್ನು ನೋಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಿ 2014 ರಿಂದ ಜಿಲ್ಲಾ ಪಂಚಾಯಿತಿಗೆ ವಹಿಸಲು ಮುಂದಾಗಿದೆ. ಇದುವರೆಗೂ ಜಿಲ್ಲಾ ಪಂಚಾಯಿತಿ ಇದರ ಜವಾಬ್ದಾರಿಯನ್ನೂ ವಹಿಸಿಕೊಂಡಿಲ್ಲ. ಇತ್ತ ನೀರು ಸರಬರಾಜು ಮಂಡಳಿಯವರೂ ಸರ್ಕಾರದಿಂದ ಹಣ ಬಿಡುಗಡೆಗೊಂಡಿಲ್ಲ ಎಂಬ ನೆಪವೊಡ್ಡಿ ಸಮರ್ಪಕವಾಗಿ ನಿರ್ವಹಣೆ ಮಾಡದಿರುವದು ಕಂಡುಬರುತ್ತಿದೆ.

ಇದಕ್ಕೆ ಪೂರಕವಾಗಿ ಹೆಬ್ಬಾಲೆಯಿಂದ ಕೂಡುಮಂಗಳೂರಿನವರೆಗೆ ಅಳವಡಿಸಿರುವ ನೀರು ಸರಬರಾಜು ಪೈಪ್ ಮೂರ್ನಾಲ್ಕು ಕಡೆಗಳಲ್ಲಿ ಒಡೆದು ನೀರು ಪೋಲಾಗುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಯು ಗಮನಕ್ಕೆ ಬರದಂತೆ ಕುಳಿತಿದ್ದಾರೆ. ಇತ್ತ ಗ್ರಾಮ ಪಂಚಾಯಿತಿಯು ನೀರು ಸರಬರಾಜು ಮಂಡಳಿಯವರು ನಿರ್ವಹಿಸಲಿ ಎಂಬ ಧೋರಣೆಯಿಂದ ಅವರು ಸಹ ಪೋಲಾಗುತ್ತಿರುವ ನೀರನ್ನು ನೋಡಿದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಈ ವ್ಯಾಪ್ತಿಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಹೆಬ್ಬಾಲೆಯಿಂದ ಮುಳ್ಳುಸೋಗೆವರೆಗೆ ನೀರು ಸರಬರಾಜಾಗುತ್ತಿರುವ ಯೋಜನೆಯು ಕಾಮಗಾರಿಯಲ್ಲಿ ಸೇರಿದ್ದರೂ, ಮುಳ್ಳುಸೋಗೆ ಗ್ರಾಮ ಪಂಚಾಯಿತಿವರೆಗೆ ನೀರು ತಲಪಿಲ್ಲ. ಆದರೆ ಕಾಮಗಾರಿ ಮುಗಿದಿದೆ ಎಂದು ಜಿಲ್ಲಾ ಪಂಚಾಯಿತಿಗೆ ಜವಾಬ್ದಾರಿ ವಹಿಸಲು ಮುಂದಾಗಿದ್ದಾರೆ.

ಈ ನಡುವೆ ಹೊಳೆಯಿಂದ ನೇರವಾಗಿ ಟ್ಯಾಂಕ್‍ಗೆ ಬರುವ ನೀರು ಶುದ್ಧೀಕರಣ ಯಂತ್ರಕ್ಕೆ ಮತ್ತು ಶುದ್ಧೀಕರಿಸಲು ಕ್ಲೋರಿನ್ ಅನ್ನು ಸಮರ್ಪಕವಾಗಿ ಉಪಯೋಗಿಸದೇ ನೀರು ಶುದ್ಧೀಕರಣಗೊಳ್ಳದೆ, ಹೊಳೆಯ ನೀರು ನೇರವಾಗಿ ಗ್ರಾಮಗಳಿಗೆ ಸರಬರಾಜಾಗುತ್ತಿದೆ. ಇದೆಲ್ಲದರ ನಡುವೆ ಕಳೆದ 9 ತಿಂಗಳುಗಳಿಂದ ನೀರು ಶುದ್ಧೀಕರಣದ ನೌಕರರಿಗೆ ಸಂಬಳ ನೀಡಿಲ್ಲವೆಂದು ಕಳೆದ ಒಂದು ವಾರದ ಹಿಂದೆ ನೀರು ಸ್ಥಗಿತಗೊಳಿಸಲಾಗಿತ್ತು. ನೌಕರರಿಗೆ ಇದುವರೆಗೂ ಸಂಬಳ ನೀಡಿಲ್ಲ. ಮುಂದಿನೆರಡು ದಿನಗಳಲ್ಲಿ ನೀರು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಿಲ್ಲಾ ಪಂಚಾಯಿತಿಯು ಇದರ ಜವಾಬ್ದಾರಿ ವಹಿಸಿಕೊಂಡಿದೆ ಎಂದು ನೀರು ಸರಬರಾಜು ಮಂಡಳಿಯ ಅಧಿಕಾರಿ ಸುದ್ಧಿಗಾರರಿಗೆ ತಿಳಿಸಿದ್ದಾರೆ. ಆದರೆ ಇದರ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ವಹಿಸಿಕೊಂಡಿದೆಯೋ ಅಥವಾ ನೀರು ಸರಬರಾಜು ಮಂಡಳಿ ವಹಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೋ ಎಂಬದು ಈ ವ್ಯಾಪ್ತಿಯ ಜನರ ಅನುಮಾನವಾಗಿದೆ. ಇತ್ತೀಚೆಗೆ ತೊರೆನೂರಿಗೆ ತೆರಳಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಗ್ರಾಮಸ್ಥರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. - ಕೆ.ಕೆ. ನಾಗರಾಜಶೆಟ್ಟಿ.