ಕೂಡಿಗೆ, ಜೂ. 30: ಕೂಡಿಗೆ ಗ್ರಾ.ಪಂ. ನಿಂದ ಮಹಿಳೆಯೊಬ್ಬರಿಗೆ ನಿರಾಪೇಕ್ಷಣಾ ಪತ್ರ ನೀಡುವ ಸಂಬಂಧ, ಪಂಚಾಯಿತಿ ಅಧ್ಯಕ್ಷರು ರೂ. 30 ಸಾವಿರ ಹಣ ಪಡೆದಿರುವ ಗಂಭೀರ ಆರೋಪವು ಇಂದಿನ ಕೂಡಿಗೆ ಗ್ರಾ.ಪಂ. ಮಾಸಿಕ ಸಭೆಯಲ್ಲಿ ಕೇಳಿ ಬಂತು. ಈ ವಿಷಯವಾಗಿ ತೀವ್ರ ಚರ್ಚೆ ನಡೆದು ಗೊಂದಲ ಉಂಟಾದ ಪರಿಣಾಮ ಗ್ರಾ.ಪಂ. ಉಪಾಧ್ಯಕ್ಷರ ಸಹಿತ ಸದಸ್ಯರು ಸಭಾತ್ಯಾಗ ಮಾಡಿದ ಪ್ರಸಂಗವು ನಡೆಯಿತು.ಕೂಡಿಗೆ ಗ್ರಾಮ ಪಂಚಾಯ್ತಿಯ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಆಗಿರುವ ಕಾಮಗಾರಿಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಕುಡಿಯುವ ನೀರು, ಸರಕಾರದ ಯೋಜನೆಗಳ ಬಗ್ಗೆ ಅರ್ಜಿ ವಿಲೇವಾರಿಯ ಬಗ್ಗೆ ಚರ್ಚೆ ನಡೆದವು. ಬ್ಯಾಡಗೊಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಮಂಜೂರಾಗಿರುವ ಜಾಗದ ಬಗ್ಗೆ ಚರ್ಚೆ ನಡೆಯಿತು.

ಕೂಡಿಗೆ ಗ್ರಾಮದಲ್ಲಿ ವೀಣಾ ಎಂಬುವವರಿಗೆ

(ಮೊದಲ ಪುಟದಿಂದ) ಎನ್‍ಓಸಿ ಕೊಡುವ ವಿಚಾರದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಣ ಪಡೆದಿದ್ದಾರೆ ಎಂಬ ಆರೋಪದ ವಿಷಯವನ್ನು ಸದಸ್ಯೆ ಕೆ.ಜಿ. ಮೋಹಿನಿ ಸಭೆಯಲ್ಲಿ ಚರ್ಚಿಸುತ್ತಿ ದ್ದಂತೆಯೇ ವಾದ ವಿವಾದಗಳು ನಡೆದವು. ನಂತರ ಅಧ್ಯಕ್ಷರಿಗೆ ಎನ್‍ಓಸಿ ನೀಡಲು ಹಣ ನೀಡಿದ್ದೇನೆ ಎಂದು ಆರೋಪಿಸಿದ್ದ ವೀಣಾ ಎಂಬವರನ್ನು ಸಭೆಗೆ ಕರೆಸಲಾಯಿತು.

ಆ ಸಂದರ್ಭ ವೀಣಾ ಎನ್‍ಒಸಿ ವಿಷಯವಾಗಿ ಅಧ್ಯಕ್ಷರಿಗೆ 30 ಸಾವಿರ ಹಣ ನೀಡಿರುವದಾಗಿ ಸಭೆಯಲ್ಲಿ ಎಲ್ಲಾ ಸದಸ್ಯರ ಮುಂದೆ ಹೇಳಿದರು. ಅಧ್ಯಕ್ಷರು ತಾನು ಹಣ ಪಡೆದಿಲ್ಲ ಎಂದು ಆರೋಪವನ್ನು ನಿರಾಕರಿಸಿದರು. ಆದರೆ ಎನ್‍ಒಸಿಗೆ ಹಣ ನೀಡುವ ಬಗ್ಗೆ ವೀಣಾ ತನ್ನ ಮೊಬೈಲ್‍ನಲ್ಲಿ ಮುದ್ರಿಸಿಕೊಂಡಿದ್ದ ಧ್ವನಿ ಮುದ್ರಣವನ್ನು ಸಭೆಯಲ್ಲಿ ಬಿತ್ತರಿಸಿದರು. ಆದರೂ ಇದನ್ನು ನಿರಾಕರಿಸಿದ ಅಧ್ಯಕ್ಷರು ‘ಇದು ನನ್ನ ಧ್ವನಿ ಅಲ್ಲ’ ಎಂದರು. ಇದರ ವಿಷಯವಾಗಿ ಸಭೆಯಲ್ಲಿ ವಾದ ವಿವಾದಗಳು ನಡೆದವು.

