ಸೋಮವಾರಪೇಟೆ, ಜೂ. 30: ಕೆಟ್ಟುಹೋದ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಅನ್ನು 24 ಗಂಟೆಯೊಳಗೆ ದುರಸ್ತಿಗೊಳಿಸಿ ಗ್ರಾಮಕ್ಕೆ ಬೆಳಕು ನೀಡಿದ ಸೋಮವಾರಪೇಟೆ ವಿದ್ಯುತ್ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕ್ರಮವನ್ನು ಗ್ರಾಮಸ್ಥರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ನಗರದಿಂದ ಹಾನಗಲ್ಲು ಬಾಣೆ ಮೂಲಕ ಹಾನಗಲ್ಲು ಶೆಟ್ಟಳ್ಳಿ ಮಾರ್ಗದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಟ್ಟುಹೋಗಿ ವಿದ್ಯುತ್ ಸ್ಥಗಿತಗೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಇಲಾಖೆಗೆ ದೂರು ನೀಡಿದ ಮೇರೆ ಲೈನ್‍ಮೆನ್ ಜಾದವ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಕತ್ತಲಾದ್ದರಿಂದ ಮಾರನೇ ದಿನ ಸರಿಪಡಿಸುವದಾಗಿ ತಿಳಿಸಿ ಇಲಾಖೆಯ ಅಭಿಯಂತರ ನೀಲಶೆಟ್ಟಿ ಹಾಗೂ ದಯಾನಂದ್ ಅವರಿಗೆ ಮಾಹಿತಿ ನೀಡಿದರು. ಮಡಿಕೇರಿಯಿಂದ ನೂತನ ಟ್ರಾನ್ಸ್‍ಫಾರ್ಮರ್ ತರಿಸಿ ಕೆಟ್ಟುಹೋದ ಟ್ರಾನ್ಸ್‍ಫಾರ್ಮರ್‍ನ್ನು ಬದಲಾಯಿಸಿ ಸಂಜೆ ವೇಳೆಗೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದರು.

ಇಲಾಖೆಯ ಲೈನ್‍ಮೆನ್‍ಗಳಾದ ಬಿ.ಎಸ್. ರಮೇಶ್, ಜಾದವ್, ರಮೇಶ್, ಧರ್ಮಣ್ಣ, ಸಿದ್ದು ಪಾಟೀಲ್, ರಮೇಶ್ ಅವರುಗಳು ದುರಸ್ತಿ ಕಾರ್ಯ ನಡೆಸಿದರು. ರಾತ್ರಿಯಿಡೀ ಕತ್ತಲಲ್ಲೇ ಕಳೆದಿದ್ದ ಗ್ರಾಮಸ್ಥರು, ಇಲಾಖೆಯ ತಕ್ಷಣದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.