*ಗೋಣಿಕೊಪ್ಪಲು, ಜೂ. 30: ನಕಲಿ ದಾಖಲೆ ಸೃಷ್ಟಿಸಿ ಹಣ ದುರುಪಯೋಗವಾಗಿಲ್ಲ. ಈ ಆರೋಪ ನಿರಾಧಾರ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಸ್ಪಷ್ಟೀಕರಣ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಶಿಕ್ಷಕರ ಸಂಘದ ನಿರ್ದೇಶಕರು ಪತ್ರಿಕಾಗೋಷ್ಠಿ ನಡೆಸಿ ಹಣ ದುರುಪಯೋಗದ ಆರೋಪ ಮಾಡಿರುವದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

2016 ರ ಆಗಸ್ಟ್ ತಿಂಗಳಲ್ಲಿ ಶಿಕ್ಷಕರ ವೇತನದಿಂದ ಸಂಘದ ಸದಸ್ಯತ್ವ ನವೀಕರಣದ ಶುಲ್ಕವನ್ನು ಸಂಘದ ಖಾತೆಗೆ ಜಮಾ ಮಾಡಲಾಗಿದೆ. ರಾಜ್ಯ ಸಂಘಕ್ಕೆ ಶೇ. 37.5, ಜಿಲ್ಲಾ ಸಂಘಕ್ಕೆ ಶೇ. 25, ತಾಲೂಕು ಸಂಘಕ್ಕೆ ಶೇ. 37.5 ಸದಸ್ಯತ್ವ ಶುಲ್ಕವನ್ನು ನೀಡಬೇಕು. ಆದರೆ ಕಾರ್ಯದರ್ಶಿ ಮತ್ತು ಖಜಾಂಚಿ ತಾಲೂಕು ಸಭೆ ಹಾಗೂ ಜಿಲ್ಲಾ ಸಭೆಯಲ್ಲಿ ಮನವಿ ಮಾಡಿದರೂ ಸಂಘದ ಚಟುವಟಿಕೆಯ ಬಗ್ಗೆ ಅಸಹಕಾರ ತೋರಿರುತ್ತಾರೆ. ಯಾವದೇ ಸಭೆಗಳಲ್ಲಿ ಭಾಗವಹಿಸದೆ ರಾಜ್ಯ ಹಾಗೂ ಜಿಲ್ಲಾ ಸಂಘಕ್ಕೆ ಪಾಲು ಹಣ ನೀಡಲು ಅಸಹಕಾರ ತೋರಿರುತ್ತಾರೆ. ಈ ಕಾರಣವನ್ನು ಮುಂದಿಟ್ಟು, ತಾಲೂಕು ಸಭೆಯಲ್ಲಿ ನಡಾವಳಿ ಮಾಡಿ ಜಿಲ್ಲಾಧ್ಯಕ್ಷರ ಅನುಮತಿಯೊಂದಿಗೆ ಬೈಲಾ 17.ಬಿ ಪ್ರಕಾರ ಖಜಾಂಚಿ ಬಿ.ಟಿ. ದೇವರಾಜು ಅವರನ್ನು ಆಯ್ಕೆ ಮಾಡಲಾಗಿದೆ. ನಿಯಮಾನುಸಾರ ಖರ್ಚು ವೆಚ್ಚದ ಮಾಹಿತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಖಜಾಂಚಿ ಬಿ.ಟಿ. ದೇವರಾಜು ಉಪಸ್ಥಿತರಿದ್ದರು.