ಧರಣಿ: ಡಿಸೆಂಬರ್‍ನಲ್ಲೆ ಎನ್‍ಒಸಿಗೆ ಅರ್ಜಿ ಸಲ್ಲಿಸಿ, ಅಧ್ಯಕ್ಷರಿಗೆ ಹಣವನ್ನು ನೀಡಿ ಇದುವರೆಗೂ ಎನ್‍ಓಸಿ ನೀಡಿಲ್ಲ. ಎನ್‍ಒಸಿ ನೀಡಿ ಅಥವಾ ಹಣವನ್ನು ಕೊಡಿ ಎಂದು ವೀಣಾ ಗ್ರಾಮ ಪಂಚಾಯಿತಿಯ ಎದುರು ಧರಣಿ ಕುಳಿತರು.

ಈ ವಿಚಾರವು ಸಭೆಯಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದಂತೆಯೇ ಅಧ್ಯಕ್ಷರು ಆರೋಪವನ್ನು ಒಪ್ಪದ ಕಾರಣ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಮತ್ತು ಸದಸ್ಯರುಗಳಾದ ಕೆ.ಜಿ.ಮೋಹಿನಿ, ಮಂಜಯ್ಯ, ಕೆ.ಟಿ.ಈರಯ್ಯ, ದಸ್ವಿಕೃಷ್ಣ, ಕಲ್ಪನಾ, ಜಯಶ್ರೀ ಇವರುಗಳು ಸಭಾತ್ಯಾಗ ಮಾಡಿ ಸಭೆಯಿಂದ ಹೊರ ನಡೆದರು.

ವೀಣಾ ಧರಣಿ ಕುಳಿತ್ತಿದ್ದರೂ ಮತ್ತು ಸದಸ್ಯರುಗಳು ಸಭಾ ತ್ಯಾಗ ನಡೆಸಿದರೂ ಸಹ ಇನ್ನುಳಿದ ಎಂಟು ಜನ ಸದಸ್ಯರೊಳಗೊಂಡು ಸಭೆಯನ್ನು ಮುಂದುವರೆಸಿದರು.

ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಸ್ವಾಮಿನಾಯಕ್ ಮಾತನಾಡಿ, ವೀಣಾ ಅವರು ಮನೆ ನಿರ್ಮಿಸಿರುವ ಜಾಗವು ಅವರ ಅಜ್ಜಿಗೆ ಸೇರಿದ್ದಾಗಿರುವ ಕಾರಣದಿಂದ ಡಿಸೆಂಬರ್‍ನಿಂದ ಈವರೆಗೆ ಎನ್‍ಓಸಿ ನೀಡಿಲ್ಲ. ವೀಣಾ ಅವರ ಹೆಸರಿಗೆ ಖಾತೆ ಮಾಡಿಕೊಳ್ಳಲು 9/11 ರಂತೆ ತಿದ್ದುಪಡಿ ಮಾಡಿಸಲು ಸೂಚಿಸ ಲಾಗಿದೆ. ಇದುವರೆಗೂ ಅವರು ಯಾವದೇ ವ್ಯವಸ್ಥೆ ಸರಿಪಡಿಸಿ ಕೊಂಡಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ನಿಯಮಾನುಸಾರ ಎನ್‍ಓಸಿ ನೀಡಲಾಗುವದು ಎಂದು ಹೇಳಿದರು.

ವೀಣಾ ಅವರು ಧರಣಿ ನಡೆಸುತ್ತಿದ್ದ ವಿಚಾರ ತಿಳಿದ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕಾಗ ಮಿಸಿ, ಧರಣಿ ನಡೆಸುವದಾದರೆ ಠಾಣೆಯಲ್ಲಿ ಈ ವಿಷಯವಾಗಿ ಅರ್ಜಿ ನೀಡಿ ನಂತರ ಧರಣಿ ನಡೆಸಿದರೆ ನಾವು ಸೂಕ್ತ ರಕ್ಷಣೆ ಒದಗಿಸುತ್ತೇವೆ ಎಂದು ತಿಳಿಸಿದ ನಂತರ, ಧರಣಿಯನ್ನು ನಿಲ್ಲಿಸಿದರು. ಠಾಣೆಯಲ್ಲಿ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ರಕ್ಷಣೆ ಒದಗಿಸುವಂತೆ ಅರ್ಜಿ ನೀಡಿದ ನಂತರ ಮತ್ತೆ ಧರಣಿ ನಡೆಸುವದಾಗಿ ಅವರು ತಿಳಿಸಿದರು. ಈ ಗಲಾಟೆ ಗೊಂದಲಗಳ ನಡುವೆ ಇಂದಿನ ಗ್ರಾಮ ಸಭೆಗೆ ತೆರೆಬಿದ್ದಿತು.

- ನಾಗರಾಜ ಶೆಟ್ಟಿ